
ಹಣ ಉಳಿಸಿಡುವುದು ಬಹಳ ಮುಖ್ಯ. ಆದರೆ, ಎಲ್ಲಿ ಉಳಿಸಿಡುತ್ತೀರಿ ಎಂಬುದೂ ಕೂಡ ಅಷ್ಟೇ ಮುಖ್ಯ. ಹಣ ಹೂಡಿಕೆಗೆ ಇವತ್ತು ನಾನಾ ಅವಕಾಶಗಳಿವೆ. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ರಿಯಲ್ ಎಸ್ಟೇಟ್ (Real Estate), ಚಿನ್ನ (Gold), ಷೇರು (share market), ಮ್ಯುಚುವಲ್ ಫಂಡ್ ಇತ್ಯಾದಿ ಹಲವು ಆಯ್ಕೆಗಳಿವೆ. ಈ ಪೈಕಿ ಎಫ್ಡಿ, ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಲ್ಲಿ ಹಣದುಬ್ಬರ ಮೀರಿಸಿ ಸಿಗುವ ಲಾಭ ಬಹಳ ಕಡಿಮೆ. ಇತರ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಯಾವುದು ಉತ್ತಮ?
ಚಿನ್ನ, ರಿಯಲ್ ಎಸ್ಟೇಟ್ ಮತ್ತು ಷೇರುಗಳು ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ್ದಾಗಿವೆ. 20 ವರ್ಷದ ಅವಧಿಯಲ್ಲಿ ಇವು ಎಷ್ಟು ಲಾಭ ತಂದಿವೆ?
2005ರಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ಸರಾಸರಿಯಾಗಿ 700 ರೂ ಇತ್ತು. ಇವತ್ತು 10,000 ರೂಗೆ ಏರಿದೆ. ಇದು ವಾರ್ಷಿಕವಾಗಿ ಶೇ. 14.22 ಸಿಎಜಿಆರ್ನಲ್ಲಿ ಬೆಳೆದಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ
ಷೇರು ಮಾರುಕಟ್ಟೆಯಲ್ಲಿ ಎರಡು ಪ್ರಧಾನ ಸೂಚ್ಯಂಕವೆಂದರೆ ನಿಫ್ಟಿ50 ಮತ್ತು ಸೆನ್ಸೆಕ್ಸ್. ಈ ಇಂಡೆಕ್ಸ್ಗಳಲ್ಲಿ 2005ರಲ್ಲಿ ಹೂಡಿಕೆ ಮಾಡಿದ್ದರೆ ಇವತ್ತು ಎಷ್ಟು ಲಾಭ ಸಿಗುತ್ತಿತ್ತು? ನಿಫ್ಟಿಯದ್ದೇ ಉದಾಹರಣೆ ಪಡೆದು ನೋಡೋಣ.
ನಿಫ್ಟಿ50 ಸೂಚ್ಯಂಕವು 2005ರ ಆರಂಭದಲ್ಲಿ 1,770 ರೂ ಇತ್ತು. ಇವತ್ತು ಅದರ ಮೌಲ್ಯ 24,891 ರೂ ಆಗಿದೆ. ಈ 20 ವರ್ಷದಲ್ಲಿ ಅದು ಶೇ. 14.31ರ ಸಿಎಜಿಆರ್ನಲ್ಲಿ ಬೆಳೆದಿದೆ. ಸೆನ್ಸೆಕ್ಸ್ ಸೂಚ್ಯಂಕವು ಇದೇ ಅವಧಿಯಲ್ಲಿ 6,679 ರೂನಿಂದ 81,688 ರೂಗೆ ಬೆಳೆದಿದೆ. ಇದರ ಸಿಎಜಿಆರ್ ಶೇ. 13.4ರಷ್ಟಿದೆ.
ರಿಯಲ್ ಎಸ್ಟೇಟ್ ಕೂಡ ಉತ್ತಮ ಹೂಡಿಕೆಗಳಲ್ಲಿ ಒಂದು. ಆದರೆ, ದೀರ್ಘಾವಧಿಯಲ್ಲಿ ಇದು ಎಷ್ಟು ಲಾಭ ತರುತ್ತದೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಬೆಂಗಳೂರು ದಕ್ಷಿಣ ಭಾಗದಲ್ಲಿ 2005ರಲ್ಲಿ ನಿವೇಶನದ ಸರಾಸರಿ ಬೆಲೆ ಚದರಡಿಗೆ 5,000 ರೂ ಇತ್ತು. ಇವತ್ತು ಅಲ್ಲಿ ಸುಮಾರು 22,000-28,000 ರೂ ಬೆಲೆ ಇದೆ. 20 ವರ್ಷ ಅವಧಿಯಲ್ಲಿ ರಿಯಲ್ ಎಸ್ಟೇಟ್ ಬೆಳೆದಿರುವುದು ಸುಮಾರು ಶೇ. 8ರ ಸಿಎಜಿಆರ್ನಲ್ಲಿ.
ಇದನ್ನೂ ಓದಿ: ಪಿಪಿಎಫ್ನಿಂದ ಹಿಡಿದು ಆರ್ಬಿಟ್ರೇಜ್ ಫಂಡ್ವರೆಗೆ; ಕಡಿಮೆ ರಿಸ್ಕ್ ಇರುವ ಹೂಡಿಕೆ ಆಯ್ಕೆಗಳಿವು
ರಿಯಲ್ ಎಸ್ಟೇಟ್ ಬಹಳ ಆಕರ್ಷಕ ಎನಿಸಿದರೂ ಹೂಡಿಕೆ ದೃಷ್ಟಿಯಿಂದ ತೀರಾ ದೊಡ್ಡ ಲಾಭ ತರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ 20 ವರ್ಷದಲ್ಲಿ ಇನ್ನೂ ಹೆಚ್ಚು ವೇಗವಾಗಿ ಬೆಳೆದಿರಬಹುದು. ಆದರೆ, ಷೇರು ಮತ್ತು ಚಿನ್ನಕ್ಕೆ ಹೋಲಿಸಿದರೆ ಅಷ್ಟೇನೂ ಲಾಭ ತಂದಿಲ್ಲ. ಜೊತೆಗೆ ಇದು ಲಿಕ್ವಿಡಿಟಿ ದೃಷ್ಟಿಯಿಂದಲೂ ಕಷ್ಟಕರ ಎನಿಸುತ್ತದೆ. ನಿಮಗೆ ಹಣ ಬೇಕೆಂದಾಗ ಮಾರಲು ಸಾಧ್ಯವಾಗುವುದಿಲ್ಲ. ಆದರೆ, ಮನೆ ಕಟ್ಟಿಸಿ ವಾಸಕ್ಕೆ ಇರಲು ನೀವು ಹೂಡಿಕೆ ಮಾಡಬಹುದು ಎಂದು ಮೇಲಿನ ಅಂಕಿ ಅಂಶ ಗಮನಿಸಿದಾಗ ಅನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Fri, 25 July 25