ನೀವು ಈಗ ಡೆಬಿಟ್ ಕಾರ್ಡ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡುವ ಅಗತ್ಯ ಇರುವುದಿಲ್ಲ. ಆಧಾರ್ ಮೂಲಕವೂ ಯುಪಿಐ ವೆರಿಫಿಕೇಶನ್ ಮಾಡಬಹುದು. ಗೂಗಲ್ ಪೇ ಇಂಥದ್ದೊಂದು ಸೌಲಭ್ಯ ಕಲ್ಪಿಸಿದೆ. ಗೂಗಲ್ ಪೇನಲ್ಲಿ ಗ್ರಾಹಕರು ಆಧಾರ್ ಕಾರ್ಡ್ ಮೂಲಕ ಯುಪಿಐಗೆ ನೊಂದಣಿ ಮಾಡಿಸಬಹುದು. ಈ ಫೀಚರ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಬೆಂಬಲಿಸುತ್ತದೆ.
ಗೂಗಲ್ ಪೇನಲ್ಲಿ ಈ ಹಿಂದೆ ಯುಪಿಐ ಆ್ಯಕ್ಟಿವೇಶನ್ಗೆ ಡೆಬಿಟ್ ಕಾರ್ಡ್ ಮಾತ್ರ ಕೇಳಲಾಗುತ್ತಿತ್ತು. ಈಗ ಆಧಾರ್ ಆಪ್ಷನ್ ಕೂಡ ಸೇರಿಸಲಾಗಿದೆ. ಆಧಾರ್ಗೆ ನೊಂದಾಯಿತವಾದ ಮೊಬೈಲ್ ನಂಬರ್, ಮತ್ತು ಬ್ಯಾಂಕ್ಗೆ ಜೋಡಿತವಾದ ಮೊಬೈಲ್ ನಂಬರ್ ಸಹಾಯದಿಂದ ಗ್ರಾಹಕರು ಯುಪಿಐ ಆ್ಯಕ್ಟಿವೇಟ್ ಮಾಡಬಹುದು. ಇಲ್ಲಿ ಬ್ಯಾಂಕ್ ಖಾತೆ ಮತ್ತು ಆಧಾರ್ಗೆ ಜೋಡಿತವಾದ ಮೊಬೈಲ್ ನಂಬರ್ ಒಂದೇ ಆಗಿರಬೇಕು.
ಗೂಗಲ್ ಪೇ ಗ್ರಾಹಕರು ತಮ್ಮ ಆಧಾರ್ ನಂಬರ್ನ ಮೊದಲ 6 ಅಂಕಿಗಳನ್ನು ನಮೂದಿಸಿದಾಗ ಯುಐಡಿಎಐ ಡಾಟಾಬೇಸ್ನಲ್ಲಿ ಆ ಮಾಹಿತಿ ಶೇಖರಣೆ ಆಗುತ್ತದೆ. ಈ ಆರು ನಂಬರ್ ನಮೂದಿಸಿದ ಬಳಿಕ ಯುಐಡಿಎಐ ಮತ್ತು ಬ್ಯಾಂಕ್ನಿಂದ ಒಟಿಪಿ ಬರುತ್ತದೆ. ಇದನ್ನು ಹಾಕಿದ ಬಳಿಕ ಗ್ರಾಹಕರ ಬ್ಯಾಂಕ್ನಿಂದ ಯುಪಿಐ ಸಕ್ರಿಯಗೊಳ್ಳುತ್ತದೆ. ಆ ಬಳಿಕ ಗ್ರಾಹಕರು ಯುಪಿಐ ಪಿನ್ ಸೆಟ್ ಮಾಡಬಹುದು.
ಇದನ್ನೂ ಓದಿ: Note Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ
ಗಮನಿಸಬೇಕಾದ ಸಂಗತಿ ಎಂದರೆ ಆಧಾರ್ ನಂಬರ್ನ ಮೊದಲ ಆರು ಅಂಕಿಗಳನ್ನು ಗೂಗಲ್ ಪೇ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಯುಐಡಿಎಐನಿಂದ ದೃಢೀಕರಣಕ್ಕಾಗಿ ಮಾತ್ರ ಅದರ ಬಳಕೆ ಆಗುತ್ತದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಬಹುತೇಕ ಜನರು ಆಧಾರ್ ನಂಬರ್ ಬಳಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆಧಾರ್ಗೆ ಮೊಬೈಲ್ ಸಂಖ್ಯೆಯನ್ನೂ ಜೋಡಿಸಿದ್ದಾರೆ. ಹೀಗಾಗಿ, ಯುಪಿಐ ಆ್ಯಕ್ಟಿವೇಶನ್ಗೆ ಆಧಾರ್ ಬಳಕೆ ಮಾಡುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಗೂಗಲ್ನ ಲೆಕ್ಕಾಚಾರ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ