ನಾವು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಾಗ ಕೆಲವೊಮ್ಮೆ ತಪ್ಪಾದ ಅಕೌಂಟ್ ನಂಬರ್ಗೆ (Money Transferred To Wrong Account) ಕಳುಹಿಸಿಬಿಡುವ ಸಾಧ್ಯತೆ ಇದೆ. ಇಂಥ ಹಲವಾರು ಪ್ರಕರಣಗಳು ಈ ಹಿಂದೆ ಆಗಿದ್ದಿದೆ. ಹೀಗೆ ತಪ್ಪಾಗಿ ಕಳುಹಿಸಿದ ಹಣವನ್ನು ವಾಪಸ್ ಪಡೆಯಲು ಜನರು ಹರಸಾಹಸ ಪಡುವುದುಂಟು. ಅಷ್ಟಾದರೂ ಹಣ ವಾಪಸ್ ಬರದೇ ಹತಾಶರಾಗಿರುವುದುಂಟು. ಬ್ಯಾಂಕನ್ನು ಸಂಪರ್ಕಿಸುವುದೋ, ಖಾತೆದಾರರನ್ನು ಸಂಪರ್ಕಿಸುವುದೋ ಏನೇ ಮಾಡಿದರೂ ಕೆಲವೊಮ್ಮೆ ಹಣ ಮರಳುವುದಿಲ್ಲ. ಎಸ್ಬಿಐನ ಗ್ರಾಹರೊಬ್ಬರು ಈ ಸಮಸ್ಯೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ‘ನಾನು ಬೇರೆ ಖಾತೆಯೊಂದಕ್ಕೆ ತಪ್ಪಿ ಹಣ ಕಳುಹಿಸಿದ್ದೆ. ಬ್ಯಾಂಕಿಗೆ ಎಲ್ಲಾ ವಿವರಗಳನ್ನು ಕೊಟ್ಟಿದ್ದೆ. ಆದರೂ ಕೂಡ ಹಣ ವಾಪಸಾತಿ ಬಗ್ಗೆ ಏನೂ ಮಾಹಿತಿ ನನಗೆ ಸಿಕ್ಕಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ರವಿ ಅಗರ್ವಾಲ್ ಎಂಬುವವರು ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವಿಚಾರದಲ್ಲಿ ಕೆಲವಿಷ್ಟು ಸಲಹೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ರೂಪದಲ್ಲಿ ಕೊಟ್ಟಿದೆ. ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಆದಾಗ ಏನು ಮಾಡಬೇಕು ಎಂಬ ವಿವರ ಇಲ್ಲಿದೆ….
ನೀವು ಒಂದು ವೇಳೆ ಬೇರೆ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣ ಕಳುಹಿಸಿದ್ದರೆ ಆಗ ನಿಮ್ಮ ಖಾತೆ ಇರುವ ಶಾಖಾ ಕಚೇರಿಯನ್ನು ಸಂಪರ್ಕಿಸಬೇಕು. ಬಳಿಕ ನೀವು ಹಣ ಕಳುಹಿಸಿದವರ ಖಾತೆಯ ಬ್ಯಾಂಕ್ ಅನ್ನು ಅದು ಸಂಪರ್ಕಿಸಿ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತದೆ.
ಬ್ಯಾಂಕ್ ಶಾಖೆಯಿಂದ ನಿಮ್ಮ ಹಣವನ್ನು ಮರಳಿ ಕೊಡಿಸಲು ಆಗಲಿಲ್ಲವೆಂದರೆ ನೀವು ಎಸ್ಬಿಐನ ಸಿಆರ್ಸಿಎಫ್ ಪೋರ್ಟಲ್ನಲ್ಲಿ ದೂರು ಸಲ್ಲಿಸಬಹುದು. ಪೋರ್ಟಲ್ ವಿಳಾಸ ಇಂತಿದೆ…
ನೀವು ಒಮ್ಮೆ ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅದಕ್ಕೆ ಬ್ಯಾಂಕ್ ಜವಾಬ್ದಾರವಾಗುವುದಿಲ್ಲ. ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖಾ ಕಚೇರಿಯನ್ನು ಸಂಪರ್ಕಿಸಿದರೆ ಅದು ಹಣ ವಾಪಸ್ ತರಲು ಯತ್ನಿಸಬಹುದೇ ಹೊರತು ಅದು ನಿಶ್ಚಿತವಾಗಿ ವಾಪಸ್ ಬರುತ್ತದೆಂದು ಖಾತ್ರಿ ಇಲ್ಲ. ನೀವು ಹಣ ಕಳುಹಿಸಿರುವ ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗೆ ಮನವಿ ಮಾಡಿ ಹಣ ವಾಪಸ್ ಪಡೆದುಕೊಳ್ಳುವ ಒಂದು ಮಾರ್ಗ ಇದೆ.
ಇದನ್ನೂ ಓದಿ: NPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?
ಬ್ಯಾಂಕ್ನ ಬ್ರ್ಯಾಂಚ್ನಿಂದಾಗಲೀ ಅಥವಾ ಡಿಜಿಟಲ್ ಅಗಲೀ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವಾಗ ಫಲಾನುಭವಿಯ (ಸ್ವೀಕೃತ ಖಾತೆದಾರ) ಹೆಸರನ್ನು ಕಡ್ಡಾಯವಾಗಿ ಬರೆಯಬೇಕು. ಆದರೆ, ಖಾತೆ ನಂಬರ್ಗೆ ಹೆಚ್ಚು ಅವಲಂಬನೆ ಇರುತ್ತದೆ. ಫಲಾನುಭವಿಯ ಹೆಸರನ್ನು ಅವರ ಬ್ಯಾಂಕ್ ಒಂದು ಮಾನದಂಡವಾಗಿ ಪರಿಗಣಿಸಬಹುದು ಅಷ್ಟೇ ಎಂದು ಅರ್ಬಿಐನ ನಿಯಮ ಹೇಳುತ್ತದೆ.
ಹೀಗಾಗಿ, ವಹಿವಾಟಿನಲ್ಲಿ ದಿಕ್ಕೆಟ್ಟ ನಿಮ್ಮ ಹಣಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ. ಬ್ಯಾಂಕುಗಳು ನಿಮ್ಮ ಹಣ ವಾಪಸ್ ಕೊಡಿಸಲು ಪ್ರಯತ್ನ ಪಡಬಹುದಾದರೂ ನಿಮಗೆ ಅವು ಖಾತ್ರಿ ಕೊಡಲಾರವು ಎಂಬುದು ಇಲ್ಲಿ ಮುಖ್ಯ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ