ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಅಕೌಂಟ್​ಗಳಿದ್ದರೆ ಏನು ಮಾಡಬೇಕು? ಇಲ್ಲಿದೆ ಒಂದು ಐಡಿಯಾ

|

Updated on: Apr 30, 2024 | 6:32 PM

Demat Account closure method: ಡೀಮೆಟೀರಿಯಲೈಸ್ಡ್ ಅಕೌಂಟ್ ಅಥವಾ ಡೀಮ್ಯಾಟ್ ಅಕೌಂಟ್ ಅನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಷೇರು ಹಿಡಿದಿಡಿಯಲು ಬಳಲಾಗುತ್ತದೆ. ಷೇರು ವಹಿವಾಟಿಗೆ ಡೀಮ್ಯಾಟ್ ಖಾತೆ ಅಗತ್ಯ ಇದೆ. ಈ ವೇಳೆ ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಖಾತೆ ರಚನೆಯಾಗಿರುವ ಸಾಧ್ಯತೆ ಇರುತ್ತದೆ. ನೀವು ಹೆಚ್ಚು ಬಳಸದಿರುವ ಮತ್ತು ಅನಗತ್ಯ ಎನಿಸುವ ಡೀಮ್ಯಾಟ್ ಖಾತೆಗಳನ್ನು ಮುಚ್ಚಬಹುದು. ಅದಕ್ಕೆ ಮುನ್ನ ನೀವು ಅದರಲ್ಲಿರುವ ಷೇರುಗಳನ್ನು ಇನ್ನೊಂದು ಸಕ್ರಿಯ ಡೀಮ್ಯಾಟ್ ಖಾತೆಗೆ ವರ್ಗಾವಣೆ ಮಾಡಬಹುದು. ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಅಕೌಂಟ್​ಗಳಿದ್ದರೆ ಏನು ಮಾಡಬೇಕು? ಇಲ್ಲಿದೆ ಒಂದು ಐಡಿಯಾ
ಷೇರು ಮಾರುಕಟ್ಟೆ
Follow us on

ಡಿಮ್ಯಾಟ್ ಖಾತೆಗಳನ್ನು ಷೇರು ಮಾರುಕಟ್ಟೆಯಲ್ಲಿ ವ್ಯವಹಾರಕ್ಕಾಗಿ ಬಳಸುವ ಒಂದು ಅಕೌಂಟ್. ಡೀ ಮೆಟೀರಿಯಲೈಸ್ಟ್ ಅಕೌಂಟ್ (Demat- Dematerialised Account) ಎನ್ನಲಾಗುವ ಈ ಖಾತೆಯಲ್ಲಿ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಮೊದಲಾದರೆ ಷೇರು ಪ್ರಮಾಣಪತ್ರಗಳನ್ನು (share certificate) ಷೇರುದಾರರಿಗೆ ನೀಡಲಾಗುತ್ತಿತ್ತು. ಈಗ ಎಲೆಕ್ಟ್ರಾನಿಕ್ ರೂಪದಲ್ಲಿ ಇವುಗಳನ್ನು ನೀಡಲಾಗುತ್ತದೆ. ಇಂಥವನ್ನು ಇಟ್ಟುಕೊಳ್ಳಲು ಡೀಮ್ಯಾಟ್ ಅಕೌಂಟ್ ಬಳಸಲಾಗುತ್ತದೆ. ಈಗ ಡೀಮ್ಯಾಟ್ ಅಕೌಂಟ್ ಅನ್ನು ಆನ್​ಲೈನ್​ನಲ್ಲಿ ತೆರೆಯುವುದು ಬಹಳ ಸುಲಭ. ಒಂದೊಂದು ಬ್ರೋಕರ್ ಬಳಿಯೂ ಪ್ರತ್ಯೇಕವಾಗಿ ಡೀಮ್ಯಾಟ್ ಖಾತೆ ತೆರೆಯಬೇಕಾಗುತ್ತದೆ. ಹೀಗಾಗಿ, ನಮ್ಮ ಬಳಿ ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆಗಳಿರುವ ಸಾಧ್ಯತೆ ಇರುತ್ತದೆ.

ಈ ಡೀಮ್ಯಾಟ್ ಖಾತೆಗಳಲ್ಲಿ ನಾವು ಅಪರೂಪಕ್ಕೆ ಬಳಸುವ ಖಾತೆಗಳೂ ಇರಬಹುದು. ಪ್ರತೀ ಡೀಮ್ಯಾಟ್ ಖಾತೆಗೂ ಕ್ರೆಡಿಟ್ ಕಾರ್ಡ್ ಸೇವೆ ರೀತಿ ವಾರ್ಷಿಕ ಶುಲ್ಕ ಇರುತ್ತದೆ. ಹೀಗಾಗಿ, ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಖಾತೆಗಳಿದ್ದರೆ ಹೆಚ್ಚು ವಾರ್ಷಿಕ ಶುಲ್ಕ ಪಾವತಿಸುತ್ತೇವೆ. ಹೆಚ್ಚು ಬಳಸದೇ ಇರುವ ಡೀಮ್ಯಾಟ್ ಖಾತೆಗೆ ವಾರ್ಷಿಕ ಶುಲ್ಕ ನೀಡುವುದು ಅನಗತ್ಯ ಎನಿಸುತ್ತದೆ. ಇಂಥ ನಿಷ್ಕ್ರಿಯ ಡಿಮ್ಯಾಟ್ ಖಾತೆಯನ್ನು ಮುಚ್ಚಬಹುದು.

ನಿಷ್ಕ್ರಿಯ ಡಿಮ್ಯಾಟ್ ಖಾತೆಯನ್ನು ಮುಚ್ಚುವ ಮುನ್ನ ನಿಮ್ಮ ಹೂಡಿಕೆಯನ್ನು ವರ್ಗಾಯಿಸುವುದು ಹೇಗೆ?

ನಿಷ್ಕ್ರಿಯ ಡೀಮ್ಯಾಟ್ ಖಾತೆಯನ್ನು ಮುಚ್ಚುವ ಮುನ್ನ ಅದರಲ್ಲಿರುವ ನಿಮ್ಮ ಷೇರುಗಳನ್ನು ಇನ್ನೊಂದು ಡಿಮ್ಯಾಟ್ ಖಾತೆಗೆ ವರ್ಗಾಯಿಸಿಕೊಳ್ಳಿ. ಇದನ್ನು ಆಫ್ ಮಾರ್ಕೆಟ್ ಷೇರು ವರ್ಗಾವಣೆ ವಿಧಾನದ ಮೂಲಕ ಮಾಡಬುದು. ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ ಅಥವಾ ಡಿಪಿಯಿಂದ ಡಿಐಎಸ್ ಅಥವಾ ಡೆಲಿವರಿ ಇನ್ಸ್​ಟ್ರಕ್ಷನ್ ಸ್ಲಿಪ್ ಎನ್ನುವ ಫಾರ್ಮ್ ಅನ್ನು ಭರ್ತಿ ಮಾಡಿರಿ.

ಇದನ್ನೂ ಓದಿ: ಪರ್ಸನಲ್ ಲೋನ್​ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು

ಈ ಫಾರ್ಮ್​ನಲ್ಲಿ ನೀವು ಷೇರುಗಳನ್ನು ಹೊರಕ್ಕೆ ರವಾನೆ ಮಾಡಬೇಕೆಂದಿರುವ ಡೀಮ್ಯಾಟ್ ಖಾತೆ ಹಾಗೂ ಯಾವ ಖಾತೆಗೆ ಅವನ್ನು ವರ್ಗಾವಣೆ ಮಾಡಬೇಕೆಂದಿರುವಿರಿ ಆ ಡೀಮ್ಯಾಟ್ ಖಾತೆಯ ವಿವರವನ್ನು ನೀಡಬೇಕು. ಡಿಪಿ ಐಡಿ, ಐಎಸ್​ಐಎನ್ ಇತ್ಯಾದಿ ಮಾಹಿತಿಯೂ ಇದರಲ್ಲಿರಬೇಕು

ಇಲ್ಲಿ ಡೆಪಾಸಿಟರಿ ಪಾರ್ಟಿಸಿಪೆಂಟ್ ಎಂದರೆ ನಿಮಗೆ ಡೀಮ್ಯಾಟ್ ಅಕೌಂಟ್ ನೀಡಿದ ಮತ್ತು ಷೇರು ವಹಿವಾಟಿಗೆ ಏಜೆಂಟ್ ಆಗಿ ಕೆಲಸ ಮಾಡುವ ಸಂಸ್ಥೆ. ಶೇರ್​ಖಾನ್, ಝೀರೋಧ, ಏಂಜೆಲ್ ಬ್ರೋಕಿಂಗ್, ಮೋತಿಲಾಲ್ ಓಸ್ವಾಲ್, ಪೇಟಿಎಂ ಮನಿ ಇತ್ಯಾದಿ ಸಂಸ್ಥೆಗಳು ಡಿಪಿಗಳಾಗಿರುತ್ತವೆ. ಈ ಡಿಐಎಸ್ ಸ್ಲಿಪ್ ಅನ್ನು ಸಲ್ಲಿಸಿದ ಬಳಿಕ ಡೆಪಾಸಿಟರಿ ಪಾರ್ಟಿಸಿಪೆಂಟ್ ಸಂಸ್ಥೆ ಪರಿಶೀಲನೆ ನಡೆಸಿ ನೀವು ತಿಳಿಸಿದ ಡೀಮ್ಯಾಟ್ ಖಾತೆಗೆ ಷೇರು ವರ್ಗಾವಣೆ ಮಾಡುತ್ತದೆ. ಈ ಷೇರು ವರ್ಗಾವಣೆಗೆ ಯಾವ ತೆರಿಗೆಯೂ ಇರುವುದಿಲ್ಲ.

ಗಮನಿಸಿ, ನೀವು ಷೇರುಗಳನ್ನು ಹೊರಗೆ ಸಾಗಿಸುವ ಡಿಮ್ಯಾಟ್ ಖಾತೆಯಲ್ಲಿ ಬ್ರೋಕರ್ ಅಥವಾ ಡಿಪಿಗೆ ಯಾವುದೇ ಬಾಕಿ ಉಳಿಸಿಕೊಂಡಿದ್ದರೆ ಷೇರು ವರ್ಗಾವಣೆ ಆಗುವುದಿಲ್ಲ.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ದೊಡ್ಡಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗೋಪಾಯ

ಡಿಮ್ಯಾಟ್ ಖಾತೆ ಮುಚ್ಚುವುದು ಹೇಗೆ?

ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್​ನಿಂದ ಕ್ಲೋಶರ್ ಫಾರ್ಮ್ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಈ ಮೂಲಕ ಡಿಮ್ಯಾಟ್ ಖಾತೆಯನ್ನು ಮುಚ್ಚಬಹುದು. ಇಲ್ಲಿಯೂ ಕೂಡ ನೀವು ಬ್ರೋಕರ್​ಗೆ ಯಾವುದೇ ಬಾಕಿ ಹಣ ಉಳಿಸಿಕೊಂಡಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮತ್ತು ಅದರಲ್ಲಿರುವ ನಿಮ್ಮ ಎಲ್ಲಾ ಷೇರುಗಳನ್ನು ಹಿಂಪಡೆದುಕೊಂಡಿದ್ದೀರಿ ಎಂಬುದನ್ನೂ ಖಾತ್ರಿಪಡಿಸಿಕೊಳ್ಳಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ