ಎನ್ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ
National Pension System: ನ್ಯಾಷನಲ್ ಪೆನ್ಷನ್ ಸ್ಕೀಮ್ನ ಖಾತೆಗೆ ಲಾಗಿನ್ ಆಗಲು ಯೂಸರ್ ಐಡಿ ಪಾಸ್ವರ್ಡ್ ಜೊತೆಗೆ ಆಧಾರ್ ಮೂಲಕ ದೃಢೀಕರಣ ಕೂಡ ನೀಡುವ ಒಂದು ಡಬಲ್ ಲೇಯರ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಪಿಎಫ್ಆರ್ಡಿಎ ರೂಪಿಸಿದೆ. 2024ರ ಏಪ್ರಿಲ್ 1ರಿಂದ ಈ ಹೊಸ ಕ್ರಮ ಜಾರಿಗೆ ಬರುತ್ತದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ಅಥವಾ ಎನ್ಪಿಎಸ್ ನಿವೃತ್ತಿ ನಂತರದ ಭದ್ರತೆಗೆಂದು ಸರ್ಕಾರ ರೂಪಿಸಿರುವ ಸ್ಕೀಮ್. ಇದರಲ್ಲಿ 18ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿಗಳು ಹೂಡಿಕೆ ಮಾಡಬಹುದು.
ನ್ಯಾಷನಲ್ ಪೆನ್ಷನ್ ಸಿಸ್ಟಮ್ನ ಖಾತೆಗೆ ಹೆಚ್ಚು ಭದ್ರತೆ ಕೊಡಲು ಪೆನ್ಷನ್ ಫಂಡ್ ಪ್ರಾಧಿಕಾರವಾದ ಪಿಎಫ್ಆರ್ಡಿಎ ಕ್ರಮ ಕೈಗೊಂಡಿದೆ. ಎನ್ಪಿಎಸ್ ಅಕೌಂಟ್ಗೆ ಲಾಗಿನ್ ಆಗಲು ಪಾಸ್ವರ್ಡ್ ಜೊತೆಗೆ ಆಧಾರ್ ದೃಢೀಕರಣದ (Aadhaar authentication) ಅವಶ್ಯಕತೆಯೂ ಇರಲಿದೆ. ಈ ಡಬಲ್ ಸೆಕ್ಯೂರಿಟಿ (2-factor authentication) ವ್ಯವಸ್ಥೆ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಎನ್ಪಿಎಸ್ನ ಸಿಆರ್ಎ ಸಿಸ್ಟಂಗೆ ಲಾಗಿನ್ ಆಗುವ ಬಳಕೆದಾರರು ಎರಡು ಎಳೆಯ ಭದ್ರತಾ ವ್ಯವಸ್ಥೆ ದಾಟಬೇಕಾಗುತ್ತದೆ. ಪಿಎಫ್ಆರ್ಡಿಎ ಮಾರ್ಚ್ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಇದನ್ನು ತಿಳಿಸಲಾಗಿದೆ.
ಎನ್ಪಿಎಸ್ನ ಸಿಆರ್ಎ ಸಿಸ್ಟಂಗೆ ಅಕ್ರಮವಾಗಿ ಪ್ರವೇಶ ಮಾಡುವ ಸಾಧ್ಯತೆಯನ್ನು ತಪ್ಪಿಸಲು ಈ ಡಬಲ್ ಸೆಕ್ಯೂರಿಟಿ ಎಳೆಯನ್ನು ರೂಪಿಸಲಾಗಿದೆ. ಇದರಿಂದ ಎನ್ಪಿಎಸ್ ವಹಿವಾಟುಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಎನ್ಪಿಎಸ್ ಖಾತೆಗೆ ಲಾಗಿನ್ ಆಗುವ ಬಳಕೆದಾರರು ಪಾಸ್ವರ್ಡ್ ಜೊತೆಗೆ ತಮ್ಮ ಆಧಾರ್ಗೆ ಬರುವ ಒಟಿಪಿಯನ್ನೂ ಹಾಕಿ ಲಾಗಿನ್ ಆಗಬೇಕಾಗುತ್ತದೆ.
ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್ನಲ್ಲಿ
ಏಪ್ರಿಲ್ 1ರಿಂದ ಎನ್ಪಿಎಸ್ನ ಸಿಆರ್ಎಗೆ ಲಾಗಿನ್ ಆಗುವ ಕ್ರಮ
- ಮೊದಲಿಗೆ ಎನ್ಪಿಎಸ್ನ ವೆಬ್ಸೈಟ್ಗೆ ಹೋಗಿ; ಅದರ ವಿಳಾಸ: enps.nsdl.com/eNPS/NationalPensionSystem.html
- ಇಲ್ಲಿ PRAIN / IPIN ಟ್ಯಾಬ್ ಕ್ಲಿಕ್ ಮಾಡಿ.
- ತೆರೆದುಕೊಳ್ಳುವ ಹೊಸ ವಿಂಡೋದಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ
- ಕ್ಯಾಪ್ಚಾ ಹಾಕಿರಿ
- ಆಧಾರ್ ದೃಢೀಕರಣ ಕೇಳಲಾಗುತ್ತದೆ.
- ಆಧಾರ್ಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್ಗೆ ಬಂದಿರುವ ಒಟಿಪಿಯನ್ನು ಇಲ್ಲಿ ಹಾಕಿ.
- ಈಗ ನಿಮ್ಮ ಎನ್ಪಿಎಸ್ ಖಾತೆ ತೆರೆಯುತ್ತದೆ.
ಇದು 2024ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಈಗ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಬಹುದು.
ಏನಿದು ನ್ಯಾಷನಲ್ ಪೆನ್ಷನ್ ಸ್ಕೀಮ್ ಯೋಜನೆ?
ಇದು ಪ್ರಾವಿಡೆಂಟ್ ಫಂಡ್ ರೀತಿ ನಿವೃತ್ತಿ ಕಾಲದ ಭದ್ರತೆಗೆಂದು ಇರುವ ಯೋಜನೆ. ಯಾರು ಬೇಕಾದರೂ ನ್ಯಾಷನಲ್ ಪೆನ್ಷನ್ ಸ್ಕೀಮ್ ಪಡೆಯಬಹುದು. ಮೊದಲಿಗೆ ಇದು ಸರ್ಕಾರಿ ನೌಕರರಿಗೆ ಸೀಮಿತವಾಗಿತ್ತು. ಈಗ ಎಲ್ಲರಿಗೂ ಇದು ಲಭ್ಯ ಇದೆ. 18ರಿಂದ 70 ವರ್ಷದೊಳಗಿನ ಭಾರತೀಯ ಪ್ರಜೆಗಳು ಎನ್ಪಿಎಸ್ ಅಕೌಂಟ್ ತೆರೆಯಬಹುದು.
- ಆನ್ಲೈನ್ನಲ್ಲೇ ಎನ್ಪಿಎಸ್ ಖಾತೆ ತೆರೆಯಬಹುದಾಗಿದೆ. ವಿಳಾಸ: enps.nsdl.com/eNPS/NationalPensionSystem.html
- ಇಲ್ಲಿ ಹೋದರೆ ನ್ಯಾಷನಲ್ ಪೆನ್ಷನ್ ಸ್ಕೀಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
- ಇಲ್ಲಿ ನಿಮ್ಮ ಪ್ಯಾನ್ ನಂಬರ್, ಮೊಬೈಲ್ ನಂಬರ್, ಜನ್ಮದಿನಾಂಕ ನಮೂದಿಸಿ ಸಲ್ಲಿಸಬೇಕು.
- ಬಳಿಕ ನಿಮ್ಮ ಆಧಾರ್ ನಂಬರ್ ಹಾಕಬೇಕು.
- ಆಧಾರ್ನಲ್ಲಿ ನೊಂದಾಯಿತವಾದ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿದರೆ ಪಿಆರ್ಎನ್ ಅಥವಾ ಪ್ರಾಣ್ ಐಡಿ ನಿಮಗೆ ಸಿಗುತ್ತದೆ.
- ಇದನ್ನು ಬಳಸಿ ನೀವು ಎನ್ಪಿಎಸ್ ಖಾತೆ ತೆರೆಯಬಹುದು.
ಇದನ್ನೂ ಓದಿ: ಇಪಿಎಫ್ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್
ಎನ್ಪಿಎಸ್ನ ಅನುಕೂಲತೆಗಳು
ಎನ್ಪಿಎಸ್ ಈಕ್ವಿಟಿ ಫಂಡ್ಗಳಿಗೆ ಲಿಂಕ್ ಆಗಿರುತ್ತವೆ. ಅಂದರೆ ನಿಮ್ಮ ಹಣ ಷೇರುಮಾರುಕಟ್ಟೆಯ ಗತಿಗೆ ತಕ್ಕಂತೆ ಬೆಳೆಯುತ್ತದೆ. ಟಾಟಾ, ಐಸಿಐಸಿಐ, ಯುಪಿಐ ಇತ್ಯಾದಿ ಹಲವಾರು ಪೆನ್ಷನ್ ಫಂಡ್ ಮ್ಯಾನೇಜರ್ಗಳಿದ್ದು ನಿಮ್ಮ ಹಣವನ್ನು ನಿರ್ವಹಿಸುತ್ತವೆ. ಕೆಲ ಫಂಡ್ಗಳು ಒಂದು ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಆದಾಯ ತಂದಿವೆ. ನೀವು ಇಚ್ಛಿಸಿದಲ್ಲಿ ನಿಮ್ಮ ಹಣವನ್ನು ಬೇರೆ ಪೆನ್ಷನ್ ಫಂಡ್ ಮ್ಯಾನೇಜರ್ಗೆ ವರ್ಗಾಯಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ