SBI vs Post Office FD: ಪೋಸ್ಟ್ ಆಫೀಸ್​ಗಿಂತ ಉತ್ತಮವಾಗಿದೆಯಾ ಎಸ್​ಬಿಐ ಎಫ್​ಡಿ ಯೋಜನೆ? ಇಲ್ಲಿದೆ ಒಂದು ಹೋಲಿಕೆ

Fixed Deposit Rate Comparison: ಬ್ಯಾಂಕುಗಳ ಎಫ್​ಡಿ ದರಗಳಿಗೆ ಪೋಸ್ಟ್ ಆಫೀಸ್ ಎಫ್​ಡಿಗಳು ಪೈಪೋಟಿ ನಡೆಸುವಷ್ಟು ಆಕರ್ಷಕ ಎನಿಸಿವೆ. ಅಂಚೆ ಕಚೇರಿಯಲ್ಲಿನ ಎಫ್​ಡಿ ಯೋಜನೆಗಳಿಂದ ಇನ್ನೂ ಹಲವು ಹೆಚ್ಚುವರಿ ಪ್ರಯೋಜನಗಳುಂಟು.

SBI vs Post Office FD: ಪೋಸ್ಟ್ ಆಫೀಸ್​ಗಿಂತ ಉತ್ತಮವಾಗಿದೆಯಾ ಎಸ್​ಬಿಐ ಎಫ್​ಡಿ ಯೋಜನೆ? ಇಲ್ಲಿದೆ ಒಂದು ಹೋಲಿಕೆ
ಎಸ್​ಬಿಐ

Updated on: Apr 24, 2023 | 1:52 PM

ಮುಖ್ಯಾಂಶಗಳು

  • ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಎಫ್​ಡಿ ದರದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲ. ಎರಡರಲ್ಲೂ ಉತ್ತಮ ಬಡ್ಡಿ ಸಿಗುತ್ತದೆ.
  • ಅಂಚೆ ಕಚೇರಿಯಲ್ಲಿನ ಎಫ್​ಡಿಗಳ ಅವಧಿ 1 ವರ್ಷದಿಂದ ಅರಂಭವಾಗಿ 5 ವರ್ಷದವರೆಗೆ ಇದೆ.
  • ಎಸ್​ಬಿಐ ಬ್ಯಾಂಕಲ್ಲಿ ಎಫ್​ಡಿಯನ್ನು 7 ದಿನಗಳಿಂದ ಆರಂಭಿಸಿ 10 ವರ್ಷದವರೆಗೂ ಪಡೆಯಬಹುದು. ಬಡ್ಡಿ ದರ ಶೇ. 7.6ರವರೆಗೂ ಇದೆ.

ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್​ಗಳು (Term Deposits) ಹಣ ಉಳಿತಾಯಕ್ಕೆ ಪ್ರಮುಖ ಸಾಧನಗಳೆನಿಸಿವೆ. ಈಗಂತೂ ವರ್ಷಕ್ಕೆ ಶೇ. 8ರವರೆಗೂ ವಾರ್ಷಿಕ ಬಡ್ಡಿ ತಂದುಕೊಡುತ್ತವೆ ಬಹುತೇಕ ಎಫ್​ಡಿ ಯೋಜನೆಗಳು. ಕಮರ್ಷಿಯಲ್ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಜನರು ಇರಿಸುವುದು ಸಾಮಾನ್ಯ. ಆರ್​ಬಿಐ ರೆಪೋ ದರಗಳನ್ನು (Repo Rate) ಏರಿಕೆ ಮಾಡಿದ ಬಳಿಕ ಬ್ಯಾಂಕುಗಳು ಎಫ್​ಡಿ ದರಗಳನ್ನು ಗಮನಾರ್ಹ ಎನಿಸುವ ಮಟ್ಟಕ್ಕೆ ಹೆಚ್ಚಿಸಿವೆ. ಹಾಗೆಯೇ, ಅಂಚೆ ಕಚೇರಿಯ ಎಫ್​ಡಿ ಯೋಜನೆಗಳೂ (Post Office FD Schemes) ಈಗ ಜನಪ್ರಿಯವಾಗತೊಡಗಿವೆ. ಬ್ಯಾಂಕುಗಳ ಎಫ್​ಡಿ ದರಗಳಿಗೆ ಪೋಸ್ಟ್ ಆಫೀಸ್ ಎಫ್​ಡಿಗಳು ಪೈಪೋಟಿ ನಡೆಸುವಷ್ಟು ಆಕರ್ಷಕ ಎನಿಸಿವೆ. ಅಂಚೆ ಕಚೇರಿಯಲ್ಲಿನ ಎಫ್​ಡಿ ಯೋಜನೆಗಳಿಂದ ಇನ್ನೂ ಹಲವು ಹೆಚ್ಚುವರಿ ಪ್ರಯೋಜನಗಳುಂಟು. ಹೀಗಾಗಿ, ಬಹಳ ಮಂದಿ ಎಫ್​ಡಿ ಇಡಲು ಅಂಚೆ ಕಚೇರಿ ಬಳಿ ಎಡತಾಕುವುದಿದೆ. ಇದೇ ವೇಳೆ, ಎಸ್​ಬಿಐನ ಎಫ್​ಡಿ ಸ್ಕೀಮ್​ಗಳು (SBI FD Schemes) ಬಹಳ ಬೇಡಿಕೆ ಪಡೆದುಕೊಳ್ಳುತ್ತಿವೆ.

ಎಫ್​ಡಿಗೆ ಅಂಚೆ ಕಚೇರಿಯೋ, ಎಸ್​ಬಿಐಯೋ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10 ವರ್ಷದವರೆಗೂ ನಿಶ್ಚಿತ ಠೇವಣಿ ಇರಿಸಬಹುದು. ವಾರ್ಷಿಕ ಶೇ. 7ರವರೆಗೂ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ. ಅಮೃತ ಕಳಶ ಸ್ಕೀಮ್​ನಲ್ಲಿ 400 ದಿನಗಳ ನಿಶ್ಚಿತ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ

ಅಂಚೆ ಕಚೇರಿಯ ನಿಶ್ಚಿತ ಠೇವಣಿಗಳಿಗೆ ಶೇ. 6.8ರಿಂದ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇಲ್ಲಿ ಹಿರಿಯ ನಾಗರಿಕರಿಗೂ ಇತರರಿಗೂ ಬಡ್ಡಿಯಲ್ಲಿ ವ್ಯತ್ಯಾಸ ಇಲ್ಲ. ಅಂಚೆ ಕಚೇರಿಯ ಎಫ್​ಡಿಗಳ ಅವಧಿಯಲ್ಲಿ ಹೆಚ್ಚು ಅಯ್ಕೆಗಳಿಲ್ಲ. ಬ್ಯಾಂಕುಗಳಲ್ಲಾದರೆ ಎಫ್​ಡಿಯನ್ನು 7 ದಿನಗಳ ಅವಧಿಯಿಂದ ಆರಂಭಿಸಬಹುದು. 10 ವರ್ಷದಲ್ಲಿ ಯಾವ ಅವಧಿಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಬೇರೆ ಬೇರೆ ಅವಧಿಗೆ ಬೇರೆ ಬೇರೆ ಬಡ್ಡಿ ದರಗಳು ಅನ್ವಯ ಆಗುತ್ತವೆ.

ಅಂಚೆ ಕಚೇರಿ ಎಫ್​ಡಿಗಳು 1, 2, 3 ಮತ್ತು 5 ವರ್ಷಗಳ ಅವಧಿಯದ್ದು ಮಾತ್ರವಾಗಿರುತ್ತವೆ. ಆದರೆ, ಠೇವಣಿ ಇರಿಸಿ 6 ತಿಂಗಳ ಬಳಿಕ ಅಂಚೆ ಕಚೇರಿಯಲ್ಲಿ ಠೇವಣಿ ಹಿಂಪಡೆಯಲು ಸಾಧ್ಯ. ಒಂದು ವರ್ಷದೊಳಗೆ ನೀವು ಠೇವಣಿ ಹಿಂಪಡೆದರೆ ದಂಡ ವಿಧಿಸಲಾಗುವುದಿಲ್ಲ. ಬದಲಾಗಿ ಉಳಿತಾಯ ಖಾತೆಗೆ ನೀಡುವ ಬಡ್ಡಿಯನ್ನು ಎಫ್​ಡಿ ಮೊತ್ತಕ್ಕೆ ನೀಡಲಾಗುತ್ತದೆ. ಎಸ್​ಬಿಐನ ಎಫ್​ಡಿಯನ್ನೂ ಅವಧಿಗೆ ಮುನ್ನ ಹಿಂಪಡೆಯಬಹುದು. ಆದರೆ, ದಂಡ ಹಾಕಲಾಗುತ್ತದೆ.

ಇದನ್ನೂ ಓದಿ: FD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ

ಅಲ್ಪಾವಧಿಯ ಠೇವಣಿಯಾದರೆ ಎಸ್​ಬಿಐ ಎಫ್​ಡಿ ಉತ್ತಮ ಆಯ್ಕೆಯಾ?

ಎಫ್​ಡಿ ವಿಚಾರದಲ್ಲಿ ಎಸ್​ಬಿಐ ಮತ್ತು ಅಂಚೆ ಕಚೇರಿ ಸ್ಕೀಮ್​ಗಳೆರಡೂ ಬಹುತೇಕ ಸಮ ನಿಲ್ಲುತ್ತವೆ. ಎರಡೂ ಕೂಡ ಸರ್ಕಾರೀ ಸಂಸ್ಥೆಗಳೇ ಆಗಿವೆ. ಹೀಗಾಗಿ, ಠೇವಣಿ ಹಣ ಮಾಯವಾಗುತ್ತದೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ, ತಜ್ಞರ ಲೆಕ್ಕಾಚಾರದ ಪ್ರಕಾರ ನೀವು ಅಲ್ಪಾವಧಿಗೆ ಎಫ್​ಡಿ ಮಾಡುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಆಯ್ಕೆ ಆಗಬಹುದು.

ಹೆಚ್ಚು ವರ್ಷಗಳವರೆಗೆ ಎಫ್​ಡಿ ಇಡುವುದಾದರೆ ಬಡ್ಡಿ ದರಗಳನ್ನು ಲೆಕ್ಕ ಹಾಕಿ ನಿರ್ಧರಿಸಬಹುದು. ಹಾಗೆಯೇ, ಎಸ್​ಬಿಐ ಮತ್ತು ಪೋಸ್ಟ್ ಆಫೀಸ್​ನ ಎಫ್​ಡಿಗಳು ತೆರಿಗೆ ಉಳಿತಾಯಕ್ಕೆ ಸಹಕಾರಿ ಆಗಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Mon, 24 April 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us