Bank Deposits: ಅಧಿಕ ಬಡ್ಡಿ ಕೊಡುವ ಬ್ಯಾಂಕ್​ಗಳಲ್ಲಿ ಹಣ ಇರಿಸಲು ಭಯವೇ? ಆರ್​ಬಿಐ ನಿಯಮ ತಿಳಿದಿರಿ; ಅಪಾಯ ತಪ್ಪಿಸಲು ಈ ಉಪಾಯ ಮಾಡಿ

|

Updated on: May 08, 2023 | 10:57 AM

RBI Rules On Bank Deposits: ಹಲವು ಸಹಕಾರಿ ಬ್ಯಾಂಕುಗಳು ನಿಶ್ಚಿತ ಠೇವಣಿಗಳಿಗೆ ಅತ್ಯುತ್ತಮ ಎನಿಸುವಷ್ಟು ಬಡ್ಡಿ ಆಫರ್ ಮಾಡುತ್ತವೆ. ಆದರೆ, ಇತ್ತೀಚೆಗೆ ಕೆಲ ಸಹಕಾರಿ ಬ್ಯಾಂಕುಗಳು ನಮ್ಮ ಕಣ್ಮುಂದೆ ದಿವಾಳಿಯಾಗಿರುವುದನ್ನು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಯಾರಿಗಾದರೂ ಬ್ಯಾಂಕುಗಳಲ್ಲಿ ಹೆಚ್ಚು ದುಡ್ಡು ಇಡಲು ಭಯವಾಗಬಹುದು.

Bank Deposits: ಅಧಿಕ ಬಡ್ಡಿ ಕೊಡುವ ಬ್ಯಾಂಕ್​ಗಳಲ್ಲಿ ಹಣ ಇರಿಸಲು ಭಯವೇ? ಆರ್​ಬಿಐ ನಿಯಮ ತಿಳಿದಿರಿ; ಅಪಾಯ ತಪ್ಪಿಸಲು ಈ ಉಪಾಯ ಮಾಡಿ
ಆರ್​ಬಿಐ
Follow us on

ಉಳಿತಾಯದ ಹಣವನ್ನು ಹೂಡಿಕೆ ಮಾಡಿ ಬೆಳೆಸುವಂತಹ ಸ್ಕೀಮ್​ಗಳಲ್ಲಿ ಎಫ್​ಡಿ (Fixed Deposits) ಬಹಳ ಜನಪ್ರಿಯವಾದುದು. ಜನರು ತೀರಾ ಸಾಮಾನ್ಯವಾಗಿ ಬಳಸುವ ಮತ್ತು ಬಹಳ ಸರಳ ಹಾಗೂ ಸುಲಭ ಹೂಡಿಕೆ ಮಾರ್ಗವಾಗಿಯೂ ನಿಶ್ಚಿತ ಠೇವಣಿಗಳು ಜನಪ್ರಿಯವಾಗಿವೆ. ಕಳೆದ ಒಂದು ವರ್ಷದಿಂದೀಚೆ ಅರ್​ಬಿಐನ ರೆಪೋ ದರ ಏರಿಕೆಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಎಫ್​ಡಿ ದರಗಳೂ ತಕ್ಕಮಟ್ಟಿಗೆ ಹೆಚ್ಚಿವೆ. ಕೆಲ ಸಹಕಾರಿ ಬ್ಯಾಂಕುಗಳಂತೂ ಶೇ. 10ರ ಸಮೀಪದವರೆಗೂ ಎಫ್​ಡಿಗಳಿಗೆ ಬಡ್ಡಿ ಕೊಡುತ್ತವೆ. ಬಹುತೇಕ ಕಮರ್ಷಿಯಲ್ ಬ್ಯಾಂಕುಗಳು ಶೇ. 8ರವರೆಗೂ ಬಡ್ಡಿ ಆಫರ್ ಮಾಡುತ್ತವೆ. ಹಿರಿಯ ನಾಗರಿಕರ ನಿಶ್ಚಿತ ಠೇವಣಿಗಳಿಗೆ ಶೇ. 9ರ ಆಸುಪಾಸಿನಲ್ಲಿ ಬಡ್ಡಿ ಸಿಗುತ್ತದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ (Suryoday Small Finance Bank) ಹಿರಿಯ ನಾಗರಿಕರ 5 ವರ್ಷದ ಅವಧಿಯ ನಿಶ್ಚಿತ ಠೇವಣಿಗೆ ಶೇ. 9.6ರಷ್ಟು ಬಡ್ಡಿ ಸಿಗುತ್ತದೆ.

ಸೂರ್ಯೋದಯ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರು ಇಡುವ ಠೇವಣಿ 5 ವರ್ಷದಲ್ಲಿ ಎಷ್ಟು ಬೆಳೆಯುತ್ತದೆ?

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 5 ವರ್ಷ ಅವಧಿಗೆ ಇಡುವ ಠೇವಣಿಗಳಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 9.6ರಷ್ಟು ಬಡ್ಡಿ ಸಿಗುತ್ತದೆ. ಇತರರ 5 ವರ್ಷದ ಠೇವಣಿಗಳಿಗೆ ಶೇ. 9.1ರಷ್ಟು ಬಡ್ಡಿ ಕೊಡುತ್ತದೆ ಸೂರ್ಯೋದಯ್ ಬ್ಯಾಂಕ್. ಹಿರಿಯ ನಾಗರಿಕರು ಎಸ್​ಎಸ್​ಎಫ್​ಬಿಯಲ್ಲಿ 3 ಲಕ್ಷ ರೂ ಹಣವನ್ನು 5 ವರ್ಷಕ್ಕೆ ಠೇವಣಿ ಇರಿಸಿದರೆ, 4.82 ಲಕ್ಷ ರೂಗೆ ಬೆಳೆಯುತ್ತದೆ.

ಇದನ್ನೂ ಓದಿ: Best FD Rates: ಮ್ಯೂಚುವಲ್ ಫಂಡ್​ನಂತೆ ಭರ್ಜರಿ ಲಾಭ ಕೊಡುತ್ತೆ ಸೂರ್ಯೋದಯ್ ಬ್ಯಾಂಕ್​ನ ಎಫ್​ಡಿ; ನಿಶ್ಚಿತ ಠೇವಣಿಗೆ ಶೇ. 9.6ರವರೆಗೂ ಬಡ್ಡಿ

ಬ್ಯಾಂಕ್​ನಲ್ಲಿ ಠೇವಣಿ ಇಡಲು ಭಯವೇ? ಆರ್​ಬಿಐ ನಿಯಮ ತಿಳಿದಿರಿ

ಈಗ ಬಹಳಷ್ಟು ಬ್ಯಾಂಕುಗಳು ದಿವಾಳಿಯಾಗುವುದನ್ನು ನೋಡಿದ್ದೇವೆ. ಅತ್ಯಧಿಕ ಬಡ್ಡಿ ಕೊಡುವ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ನಮ್ಮ ಸಂಪಾದನೆಯ ಹಣವನ್ನೆಲ್ಲಾ ಎಫ್​ಡಿ ಇಟ್ಟು, ಆ ಬ್ಯಾಂಕ್ ಮುಚ್ಚಿಹೋದರೆ ಗತಿ ಏನಪ್ಪಾ ಎಂದು ಯಾರಾದರೂ ಯೋಚಿಸಿಯಾರು. ಯಾವುದೇ ಒಂದು ಬ್ಯಾಂಕ್ ಅಷ್ಟು ಸುಲಭಕ್ಕೆ ಮುಚ್ಚಿಹೋಗುವುದಿಲ್ಲ. ರಸ್ತೆಯಲ್ಲಿ ಅಪಘಾತ ಸಂಭವಿಸುತ್ತವೆ ಎಂದು ವಾಹನ ಓಡಿಸುವುದನ್ನೇ ಬಿಡಲು ಆಗುತ್ತಾ? ನಮಗೆ ಸಾಧ್ಯ ಇರುವ ಸುರಕ್ಷಿತ ಕ್ರಮಗಳನ್ನು ಅನುಸರಿಸಿ, ಉಳಿದವನ್ನು ದೈವೇಚ್ಛೆಗೆ ಬಿಡುತ್ತೇವೆ.

ಇಂಥದ್ದನ್ನೂ ನಾವು ಹೂಡಿಕೆ ವಿಚಾರದಲ್ಲೂ ನಿಲುವು ತೆಗೆದುಕೊಳ್ಳಬಹುದು. ಯಾವುದೇ ಬ್ಯಾಂಕ್​ನಲ್ಲಿ 5 ಲಕ್ಷ ರೂವರೆಗಿನ ಹಣಕ್ಕೆ ಆರ್​ಬಿಐ ಗ್ಯಾರಂಟಿ ಒದಗಿಸುತ್ತದೆ. ಹೀಗಾಗಿ, ಬ್ಯಾಂಕುಗಳು ದಿವಾಳಿಯಾಗುವ ಭೀತಿ ನಿಮ್ಮ ಮನಸನ್ನು ಅವರಿಸಿದ್ದರೆ ಯಾವುದೇ ಬ್ಯಾಂಕ್​ನಲ್ಲಿ ನಿಮ್ಮ ಹಣ 5 ಲಕ್ಷ ರೂ ಮೀರದಂತೆ ನೋಡಿಕೊಳ್ಳಿ. ಸೂರ್ಯೋದಯ್ ಬ್ಯಾಂಕ್​ನಲ್ಲಿ 5 ವರ್ಷಕ್ಕೆ 3 ಲಕ್ಷ ರೂ ಠೇವಣಿ ಇಟ್ಟರೆ 4.8 ಲಕ್ಷ ಆಗುತ್ತದೆ. ಅದು ಸುರಕ್ಷಿತ ಸೀಮೆಯೊಳಗೆಯೇ ಇರುತ್ತದೆ.

ಇದನ್ನೂ ಓದಿ: EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ

ನಿಮ್ಮಲ್ಲಿ ಹೆಚ್ಚು ಹಣ ಇದ್ದರೆ ಅದನ್ನು ವಿವಿಧ ಬ್ಯಾಂಕುಗಳಲ್ಲಿ 5 ಲಕ್ಷ ರೂ ಮೀರದಂತೆ ಇಟ್ಟುಕೊಳ್ಳಿ. ಹೀಗೆ, ಬ್ಯಾಂಕುಗಳ ಸ್ಥಿತಿಗತಿ ಬಗ್ಗೆ ಮತ್ತು ನೀವು ಇರಿಸಿರುವ ಠೇವಣಿ ಬಗ್ಗೆ ವ್ಯಾಕುಲಗೊಳ್ಳುವ ಅವಶ್ಯಕತೆ ಇರುವುದಿಲ್ಲ.

ಬೇರೆ ಬೇರೆ ಬ್ಯಾಂಕುಗಳಲ್ಲಿ ಎಷ್ಟಿವೆ ಎಫ್​ಡಿ ದರಗಳು?

ಹಿರಿಯ ನಾಗರಿಕರಿಗೆ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಗರಿಷ್ಠ ಬಡ್ಡಿ ದರ ಇರುತ್ತದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಸೀನಿಯರ್ ಸಿಟಿಜನ್ಸ್​ಗೆ ಶೇ. 9.5ರವರೆಗೆ ಬಡ್ಡಿ ಸಿಗುತ್ತದೆ. ಐಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 8.25ರವರೆಗೂ ಎಫ್​ಡಿಗೆ ಬಡ್ಡಿ ಸಿಗುತ್ತದೆ. ಪ್ರಮುಖ ವಾಣಿಜ್ಯ ಬ್ಯಾಂಕುಗಳಾದ ಎಸ್​ಬಿಐ, ಆ್ಯಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕು ಮೊದಲಾದವುಗಳಲ್ಲಿ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ. ಇತರೆ ಸಾಮಾನ್ಯ ಗ್ರಾಹಕರಿಗೆ ಅರ್ಧಪ್ರತಿಶತದಷ್ಟು ಬಡ್ಡಿ ಕಡಿಮೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ