PM Kisan Yojana ಒಂದೇ ದಿನದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ 19 ಸಾವಿರ ಕೋಟಿ ಪಾವತಿಗೆ ಕೇಂದ್ರ ಸಿದ್ಧತೆ

PM Kisan Samman Nidhi Yojana 8th installment: ಕೇಂದ್ರ ಸರ್ಕಾರವು ಶುಕ್ರವಾರದಂದು (ಮೇ 14, 2021) ಪಿಎಂ ಕಿಸಾನ್ ಯೋಜನೆ ಹಣವನ್ನು ರೈತರ ಖಾತೆಗೆ ಜಮೆ ಮಾಡುವುದಕ್ಕೆ ಸಿದ್ಧತೆ ನಡೆಸಿದೆ.

PM Kisan Yojana ಒಂದೇ ದಿನದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ 19 ಸಾವಿರ ಕೋಟಿ ಪಾವತಿಗೆ ಕೇಂದ್ರ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 13, 2021 | 8:57 PM

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅಡಿಯಲ್ಲಿ 9.5 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಭೂಮಿ ಹೊಂದಿದ ರೈತರಿಗೆ ಶುಕ್ರವಾರ 19,000 ಕೋಟಿ ರುಪಾಯಿಗೂ ಹೆಚ್ಚು ವರ್ಗಾವಣೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ. ಈ ಯೋಜನೆ ಅಡಿಯಲ್ಲಿ ಒಂದೇ ದಿನದಲ್ಲಿ ಪಾವತಿ ಮಾಡಲಿರುವ ಅತಿ ದೊಡ್ಡ ಮೊತ್ತ ಇದು. ಒಂದು ವೇಳೆ ಬುಧವಾರದ ಹೊತ್ತಿಗೆ ರೈತರ ಮಾಹಿತಿ ನೀಡಿದ್ದರೆ ಪಶ್ಚಿಮ ಬಂಗಾಲದ ರೈತರು ಇದೇ ಮೊದಲ ಬಾರಿಗೆ ಪಿಎಂ-ಕಿಸಾನ್ ಅನುಕೂಲ ಪಡೆಯಲಿದ್ದಾರೆ. ಕಳೆದ ಬಾರಿಯ ಕಂತನ್ನು ಡಿಸೆಂಬರ್ 25, 2020ರಲ್ಲಿ ಪಾವತಿಸಲಾಗಿತ್ತು. ಆಗ 18 ಸಾವಿರ ಕೋಟಿ ರೂಪಾಯಿ ಮೊತ್ತವನ್ನು 9 ಕೋಟಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಈ ಯೋಜನೆಗೆ ನೋಂದಣಿ ಆಗಿರುವ ಒಟ್ಟು ರೈತರ ಸಂಖ್ಯೆ 10.5 ಕೋಟಿ. ಆ ಪೈಕಿ ಯೋಜನೆಗೆ ಅರ್ಹರಲ್ಲದವರನ್ನು ಕೈಬಿಟ್ಟ ಮೇಲೆ ಮತ್ತು ಕಡ್ಡಾಯವಾಗಿ ಆಧಾರ್ ದೃಢೀಕರಣ ಮಾಡಬೇಕು ಎಂದ ಮೇಲೆ ಉಳಿದಿರುವುದು 9.5 ಕೋಟಿ ರೈತರು.

ಪಿಎಂ-ಕಿಸಾನ್ ಯೋಜನೆ ಆರಂಭವಾಗಿದ್ದು 2019ರ ಫೆಬ್ರವರಿಯಲ್ಲಿ. ರೈತರಿಗೆ ಆದಾಯದ ಬೆಂಬಲಕ್ಕೆ ನಿಲ್ಲಬೇಕು ಎಂಬ ಕಾರಣಕ್ಕೆ ಜಾರಿಗೆ ತಂದ ಯೋಜನೆ ಇದು. 2019ರ ಹಣಕಾಸು ವರ್ಷದಲ್ಲಿ ಇದರಿಂದಾಗಿ ಸರ್ಕಾರ ಭರಿಸಿದ ವೆಚ್ಚ 1241 ಕೋಟಿ ರೂಪಾಯಿ. 2020ರ ಹಣಕಾಸು ವರ್ಷದಲ್ಲಿ 48,714 ಕೋಟಿ ರೂಪಾಯಿ. 2021 (RE) 65 ಸಾವಿರ ಕೋಟಿ ರೂಪಾಯಿಯಾಗಿದೆ. 2022ರ ಹಣಕಾಸು ವರ್ಷಕ್ಕೆ ಈ ಯೋಜನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೂ. 65,000 ಕೊಟಿಯನ್ನೇ ಮೀಸಲಿಟ್ಟಿದ್ದಾರೆ.

ಈ ಯೋಜನೆ ಅಡಿಯಲ್ಲಿ ಭೂಮಿ ಇರುವ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ಬರುತ್ತದೆ. ಅದು ಮೂರು ಸಮಾನ ಕಂತುಗಳಾದ ತಲಾ 2000 ರೂಪಾಯಿಯಂತೆ ಬರುತ್ತದೆ. ಏಪ್ರಿಲ್​ನಿಂದ ಜುಲೈ ಅವಧಿಯ ಮೊತ್ತವನ್ನು ಶುಕ್ರವಾರದಂದು ವರ್ಗಾವಣೆ ಮಾಡಲಾಗುತ್ತದೆ. ರಾಜ್ಯಗಳು ಮೊದಲಿಗೆ ರೈತರ ಮಾಹಿತಿಯನ್ನು ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ ಅಪ್​ಲೋಡ್ ಮಾಡುತ್ತವೆ. ಈ ಪ್ಲಾಟ್​ಫಾರ್ಮ್ ತಾನಾಗಿಯೇ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿ, ಫಲಾನುಭವಿಗಳ ಆಧಾರ್​ ಮಾಹಿತಿಯೊಂದಿಗೆ ದೃಢೀಕರಿಸುತ್ತದೆ. ಆ ನಂತರ ಭೌತಿಕವಾದ ಸಹಿಗಾಗಿ ವಾಪಸ್​ ರಾಜ್ಯಗಳಿಗೆ ಕಳುಹಿಸಲಾಗುತ್ತದೆ.

ಅಂದಹಾಗೆ ಕೃಷಿ ಗಣತಿ 2015-16ರ ಪ್ರಕಾರ 14 ಕೋಟಿ ಮಂದಿ ಭೂಮಿ ಇರುವ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರು. ವಾಸ್ತವ ಫಲಾನುಭವಿಗಳ ಸಂಖ್ಯೆ ಇನ್ನು ಕಡಿಮೆ ಇರಬಹುದು. 12 ಕೋಟಿಗಿಂತ ಹೆಚ್ಚು ಇರುವುದಕ್ಕೆ ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಪಿಎಂ- ಕಿಸಾನ್ ಯೋಜನೆಯನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ವಿರೋಧಿಸಿ, ತಮ್ಮ ರಾಜ್ಯದಲ್ಲಿ ಜಾರಿಗೆ ತಂದಿರಲಿಲ್ಲ. ಈ ಬಾರಿಯ ಚುನಾವಣೆ ವೇಳೆ ಪ್ರಧಾನಿ ಮೋದಿ, ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಾಕಿ ಮೊತ್ತವನ್ನು ಸೇರಿಸಿ ಪಾವತಿಸುತ್ತೇವೆ ಎಂದಿದ್ದರು. ಇದೀಗ ಆ ಯೋಜನೆಗೆ ಮಮತಾ ಒಪ್ಪಿದ್ದಾರೆ. ಕೇಂದ್ರ ಕೃಷಿ ಸಚಿವ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ರೈತರ ಬಗ್ಗೆ ಮಾಹಿತಿ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ ಮೊತ್ತ ಖಾತೆಗೆ ಜಮೆ ಆಯಿತಾ?

(PM Kisan Yojana 8th installment all set to transfer to farmers on Friday. That is May 13, 2021)