AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಜ್ವಲ ಗ್ಯಾಸ್ ಯೋಜನೆಯಲ್ಲಿ ಸಬ್ಸಿಡಿಯುಕ್ತ ಸಿಲಿಂಡರ್ ಸಂಖ್ಯೆ ಕಡಿಮೆ ಮಾಡಲು ನಿಜವಾದ ಕಾರಣ ಇದಾ?

Reasons for PMUY Subsidy Reduction: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಎಲ್‌ಪಿಜಿ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಕಡಿತಗೊಳಿಸಲಾಗಿದೆ. ಈ ನಿರ್ಧಾರಕ್ಕೆ ಪ್ರಮುಖ ಕಾರಣ ಯೋಜನೆಯ ದುರ್ಬಳಕೆ. ಕೆಲವು ವಂಚಕರು ಸಬ್ಸಿಡಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಸೋರಿಕೆ ತಡೆದು, ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪಿಸುವ ಗುರಿಯೊಂದಿಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರಾಸರಿ ಬಳಕೆಯ ಆಧಾರದ ಮೇಲೆ ಈ ಮಿತಿ ನಿಗದಿಪಡಿಸಲಾಗಿದೆ.

ಉಜ್ವಲ ಗ್ಯಾಸ್ ಯೋಜನೆಯಲ್ಲಿ ಸಬ್ಸಿಡಿಯುಕ್ತ ಸಿಲಿಂಡರ್ ಸಂಖ್ಯೆ ಕಡಿಮೆ ಮಾಡಲು ನಿಜವಾದ ಕಾರಣ ಇದಾ?
ಎಲ್‌ಪಿಜಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2026 | 5:08 PM

Share

ನವದೆಹಲಿ, ಜೂನ್ 9: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY- PM Ujjwala Yojana) ಅಡಿಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಬಲ ಕಾರಣವೊಂದು ಇದೆ ಎಂದು ಹೇಳಲಾಗುತ್ತಿದೆ. ಬಡವರಿಗೆಂದು ಇರುವ ಈ ಸ್ಕೀಮ್ ಅನ್ನು ಕೆಲ ದುರುಳರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎನ್​ಎನ್ ನ್ಯೂಸ್18 ವಾಹಿನಿ ವರದಿ ಮಾಡಿದೆ. ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಲಾಗಿದೆ.

ದುರುಪಯೋಗ ಮತ್ತು ಅಕ್ರಮ ನಿಯಂತ್ರಣ: ಉಜ್ವಲ ಯೋಜನೆಯಡಿ ಸಿಗುವ ಸಬ್ಸಿಡಿ ಸಿಲಿಂಡರ್‌ಗಳನ್ನು ಕೆಲವು ವಂಚಕರು ವಾಣಿಜ್ಯ (Commercial) ಉದ್ದೇಶಗಳಿಗಾಗಿ ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಪಡೆದು, ಅವುಗಳನ್ನು ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ವರ್ಷಕ್ಕೆ ಬಳಸುವ ಸಿಲಿಂಡರ್‌ಗಳ ಸರಾಸರಿ ಸಂಖ್ಯೆ 4 ಆಗಿದೆ. ಹೀಗಾಗಿ, ನೈಜ ಬಳಕೆಯ ಆಧಾರದ ಮೇಲೆಯೇ ಈ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಸಿಲಿಂಡರ್ ಖರೀದಿಗೆ ಮುಕ್ತ ಅವಕಾಶ

ಉಜ್ವಲ ಯೋಜನೆ ಅಡಿ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 4ಕ್ಕೆ ಮಿತಿಗೊಳಿಸಿರುವ ನಿಯಮದಿಂದ ಗ್ರಾಹಕರಿಗೆ ಸಿಲಿಂಡರ್ ಲಭ್ಯತೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಯೋಜನೆಯ ಫಲಾನುಭವಿಗಳು ಅಗತ್ಯ ಇದ್ದಲ್ಲಿ ಹೆಚ್ಚು ಸಿಲಿಂಡರ್​ಗಳನ್ನು ಪಡೆಯಲು ಅವಕಾಶ ಇರುತ್ತದೆ. ಅದರಲ್ಲಿ ಯಾವುದೆ ನಿರ್ಬಂಧ ಇರುವುದಿಲ್ಲ.

ಗ್ರಾಹಕರು ಎಷ್ಟು ಬೇಕಾದರೂ ಸಿಲಿಂಡರ್ ಖರೀದಿಸಬಹುದಾದರೂ, ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವು ಕೇವಲ ಮೊದಲ 4 ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಖರೀದಿಸುವ ಸಿಲಿಂಡರ್‌ಗಳಿಗೆ ಪೂರ್ಣ ಮಾರುಕಟ್ಟೆ ಬೆಲೆಯನ್ನು ತೆರಬೇಕಾಗುತ್ತದೆ.

ಇದನ್ನೂ ಓದಿ: Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು

ಒಟ್ಟಾರೆಯಾಗಿ, ಸಬ್ಸಿಡಿ ವ್ಯವಸ್ಥೆಯಲ್ಲಿನ ಸೋರಿಕೆಯನ್ನು (Leakage) ತಡೆದು, ಸರ್ಕಾರದ ಹಣ ದುರುಪಯೋಗವಾಗದಂತೆ ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More