
ನವದೆಹಲಿ, ಅಕ್ಟೋಬರ್ 30: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (PNB) ಗ್ರೇಟರ್ ನೋಯ್ಡಾ ಶಾಖೆಯಲ್ಲಿ ಗ್ರಾಹಕರ ಖಾತೆಗಳಿಂದ ಕೋಟ್ಯಂತರ ಹಣ ನಾಪತ್ತೆಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಅಕ್ರಮ ಮತ್ತು ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಆಡಳಿತ ಮಂಡಳಿಯು ಕಠಿಣ ಕ್ರಮ ಕೈಗೊಂಡಿದ್ದು, ಒಟ್ಟು 12 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ಗ್ರೇಟರ್ ನೋಯ್ಡಾದಲ್ಲಿರುವ ಪಿಎನ್‌ಬಿ ಶಾಖೆಯ ವಿವಿಧ ಗ್ರಾಹಕರ ಖಾತೆಗಳಿಂದ ಒಟ್ಟು 11.24 ಕೋಟಿ ರೂಪಾಯಿಗಳಿಗೂ ಅಧಿಕ ಹಣವು ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿರುವುದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ.
ಗ್ರಾಹಕರ ಹಣ ಸುರಕ್ಷತೆಯಲ್ಲಿ ಲೋಪ ಎಸಗಿರುವ ಹಾಗೂ ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಒಟ್ಟು 12 ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಒಂದೇ ದಿನದಲ್ಲಿ ಗೂಗಲ್ ಷೇರು ಪ್ರಪಾತಕ್ಕೆ; ಭಾರತದ ಮೂರು ಅಗ್ರಮಾನ್ಯ ಕಂಪನಿಗಳ ಒಟ್ಟು ಸಂಪತ್ತಿಗೆ ಸಮ ಈ ಕುಸಿತ
ತನ್ನ ಮಹಿಳಾ ಉದ್ಯೋಗಿಯೊಬ್ಬಳು ಹೊರಗಿನವರ ನೆರವಿನಿಂದ ಬ್ರ್ಯಾಂಚ್ ಮ್ಯಾನೇಜರ್ನ ಪಾಸ್ವರ್ಡ್ ಅನ್ನು ಬಳಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರಬಹುದು ಎನ್ನುವುದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮ್ಯಾನೇಜ್ಮೆಂಟ್ಗೆ ಇರುವ ಅನುಮಾನ.
ಗ್ರಾಹಕರ ಬ್ಯಾಂಕ್ ಅಕೌಂಟ್ನಿಂದ ಅವರಿಗೆ ಗೊತ್ತಾಗದಂತೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಗ್ರಾಹಕರು ನೀಡಿರುವ ದೂರುಗಳ ಪ್ರಕಾರ, 11.24 ಕೋಟಿ ರೂನಷ್ಟು ಹಣವನ್ನು ಅಕ್ರವಾಗಿ ವರ್ಗಾಯಿಸಲಾಗಿದೆ. ಕೆಲ ಗ್ರಾಹಕರು ಮಾಡಿರುವ ಅಂದಾಜು ಪ್ರಕಾರ, ಅಕ್ರಮ ವರ್ಗಾವಣೆ ಆಗಿರುವ ಒಟ್ಟು ಹಣ 35 ಕೋಟಿ ರೂ ಆಗುತ್ತದೆ. ಆದರೆ, ಬ್ಯಾಂಕ್‌ನ ಪ್ರಾಥಮಿಕ ಅಂದಾಜು ಪ್ರಕಾರ, ಗ್ರಾಹಕರ ಅಕೌಂಟ್ಗಳಿಂದ ಅಕ್ರಮವಾಗಿ ವರ್ಗಾವಣೆ ಆಗಿರುವ ಹಣ 10 ಕೋಟಿ ರೂ ದಾಟುವುದಿಲ್ಲ.
ಇದನ್ನೂ ಓದಿ: ಭಾರತದಲ್ಲಿ 12 ವರ್ಷದಲ್ಲಿ ಬಡತನದಿಂದ ಹೊರಬಂದ 50 ಕೋಟಿ ಜನರು; ದೇಶದಲ್ಲೀಗ ಕಡುಬಡತನ ಗಣನೀಯ ಇಳಿಕೆ
ಈ ಗೊಂದಲವು ಸರಿಯಾದ ತನಿಖೆಯಿಂದ ಗೊತ್ತಾಗಲಿದೆ. ಬ್ಯಾಂಕ್ ಅಧಿಕಾರಿಗಳು ಈ ವಂಚನೆಯ ಕುರಿತು ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಬ್ಯಾಂಕ್ ಬದ್ಧವಾಗಿದೆ ಎಂದು PNB ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 30 October 26