AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಗೂಗಲ್ ಷೇರು ಪ್ರಪಾತಕ್ಕೆ; ಭಾರತದ ಮೂರು ಅಗ್ರಮಾನ್ಯ ಕಂಪನಿಗಳ ಒಟ್ಟು ಸಂಪತ್ತಿಗೆ ಸಮ ಈ ಕುಸಿತ

ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್​ನ ಮಾರ್ಕೆಟ್ ಕ್ಯಾಪ್ ಒಂದೇ ದಿನದಲ್ಲಿ 500 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಆಲ್ಫಬೆಟ್​ನ ಹೂಡಿಕೆದಾರರಿಗೆ ಒಂದು ದಿನದಲ್ಲಿ ಆದ ಲಾಭನಷ್ಟ ಬರೋಬ್ಬರಿ 47 ಲಕ್ಷ ಕೋಟಿ ರೂ. ಎಐ ಸೌಕರ್ಯಗಳಿಗಾಗಿ ಆಲ್ಫಬೆಟ್ ಸಾಕಷ್ಟು ವ್ಯಯಿಸಿರುವುದು, ಗೂಗಲ್ ಸರ್ಚ್​ನಿಂದ ನಿರೀಕ್ಷಿತ ಆದಾಯ ಬರದೇ ಹೋಗಿರುವುದು ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಒಂದೇ ದಿನದಲ್ಲಿ ಗೂಗಲ್ ಷೇರು ಪ್ರಪಾತಕ್ಕೆ; ಭಾರತದ ಮೂರು ಅಗ್ರಮಾನ್ಯ ಕಂಪನಿಗಳ ಒಟ್ಟು ಸಂಪತ್ತಿಗೆ ಸಮ ಈ ಕುಸಿತ
ಗೂಗಲ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2026 | 1:11 PM

Share

ವಾಷಿಂಗ್ಟನ್, ಅಕ್ಟೋಬರ್ 30: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಎನಿಸಿದ ಗೂಗಲ್​ನ ಮಾತೃ ಸಂಸ್ಥೆಯಾದ ಆಲ್ಫಬೆಟ್ ಷೇರು ಮಾರುಕಟ್ಟೆಯಲ್ಲಿ ತೀವ್ರ ಹಿಂಜರಿತ ಅನುಭವಿಸಿದೆ. ಒಂದೇ ದಿನದಲ್ಲಿ ಆಲ್ಫಬೆಟ್​ನ ಷೇರುಬೆಲೆ ಶೇ. 13ರಷ್ಟು ಕುಸಿತವಾಗಿದೆ. ಇದು ಅದರ ಒಂದು ದಿನದ ಗರಿಷ್ಠ ಕುಸಿತ ಎನಿಸಿದೆ. ಅದರ ಮಾರುಕಟ್ಟೆ ಬಂಡವಾಳದಲ್ಲಿ 500 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಸಂಪತ್ತು ಒಂದೇ ದಿನದಲ್ಲಿ ಕರಗಿಹೋಗಿದೆ. ಆಲ್ಫಬೆಟ್​ನ ಹೂಡಿಕೆದಾರರು ಕಂಗಾಲಾಗಿದ್ದಾರೆ.

ಭಾರತದ ಮೂರು ಅತಿದೊಡ್ಡ ಕಂಪನಿಗಳ ಒಟ್ಟು ಸಂಪತ್ತಿಗೆ ಸಮನಾದಷ್ಟು ಕುಸಿತ

ಗೂಗಲ್​ನ ಮಾತೃ ಸಂಸ್ಥೆಗೆ ಒಂದೇ ಟ್ರೇಡಿಂಗ್ ಸೆಷನ್​ನಲ್ಲಿ 500 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ನಶಿಸಿದೆ. ಷೇರುಸಂಪತ್ತಿಯಲ್ಲಿ ಭಾರತದ ಟಾಪ್-3 ಕಂಪನಿಗಳೆನಿಸಿದ ರಿಲಯನ್ಸ್ ಇಂಡಸ್ಟ್ರೀಸ್, ಜಿಯೋ ಪ್ಲಾಟ್​ಫಾರ್ಮ್ಸ್ ಮತ್ತು ಭಾರ್ತಿ ಏರ್ಟೆಲ್​ನ ಒಟ್ಟೂ ಮಾರ್ಕೆಟ್ ಕ್ಯಾಪ್ 450 ಬಿಲಿಯನ್ ಡಾಲರ್ ಕೂಡ ದಾಟುವುದಿಲ್ಲ. ಅಂದರೆ, ಗೂಗಲ್ ಕಂಡ ಒಂದು ದಿನದ ಕುಸಿತ ಅದೆಷ್ಟು ದೊಡ್ಡದಿರಬಹುದು ಎಂದು ಅಂದಾಜಿಸಬಹುದು. ಆಲ್ಫಬೆಟ್​ನ ಒಂದು ಷೇರು ಬೆಲೆ 282 ಡಾಲರ್ ಇದೆ. ಅಂದರೆ, ಸುಮಾರು 29,000 ರೂಪಾಯಿ ಇದೆ.

ಇದನ್ನೂ ಓದಿ: ಭಾರತದಲ್ಲಿ 12 ವರ್ಷದಲ್ಲಿ ಬಡತನದಿಂದ ಹೊರಬಂದ 50 ಕೋಟಿ ಜನರು; ದೇಶದಲ್ಲೀಗ ಕಡುಬಡತನ ಗಣನೀಯ ಇಳಿಕೆ

ಆಲ್ಫಬೆಟ್ ಷೇರು ಕುಸಿತ ಯಾಕೆ?

ಆಲ್ಫಬೆಟ್ ಸಂಸ್ಥೆಯ ತ್ರೈಮಾಸಿಕ ಆದಾಯ ವರದಿ ನಿನ್ನೆ ಬಿಡುಗಡೆ ಆಗಿದೆ. ನಿರೀಕ್ಷೆಗಿಂತ ಕಡಿಮೆ ಆದಾಯ ಬಂದಿರುವುದು ಹೂಡಿಕೆದಾರರಿಗೆ ತಳಮಳ ತಂದಿದೆ. ಆಲ್ಫಬೆಟ್​ನ ಪ್ರಮುಖ ಆದಾಯ ಮೂಲದ ಕಂಪನಿ ಎಂದರೆ ಗೂಗಲ್. ಈ ಗೂಗಲ್​ನ ಪ್ರಮುಖ ಆದಾಯಮೂಲ ಅದರ ಸರ್ಚ್ ಎಂಜಿನ್. ಗೂಗಲ್ ಸರ್ಚ್​ನ ಆದಾಯ 65 ಬಿಲಿಯನ್ ಡಾಲರ್ ಇರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ 63 ಬಿಲಿಯನ್ ಡಾಲರ್ ಮಾತ್ರವೇ ಆದಾಯ ಬಂದಿದೆ ಎನ್ನುವುದು ಆತಂಕಕ್ಕೆ ಕಾರಣ.

ಗಾಯದ ಮೇಲೆ ಬರೆ ಎಳೆದಂತೆ ಆಲ್ಫಬೆಟ್​ನ ಫ್ರೀ ಕ್ಯಾಷ್ ಫ್ಲೋ ಈ ಕ್ವಾರ್ಟರ್​ನಲ್ಲಿ ನೆಗಟಿವ್ ಆಗಿದೆ. ಡಾಟಾ ಸೆಂಟರ್​ಗಳು, ಚಿಪ್​ಗಳು ಹಾಗು ಇತರ ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣದ ಮೇಲೆ ಗೂಗಲ್ ಭಾರೀ ವೆಚ್ಚ ಮಾಡಿರುವುದು ಅದರ ಹಣವನ್ನು ಬರಿದು ಮಾಡಿದೆ. ಅಷ್ಟು ಹೂಡಿಕೆ ಮಾಡಿದರೂ ಆದಾಯ ಹೆಚ್ಚದೇ ಇರುವುದು ಹೂಡಿಕೆದಾರರಿಗೆ ಹೆಚ್ಚಿನ ಆತಂಕ ತಂದಿರಬಹುದು.

ಇದನ್ನೂ ಓದಿ: ಎಐ ಎಫೆಕ್ಟ್; 10 ಮಂದಿಯ ಕೆಲಸ ಒಬ್ಬನಿಂದಲೇ ಸಾಧ್ಯ; ಭವಿಷ್ಯದ ವಾಸ್ತವ ಬಿಚ್ಚಿಟ್ಟ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು

ಆಲ್ಫಬೆಟ್​ಗೆ ಪಾಸಿಟಿವ್ ಸಂಗತಿ ಎಂದರೆ ಅದರ ಕ್ಲೌಡ್ ಬ್ಯುಸಿನೆಸ್ ಉತ್ತಮ ಸಾಧನೆ ಮಾಡಿದೆ. ಗೂಗಲ್ ಕ್ಲೌಡ್​ನಿಂದ ಬಂದ ಆದಾಯ ಎರಡು ಪಟ್ಟು ಹೆಚ್ಚಾಗಿ 30 ಬಿಲಿಯನ್ ಡಾಲರ್ ದಾಟಿದೆ. ಇನ್ನು, ಅದರ ಜೆಮಿನೈ ಎಐ ಆ್ಯಪ್​ನ ಸಕ್ರಿಯ ಬಳಕೆದಾರರ ಸಂಖ್ಯೆ 100 ಕೋಟಿಯ ಮೈಲಿಗಲ್ಲು ದಾಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More