ಭಾರತದಲ್ಲಿ 12 ವರ್ಷದಲ್ಲಿ ಬಡತನದಿಂದ ಹೊರಬಂದ 50 ಕೋಟಿ ಜನರು; ದೇಶದಲ್ಲೀಗ ಕಡುಬಡತನ ಗಣನೀಯ ಇಳಿಕೆ
ಭಾರತದಲ್ಲಿ 2011ರಲ್ಲಿ ಶೇ. 57.7ರಷ್ಟಿದ್ದ ಬಡವರ ಸಂಖ್ಯೆ 2023ರಲ್ಲಿ ಶೇ 27.1ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ವರದಿಯೊಂದು ಹೇಳಿದೆ. ಬಡವರ ಸಂಖ್ಯೆ 2028ರಲ್ಲಿ ಶೇ. 12.1ಕ್ಕೆ ಇಳಿಯಬಹುದು ಎಂದೂ ವರ್ಲ್ಡ್ ಬ್ಯಾಂಕ್ ರಿಪೋರ್ಟ್ ಅಂದಾಜು ಮಾಡಿದೆ. ಇದೇ ವರದಿ ಪ್ರಕಾರ, 2011ರಲ್ಲಿ ಶೇ. 27ರಷ್ಟಿದ್ದ ಕಡುಬಡವರ ಸಂಖ್ಯೆ 2023ರಲ್ಲಿ ಶೇ. 2.6ಕ್ಕೆ ಇಳಿದಿದೆ. ಸರ್ಕಾರದ ವಿವಿಧ ಯೋಜನೆಗಳು ಬಡತನ ನಿರ್ಮೂಲನೆಗೆ ನೆರವಾಗಿವೆ.

ನವದೆಹಲಿ, ಅಕ್ಟೋಬರ್ 30: ಭಾರತದಲ್ಲಿ ಕಳೆದ 15 ವರ್ಷದಲ್ಲಿ ಬಡವರು ಮತ್ತು ಕಡುಬಡವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವರ್ಲ್ಡ್ ಬ್ಯಾಂಕ್ ವರದಿಯೊಂದರ ಪ್ರಕಾರ, 2011ರಿಂದ 2023ರವರೆಗೆ 12 ವರ್ಷದಲ್ಲಿ 49.6 ಕೋಟಿ ಜನರು ಬಡತನ ರೇಖೆಯಿಂದ ಮೇಲೇರಿದ್ದಾರೆ. 2011-12ರಲ್ಲಿ ಬಡವರ ಪ್ರಮಾಣ ಶೇ. 57.7ರಷ್ಟಿತ್ತು. 2022-23ರಲ್ಲಿ ಅದು ಶೇ. 27.1ಕ್ಕೆ ಇಳಿದಿದೆ.
ಇನ್ನು, ಕಡುಬಡವರ ಸಂಖ್ಯೆ 2011-12ರಲ್ಲಿ ಶೇ. 27.1ರಷ್ಟು ಇದ್ದದ್ದು 2022-23ರಲ್ಲಿ ಶೇ. 2.6ಕ್ಕೆ ಇಳಿದಿದೆ. ಬಡವರ ಸಂಖ್ಯೆ 2028ಕ್ಕೆ ಶೇ. 12.1ಕ್ಕೆ ಇಳಿಯಬಹುದು ಎಂದೂ ವಿಶ್ವಬ್ಯಾಂಕ್ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಎಐ ಎಫೆಕ್ಟ್; 10 ಮಂದಿಯ ಕೆಲಸ ಒಬ್ಬನಿಂದಲೇ ಸಾಧ್ಯ; ಭವಿಷ್ಯದ ವಾಸ್ತವ ಬಿಚ್ಚಿಟ್ಟ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು
ಬಡತನ ಮತ್ತು ಕಡುಬಡತನದ ಮಾನದಂಡಗಳೇನು?
ವಿಶ್ವಬ್ಯಾಂಕ್ ನಿಗದಿ ಮಾಡಿರುವ ಮಾನದಂಡಗಳು ಇಂತಿವೆ:
- ಬಡತನ (Poverty): ದಿನಕ್ಕೆ 4.20 ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವವರು. ಅಂದರೆ, ದಿನಕ್ಕೆ 400 ರೂಪಾಯಿಗಿಂತ ಕಡಿಮೆ ಆದಾಯ ಇರುವವರು ಬಡವರೆನಿಸುತ್ತಾರೆ.
- ಕಡುಬಡತನ (Extreme Poverty): ದಿನಕ್ಕೆ 3 ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವವರು ಕಡುಬಡವರು. 3 ಡಾಲರ್ ಎಂದರೆ ಸುಮಾರು 280-290 ರೂಪಾಯಿ ಆಗುತ್ತದೆ.
ವಿಶ್ವದಲ್ಲಿ ಬಹಳ ವೇಗವಾಗಿ ಬಡತನ ನಿರ್ಮೂಲನೆ ಮಾಡಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂಬುದು ಗಮನಾರ್ಹ. ಭಾರತದಲ್ಲಿ ಬಡತನ ಹಾಸುಹೊದ್ದು ಮಲಗಿರುತ್ತದೆ ಎನ್ನಲಾದ ಮತ್ತು ಬಿಮಾರು ಎಂದು ವರ್ಗೀಕರಿಸಲಾದ ರಾಜ್ಯಗಳಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದೂ ಕೂಡ ಗಮನಾರ್ಹ ಸಂಗತಿ.
2011ರಲ್ಲಿ ದೇಶದ ಶೇ. 65ರಷ್ಟು ಬಡತನ ಇದ್ದ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳು ಸಾಕಷ್ಟು ಚೇತರಿಸಿಕೊಂಡಿವೆ. ಹೀಗಾಗಿ, ಭಾರತದ ಒಟ್ಟಾರೆ ಬಡತನ ಮತ್ತು ಕಡುಬಡತನ ಪ್ರಮಾಣ ಸಾಕಷ್ಟು ಕಡಿಮೆ ಆಗಲು ಸಾಧ್ಯವಾಗಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತೀಯ ರೈತರ ಹಿತಾಸಕ್ತಿ ಬಲಿಕೊಡುವುದಿಲ್ಲ ಎಂದ ವಾಣಿಜ್ಯ ಸಚಿವ
ಬಡತನ ನಿರ್ಮೂಲನೆಗೆ ನೆರವಾದ ಸರ್ಕಾರದ ಯೋಜನೆಗಳು
ಕೇಂದ್ರ ಸರ್ಕಾರವು ಬಡವರ ಉನ್ನತಿಗೆಂದು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ್ ಯೋಜನೆ, ಜನಧನ್ ಯೋಜನೆ, ಆಯುಷ್ಮಾನ್ ಭಾರತ್ ಇತ್ಯಾದಿ ಉಪಕ್ರಮಗಳು ಬಡತನ ನಿರ್ಮೂಲನೆಗೆ ನೆರವಾಗಿವೆ. ಡಿಜಿಟಲ್ ಸೌಕರ್ಯ, ಗ್ರಾಮೀಣ ಸೌಕರ್ಯ, ಡಿಬಿಟಿ ಇತ್ಯಾದಿ ಸುಧಾರಣೆಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಗಳು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ನೆರವಾಗಿವೆ. ಇವೆಲ್ಲವೂ ಕೂಡ ಬಡತನ ಮತ್ತು ಕಡುಬಡತನ ವಿರುದ್ಧದ ಹೋರಾಟಕ್ಕೆ ಸಹಾಯವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




