
ನವದೆಹಲಿ, ನವೆಂಬರ್ 5: ದೇಶದ ರೈತರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ಗ್ರಾಹಕರಿಗೆ ನೇರವಾಗಿ ಕೃಷಿ ಉತ್ಪನ್ನಗಳನ್ನು ತಲುಪಿಸಲು ಕೇಂದ್ರ ಕೃಷಿ ಸಚಿವಾಲಯ ಮತ್ತು ಭಾರತೀಯ ಅಂಚೆ ಇಲಾಖೆ (India Post) ಯೋಜನೆಗಳನ್ನು ಹಾಕಿವೆ. ಈ ಸಂಬಂಧ ಈ ಹಿಂದೆ ಒಪ್ಪಂದ ಕೂಡ ಏರ್ಪಟ್ಟಿದ್ದು, ದೇಶಾದ್ಯಂತ ಇರುವ ಅಂಚೆ ಕಚೇರಿಗಳು ಕೃಷಿ ಉತ್ಪನ್ನಗಳ ಸಂಗ್ರಹಣೆ ಹಾಗೂ ಸರಬರಾಜು ಕೇಂದ್ರಗಳಾಗಿ (Dark Stores) ಕಾರ್ಯನಿರ್ವಹಿಸಲಿವೆ. ರೈತ ಉತ್ಪಾದಕರ ಸಂಸ್ಥೆಗಳು (ಎಫ್ಪಿಒ) ತಮ್ಮ ಸರಕುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಪೋಸ್ಟ್ ಆಫೀಸ್ಗಳನ್ನು ಸಂಗ್ರಹಗಾರ ಮತ್ತು ವಿತರಣಾ ಕೇಂದ್ರಗಳನ್ನಾಗಿ ಮಾಡಿಕೊಳ್ಳಲು ಅವಕಾಶ ಇರಲಿದೆ.
ಬೃಹತ್ ಅಂಚೆ ಜಾಲವನ್ನು ಬಳಸಿ, ಸ್ಥಳೀಯ ಅಂಚೆ ಕಚೇರಿಗಳನ್ನು ಕೃಷಿ ಉತ್ಪನ್ನಗಳ ಶೇಖರಣಾ (Dark Stores) ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ರೈತರ ಕೃಷಿ ಸರಕುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರು ಬೆಳೆದ ಬೆಳೆಗಳನ್ನು ಮತ್ತು ಸಾವಯವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆಯ ಬಲವಾದ ಲಾಜಿಸ್ಟಿಕ್ಸ್ ಮತ್ತು ವಿತರಣಾ ಜಾಲವನ್ನು ಬಳಸಿಕೊಳ್ಳುವ ಯೋಜನೆ ಇದೆ.
ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ
ಈ ವಿನೂತನ ವ್ಯವಸ್ಥೆಯಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಹಾಗೂ ದೇಶದ ಯಾವುದೇ ಮೂಲೆಗೂ ತಮ್ಮ ಸರಕುಗಳನ್ನು ಸುಲಭವಾಗಿ ತಲುಪಿಸಲು ಸಾಧ್ಯವಾಗಲಿದೆ. ಇದು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಹೇಳಲಾಗುತ್ತಿದೆ.
ಕೃಷಿ ಉತ್ಪಾದಕ ಸಂಸ್ಥೆಗಳು ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಬಳಸಬಹುದು. ಸರ್ಕಾರವು ಒಎನ್ಡಿಸಿ ನೆಟ್ವರ್ಕ್ ರೂಪಿಸಿದ್ದು, ಅದನ್ನು ಬಳಸಿ ಡಿಜಿಟಲ್ ಆಗಿ ಮಾರುಕಟ್ಟೆ ಪ್ರವೇಶ ಮಾಡಬಹುದು. ಗುಜರಾತ್ನಲ್ಲಿ ಈಗಾಗಲೇ ಒಂದು ಪ್ರಯೋಗ ಆಗಿದೆ. ಒಎನ್ಡಿಸಿ ಬಳಸುವ ಮೈಸ್ಟೋರ್ ಆ್ಯಪ್ನಲ್ಲಿ ಎಫ್ಪಿಒದ ಉತ್ಪನ್ನಗಳನ್ನು ಲಿಸ್ಟ್ ಮಾಡಲಾಗಿರುತ್ತದೆ. ಗ್ರಾಹಕರು ಆರ್ಡರ್ ಇಡುವ ಉತ್ಪನ್ನಗಳನ್ನು ಇಂಡಿಯಾ ಪೋಸ್ಟ್ನ ಜಾಲದ ಮೂಲಕ ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತಿದೆ.
ಇದನ್ನೂ ಓದಿ: Diwali 2026 Stock Market Holiday: ದೀಪಾವಳಿ ಸೀಸನ್ನಲ್ಲಿ ಷೇರು ಮಾರುಕಟ್ಟೆಗೆ ಇರುವ ರಜಾದಿನಗಳು
ಈಗ ಗುಜರಾತ್ನಲ್ಲಿ ಯಶಸ್ವಿಯಾಗಿರುವ ಈ ಮಾಡಲ್ ಅನ್ನು ತಮಿಳುನಾಡು, ಮಧ್ಯಪ್ರದೇಶದಲ್ಲೂ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಇದೀಗ ರಾಜಸ್ಥಾನ, ಉತ್ತರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಜಾಲ ಹರಡಲಿದೆ.
ಅಂದಹಾಗೆ, ಈ ವ್ಯವಸ್ಥೆಯಲ್ಲಿ ಬೇಗ ಹಾಳಾಗುವ ಕೃಷಿ ಉತ್ಪನ್ನಗಳು ಇರುವುದಿಲ್ಲ. ಬೇಳೆ ಕಾಳುಗಳು ಇತ್ಯಾದಿ ಹೆಚ್ಚು ದಿನ ಕೆಡದ ಆಹಾರವಸ್ತುಗಳನ್ನು ಮಾರಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ