ಜನರ ಬದುಕಿಗೆ ಕೊವಿಡ್ ಪೆಟ್ಟು: ವಿಮಾ ಪಾಲಿಸಿಗಳ ಅವಧಿ ಪೂರ್ವ ಸರಂಡರ್ ಪ್ರಮಾಣ ಮೂರು ಪಟ್ಟು ಹೆಚ್ಚಳ

ಹಣಕಾಸಿನ ತುರ್ತು ಎದುರಾದ ಹಿನ್ನೆಲೆಯಲ್ಲಿ ಪಾಲಿಸಿಗಳನ್ನು ಮೆಚ್ಯುರಿಟಿ ಅವಧಿಗೆ ಮೊದಲೇ ಸರಂಡರ್ ಮಾಡಿ ಹಣ ಹಿಂಪಡೆಯಲು ಮುಂದಾದರು.

ಜನರ ಬದುಕಿಗೆ ಕೊವಿಡ್ ಪೆಟ್ಟು: ವಿಮಾ ಪಾಲಿಸಿಗಳ ಅವಧಿ ಪೂರ್ವ ಸರಂಡರ್ ಪ್ರಮಾಣ ಮೂರು ಪಟ್ಟು ಹೆಚ್ಚಳ
ಮಾಸ್ಕ್‌
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 26, 2022 | 8:49 AM

ಭಾರತದಲ್ಲಿ ಕೊರೊನಾ ಪಿಡುಗು ಆರಂಭವಾದ ನಂತರ ಆರ್ಥಿಕ ಚಟುವಟಿಕೆಗಳು ನೀರಸವಾಗಿದ್ದು, ಕೌಟುಂಬಿಕ ಆದಾಯ ಕುಸಿದಿದೆ. ಅಂಕಿಅಂಶಗಳಲ್ಲಿ ಎಲ್ಲವೂ ಉತ್ತಮವಾಗಿರುವಂತೆ ಕಂಡುಬಂದರೂ ವಾಸ್ತವ ಚಿತ್ರಣ ಬೇರೆಯದ್ದೇ ಆಗಿದೆ. ಜನಸಾಮಾನ್ಯರ ಆದಾಯ ತೀವ್ರವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜೀವ ವಿವಾ ಪಾಲಿಸಿಗಳ ಅವಧಿ ಪೂರ್ವ ಸರಂಡರ್ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ 2.3 ಕೋಟಿ ಪಾಲಿಸಿಗಳನ್ನು ಅವಧಿಗೆ ಮೊದಲೇ ಕ್ಲೋಸ್ ಮಾಡಲಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ 69.78 ಲಕ್ಷ ಪಾಲಿಸಿಗಳನ್ನು ಅವಧಿಗೆ ಮೊದಲು ಕ್ಲೋಸ್ ಮಾಡಲಾಗಿತ್ತು ಎಂದು ‘ದಿ ಇಂಡಿಯನ್ ಎಕ್ಸ್​ಪ್ರೆಸ್​’ ಜಾಲತಾಣ ವರದಿ ಮಾಡಿದೆ. ಕೊವಿಡ್-19 ಪಿಡುಗು ಆವರಿಸಿದ ಎರಡನೇ ವರ್ಷದಲ್ಲಿ ಕುಟುಂಬಗಳು ಅನುಭವಿಸಿದ ಆರ್ಥಿಕ ಬಿಕ್ಕಟ್ಟನ್ನು ಇದು ಸೂಚಿಸುತ್ತದೆ.

ಕೊವಿಡ್ ವ್ಯಾಪಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮಾರ್ಚ್ 24, 2020ರಲ್ಲಿ ದೇಶವ್ಯಾಪಿ ಲಾಕ್​ಡೌನ್ ಘೋಷಿಸಿತು. ಇದರ ಪರಿಣಾಮ ಎನ್ನುವಂತೆ ದೇಶಾದ್ಯಂತ ಕೋಟ್ಯಂತರ ಜನರು ಕೆಲಸ ಕಳೆದುಕೊಂಡರು. ಹಿಂದೆಂದೂ ಕಂಡರಿಯದ ಕಾರ್ಮಿಕ ವಲಸೆ ಹಾಗೂ ನಗರಗಳಿಂದ ಗ್ರಾಮೀಣ ಪ್ರದೇಶಗಳತ್ತ ಜನರು ಹೊರ ನಡೆದ ಬೆಳವಣಿಗೆಗೂ ಈ ಬೆಳವಣಿಗೆ ಕಾರಣವಾಯಿತು. ಆದಾಯ ತೀವ್ರವಾಗಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಜನರಿಗೆ ವಿಮಾ ಪಾಲಿಸಿಗಳ ಕಂತು ಪಾವತಿಸುವುದು ಕಷ್ಟ ಎನಿಸಿತು. ಹಣಕಾಸಿನ ತುರ್ತು ಎದುರಾದ ಹಿನ್ನೆಲೆಯಲ್ಲಿ ಪಾಲಿಸಿಗಳನ್ನು ಮೆಚ್ಯುರಿಟಿ ಅವಧಿಗೆ ಮೊದಲೇ ಸರಂಡರ್ ಮಾಡಿ ಹಣ ಹಿಂಪಡೆಯಲು ಮುಂದಾದರು.

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 24 ವಿಮಾ ಕಂಪನಿಗಳ ಪೈಕಿ 16 ಕಂಪನಿಗಳು ಈ ವಿದ್ಯಮಾನಕ್ಕೆ ಸಾಕ್ಷಿಯಾದವು. 2021-22ರ ಆರ್ಥಿಕ ವರ್ಷದಲ್ಲಿ ಅವಧಿಗೆ ಮೊದಲು ಸರಂಡರ್ ಮಾಡಿದ ಪಾಲಿಸಿಗಳಿಂದ ಗ್ರಾಹಕರು ಸರಾಸರಿ ₹ 62,552 ಪಡೆದಿದ್ದಾರೆ. ಇದೂ ಸಹ 2020-21ರ ಆರ್ಥಿಕ ಅವಧಿಯಲ್ಲಿ ಗ್ರಾಹಕರು ಪಡೆದುಕೊಂಡಿದ್ದ ಮೊತ್ತಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಎನಿಸಿದೆ. 2020-21ರ ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ಸರಂಡರ್ ಮಾಡುವ ಮೂಲಕ​ ಗ್ರಾಹಕರು ಸರಾಸರಿ ₹ 1.67 ಲಕ್ಷ ಪಡೆದಿದ್ದರು.

2021-22ರ ಆರ್ಥಿಕ ವರ್ಷದಲ್ಲಿ ಎಲ್​ಐಸಿಯ 2.12 ಕೋಟಿ ಪಾಲಿಸಿಗಳು ಸರಂಡರ್ ಆಗಿದ್ದು, ಸರಾಸರಿ ₹ 43,306 ಮೊತ್ತವನ್ನು ಪ್ರತಿ ಪಾಲಿಸಿಗೆ ಪಾವತಿಸಲಾಗಿದೆ. ಹಿಂದಿನ ವರ್ಷದಲ್ಲಿ 53.35 ಲಕ್ಷ ಪಾಲಿಸಿಗಳು ಸರಂಡರ್ ಆಗಿದ್ದು, ಸರಾಸರಿ ₹ 1,49,997 ಪಾವತಿಸಲಾಗಿತ್ತು. ಪಾಲಿಸಿಗಳು ಗಮನಾರ್ಹ ಪ್ರಮಾಣದಲ್ಲಿ ಸರಂಡರ್ ಆಗಿರುವುದರಿಂದ ಈ ವರ್ಷದ ಪ್ರೀಮಿಯಂ ಸಂಗ್ರಹ ಹಾಗೂ ಲಾಭ ಗಳಿಕೆ ಮೇಲೆಯೂ ಈ ವಿದ್ಯಮಾನ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

Published On - 8:49 am, Fri, 26 August 22