ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?
Know what is Front Running, an allegation faced by Quant MF: ಅಕ್ರಮ ನಡವಳಿಕೆ ಎಂದು ಪರಿಗಣಿಸಲಾಗಿರುವ ಫ್ರಂಟ್ ರನಿಂಗ್ ಅನ್ನು ಮಾಡುತ್ತಿರುವ ಆರೋಪ ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಕೇಳಿಬಂದಿದೆ. ಸೆಬಿ ತನಿಖೆ ನಡೆಸುತ್ತಿದ್ದು, ಕ್ವಾಂಟ್ನ ಮುಂಬೈ ಕಚೇರಿ ಹಾಗು ಹೈದರಾಬಾದ್ನ ಒಂದು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಮ್ಯೂಚುವಲ್ ಫಂಡ್ ಸಂಸ್ಥೆಯ ದೊಡ್ಡ ನಡೆಯ ಬಗ್ಗೆ ಪೂರ್ವದಲ್ಲೇ ಮಾಹಿತಿ ಪಡೆವ ಡೀಲರ್ಗಳು ಅದನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುವುದಕ್ಕೆ ಫ್ರಂಟ್ ರನಿಂಗ್ ಎನ್ನುತ್ತಾರೆ.

ಮುಂಬೈ, ಜೂನ್ 24: ದಿನೇ ದಿನೇ ಜನಪ್ರಿಯವಾಗುತ್ತಿರುವ ಕ್ವಾಂಟ್ ಮ್ಯೂಚುವಲ್ ಫಂಡ್ (Quant Mutual Fund) ವಿರುದ್ಧ ಸೆಬಿ (SEBI) ಕಣ್ಣು ಬಿದ್ದಿದೆ. ಅಕ್ರಮ ರೀತಿಯ ಒಂದು ಷೇರು ವಹಿವಾಟು ಎನಿಸಿರುವ ಫ್ರಂಟ್ ರನಿಂಗ್ನಲ್ಲಿ (Front Running) ಕ್ವಾಂಟ್ ನಿರತವಾಗಿದೆ ಎಂಬುದು ಸೆಬಿ ಆರೋಪ. ಮುಂಬೈ ಮತ್ತು ಹೈದರಾಬಾದ್ನಲ್ಲಿ ಸೆಬಿ ಅಧಿಕಾರಿಗಳ ತಂಡಗಳು ಕ್ವಾಂಟ್ಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವುದು ನಿನ್ನೆ ಭಾನುವಾರ ಬೆಳಕಿಗೆ ಬಂದಿದೆ. ಕ್ವಾಂಟ್ ಫಂಡ್ನ ಮುಖ್ಯ ಕಚೇರಿ ಮುಂಬೈನಲ್ಲಿದೆ. ಹೈದರಾಬಾದ್ನಲ್ಲಿ ಕ್ವಾಂಟ್ ಮ್ಯೂಚುವಲ್ ಫಂಡ್ನ ಮಾಲೀಕ ಸಂದೀಪ್ ಟಂಡನ್ ಅವರಿಗೆ ಸಂಬಂಧಿಸಿದ ಮತ್ತೊಂದು ಕಚೇರಿ ಇದೆ. ಈ ಎರಡು ಕಡೆ ಸೆಬಿ ಸರ್ಚ್ ಆಪರೇಶನ್ ನಡೆಸಿದೆ. ಶುಕ್ರವಾರ (ಜೂನ್ 21) ಕ್ವಾಂಟ್ನ ಡೀಲರ್ಗಳು ಮತ್ತು ಸಂಬಂಧ ಪಟ್ಟ ವ್ಯಕ್ತಿಗಳನ್ನು ಸೆಬಿ ವಿಚಾರಿಸಿತು ಎಂದು ಮನಿಕಂಟ್ರೋಲ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕ್ವಾಂಟ್ ಮ್ಯೂಚುವಲ್ ಫಂಡ್ನ ಒಟ್ಟು ನಿರ್ವಹಣೆಯ ಸಂಪತ್ತು (ಎಯುಎಂ- ಅಸೆಟ್ ಅಂಡರ್ ಮ್ಯಾನೇಜ್ಮೆಂಟ್) 93,000 ಕೋಟಿ ರೂನಿಂದ 84,000 ಕೋಟಿ ರೂಗೆ ಇಳಿದಿದೆ. ಕುತೂಹಲ ಎಂದರೆ, ಫ್ರಂಟ್ ರನಿಂಗ್ ಆರೋಪ ಎದುರಿಸುತ್ತಿರುವ ಕ್ವಾಂಟ್ ಇತರ ಹೆಚ್ಚಿನ ಮ್ಯೂಚುವಲ್ ಫಂಡ್ ಸಂಸ್ಥೆಗಳ ಸ್ಕೀಮ್ಗಳಿಗಿಂತಲೂ ಹೆಚ್ಚಿನ ಲಾಭ ತರುತ್ತಿದೆ.
ಇದನ್ನೂ ಓದಿ: ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ
ಫ್ರಂಟ್ ರನಿಂಗ್ ಎಂದರೆ ಏನು?
ಫ್ರಂಟ್ ರನಿಂಗ್ ಎಂಬುದು ಒಂದು ರೀತಿಯಲ್ಲಿ ಇನ್ಸೈಡರ್ ಟ್ರೇಡಿಂಗ್ನಂತೆ. ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿ ಮೂರನೇ ವ್ಯಕ್ತಿಗಳಿಗೆ ಲಾಭ ತರುವುದು. ಮ್ಯೂಚುವಲ್ ಫಂಡ್ಗಳು ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಮತ್ತು ಮಾರಲು ಡೀಲರ್ಸ್ ಇತ್ಯಾದಿ ಮಧ್ಯವರ್ತಿಗಳನ್ನು ಬಳಸಿಕೊಳ್ಳುತ್ತವೆ. ಫಂಡ್ಗಳ ಈ ನಡೆಗಳನ್ನು ಪೂರ್ವದಲ್ಲೇ ತಿಳಿಯುವ ಈ ಡೀಲರ್ಗಳು ವೈಯಕ್ತಿಕವಾಗಿ ಲಾಭ ಮಾಡಿಕೊಳ್ಳುವುದೇ ಫ್ರಂಟ್ ರನಿಂಗ್ ಎನ್ನುವುದು.
ಉದಾಹರಣೆಗೆ, ಮ್ಯುಚುವಲ್ ಫಂಡ್ವೊಂದು ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸಿದಾಗ ಅದರ ಬೆಲೆ ಸಹಜವಾಗಿ ಏರುತ್ತದೆ. ಡೀಲರ್ಗಳಿಗೆ ಈ ಮಾಹಿತಿ ಮೊದಲೇ ಗೊತ್ತಾದಾಗ ಅವರು ಹೆಚ್ಚು ಷೇರುಗಳನ್ನು ವೈಯಕ್ತಿಕವಾಗಿ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಮ್ಯೂಚುವಲ್ ಫಂಡ್ನಿಂದ ಹೂಡಿಕೆಯಾದ ಬಳಿಕ ಆ ಸ್ಟಾಕ್ ಬೆಲೆ ಏರುತ್ತದೆ. ಆಗ ಡೀಲರ್ಗಳು ಪ್ರಾಫಿಟ್ ಬುಕಿಂಗ್ ಮಾಡುತ್ತಾರೆ. ಅಂದರೆ ಬೆಲೆ ಹೆಚ್ಚಿರುವ ಷೇರನ್ನು ಮಾರಿ ಲಾಭ ಮಾಡಿಕೊಳ್ಳುತ್ತಾರೆ.
ಹಾಗೆಯೇ, ಮ್ಯೂಚುವಲ್ ಫಂಡ್ ಒಂದು ಸ್ಟಾಕ್ ಅಥವಾ ಸ್ಟಾಕ್ಗಳನ್ನು ಮಾರಲು ಹೊರಟಾಗ ಡೀಲರ್ಸ್ ಅಥವಾ ಮಧ್ಯವರ್ತಿಗಳು ಆ ಸ್ಟಾಕ್ ಅನ್ನು ಮಾರಿಬಿಡುತ್ತಾರೆ. ಇದರಿಂದ ಷೇರು ಬೆಲೆ ಕುಸಿತದ ಪರಿಣಾಮವನ್ನು ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ: ಐದು ದಶಕದಲ್ಲಿ ಭಾರತದ ಸಂಪತ್ತು ಸಾವಿರ ಪ್ರತಿಶತದಷ್ಟು ಹೆಚ್ಚಾಗಲಿದೆ: ಎನ್ಎಸ್ಇ ಸಿಇಒ ಆಶೀಶ್ ಕುಮಾರ್ ಚೌಹಾಣ್
ಈ ರೀತಿಯ ಷೇರು ವಹಿವಾಟುಗಳನ್ನು ಮಧ್ಯವರ್ತಿಗಳು ನೇರವಾಗಿ ಮಾಡದೇ, ತಮ್ಮ ಇತರ ಬೇನಾಮಿ ಖಾತೆಗಳ ಮೂಲಕ ಮಾಡುತ್ತಾರೆ. ಈ ಕೆಲಸವನ್ನು ಫ್ರಂಟ್ ರನಿಂಗ್ ಎಂದು ಕರೆಯಲಾಗುತ್ತದೆ. ಇದು ಮ್ಯೂಚುವಲ್ ಫಂಡ್ ಹಾಗೂ ಹೂಡಿಕೆದಾರರಿಗೆ ಹಾನಿ ತರಬಹುದು. ಹೀಗಾಗಿ, ಫ್ರಂಟ್ ರನಿಂಗ್ ಅನ್ನು ನಿರ್ಬಂಧಿಸಲಾಗಿದೆ.
ಫ್ರಂಟ್ ರನಿಂಗ್ ಹೆಸರು ಕೇಳಿಬಂದಿದ್ದು ಇದೇ ಮೊದಲಲ್ಲ. 2019ರಿಂದ ಈಚೆ ಎಚ್ಡಿಎಫ್ಸಿ, ಡ್ಯೂಶೆ, ಎಕ್ಸಿಸ್ ಮತ್ತು ಆದಿತ್ಯ ಬಿರ್ಲಾ ಮ್ಯೂಚುವಲ್ ಫಂಡ್ ಸಂಸ್ಥೆಗಳ ವಿರುದ್ಧವೂ ಇದೇ ತೆರನಾದ ಫ್ರಂಟ್ ರನಿಂಗ್ ಆರೋಪ ಕೇಳಿಬಂದಿತ್ತು. ಹಲವಾರು ಕೋಟಿ ರೂ ದಂಡ ವಿಧಿಸಲಾಗಿದೆ. ಹಲವು ವ್ಯಕ್ತಿಗಳನ್ನು ಷೇರು ವಹಿವಾಟಿನಿಂದ ನಿರ್ಬಂಧಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ