ನವದೆಹಲಿ, ಫೆಬ್ರುವರಿ 7: ರಸ್ತೆಯಲ್ಲಿ ಹೋಗುವಾಗ ಅಪಘಾತವಾಗುವ ರಿಸ್ಕ್ ಇರುವಂತೆ ಅಂತರ್ಜಾಲದಲ್ಲಿರುವಾಗ ವಂಚನೆಗೊಳಗಾಗುವ ರಿಸ್ಕ್ ಇರಬಹುದು. ಆನ್ಲೈನ್ನಲ್ಲಿ ಹಣಕಾಸು ವಂಚನೆ ನಿಗ್ರಹಿಸಲು ಸರ್ಕಾರ ನಿರಂತರವಾಗಿ ಒಂದಿಲ್ಲೊಂದು ಕ್ರಮ ತೆಗೆದುಕೊಳ್ಳುತ್ತಿರುತ್ತದೆ. ಆರ್ಬಿಐ ಇದೀಗ ಇಂಟರ್ನೆಟ್ ಬ್ಯಾಂಕಿಂಗ್ನ ಸುರಕ್ಷತೆ ಹೆಚ್ಚಿಸಲು ಕೆಲ ಹೊಸ ಕ್ರಮಗಳನ್ನು ಜಾರಿ ಮಾಡುತ್ತಿದೆ. ಆರ್ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಬ್ಯಾಂಕುಗಳಿಗೆ ಮತ್ತು ಹಣಕಾಸು ವಲಯಕ್ಕೆ ಬೇರೆ ಬೇರೆ ಡೊಮೈನ್ಗಳನ್ನು ನೀಡುವುದೂ ಕೂಡ ಈ ಕ್ರಮಗಳಲ್ಲಿ ಒಂದು.
ಭಾರತೀ ಬ್ಯಾಂಕುಗಳಿಗೆ ಪ್ರತ್ಯೇಕವಾದ ‘bank.in’ ಎನ್ನುವ ಇಂಟರ್ನೆಟ್ ಡೊಮೈನ್ ಅನ್ನು ನಿಗದಿ ಮಾಡಲಾಗುತ್ತದೆ. ಈ ವರ್ಷದ ಏಪ್ರಿಲ್ನಿಂದ ಈ ಡೊಮೈನ್ ಹೆಸರಿನ ನೊಂದಣಿ ಶುರುವಾಗುತ್ತದೆ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಂಪಿಸಿ ಸಭೆ ಬಳಿಕ ಆರ್ಬಿಐನ ಎಸ್ಡಿಎಫ್, ರಿಪೋ, ಎಸ್ಎಲ್ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ
ಈ ಡೊಮೈನ್ ಬದಲಾವಣೆಯಿಂದ ಬ್ಯಾಂಕಿಂಗ್ ವಂಚನೆಗಳು ತಡೆಯಲು ನೆರವಾಗಬಹುದು ಎಂದು ನಿರೀಕ್ಷಿಸಿರುವ ಅವರು, ಬ್ಯಾಂಕ್ ಡೊಮೈನ್ ಬದಲಾವಣೆ ಬಳಿಕ ಹಣಕಾಸು ವಲಯದ ಸಂಸ್ಥೆಗಳ (ಎನ್ಬಿಎಫ್ಸಿ) ವೆಬ್ಸೈಟುಗಳಿಗೆ ಪ್ರತ್ಯೇಕವಾದ ‘fin.in’ ಎನ್ನುವ ಡೊಮೈನ್ ಅನ್ನು ಅಳವಡಿಸಲಾಗುವುದು ಎಂದಿದ್ದಾರೆ.
ಡಿಜಿಟಲ್ ಫ್ರಾಡ್ಗಳನ್ನು ನಿಗ್ರಹಿಸಲು ಆರ್ಬಿಐ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಅಡಿಶನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಶನ್ ಅಥವಾ ಎಎಫ್ಎ ಒಂದು. ಪಾಸ್ವರ್ಡ್ ಜೊತೆಗೆ ಒಟಿಪಿ ಮೂಲಕ ಪಡೆಯಲಾಗುವ ಹೆಚ್ಚುವರಿ ದೃಢೀಕರಣ. ಭಾರತದೊಳಗೆ ಡಿಜಿಟಲ್ ಪಾವತಿಗೆ ಇದು ಜಾರಿಯಲ್ಲಿದೆ. ಈಗ ಇದನ್ನು ಅಂತಾರಾಷ್ಟ್ರೀಯ ಡಿಜಿಟಲ್ ಪಾವತಿಗಳಿಗೂ ವಿಸ್ತರಿಸಲಾಗುತ್ತದೆ.
ಇದನ್ನೂ ಓದಿ: ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್ಬಿಐ ಅಂದಾಜು
ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು ಸೈಬರ್ ಅಪಾಯಗಳನ್ನು ನಿಗ್ರಹಿಸಲು ನಿರಂತರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅವಲೋಕಿಸುತ್ತಿರಬೇಕು. ವಂಚನೆ ಘಟನೆ ನಡೆದ ನಂತರದ ಕ್ಷಿಪ್ರ ಸ್ಪಂದನೆ ಇತ್ಯಾದಿ ಕ್ರಮಗಳಿರುವ ಪ್ರಬಲ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಆರ್ಬಿಐ ಗವರ್ನರ್ ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ