Interest Rate: ಆರ್ಬಿಐ ಎಂಪಿಸಿ ಸಭೆ: ಬಡ್ಡಿ ದರ ಏರುತ್ತಾ? ಇಎಂಐ ಹೆಚ್ಚಾಗುತ್ತಾ? ಇಲ್ಲಿದೆ ಡೀಟೇಲ್ಸ್
RBI MPC Meet: ಭಾರತದ ಕೇಂದ್ರೀಯ ಬ್ಯಾಂಕಿನ ಎಂಪಿಸಿ ಸಭೆ ಆಗಸ್ಟ್ 8ರಿಂದ 10ರವರೆಗೆ ನಡೆಯಲಿದೆ. ರೆಪೋ ದರ ಹೆಚ್ಚಿಸಬೇಕೋ ಬೇಡವೋ ಎಂಬುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಂದಿಯ ಕುತೂಹಲ ಕಣ್ಣು ನೆಟ್ಟಿದೆ.

ನವದೆಹಲಿ, ಆಗಸ್ಟ್ 7: ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಹಣಕಾಸು ನೀತಿ ಸಮಿತಿ ಸಭೆ (Monetary Policy Committee) ನಾಳೆ (ಆಗಸ್ಟ್ 8) ಆರಂಭವಾಗುತ್ತಿದೆ. 3 ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು, ಚರ್ಚಿಸಲಾದ ವಿಷಯಗಳ ಬಗ್ಗೆ ಗುರುವಾರ (ಆಗಸ್ಟ್ 10) ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ. ಈ ಸಭೆ ಸಂಬಂಧ ಎಲ್ಲರ ಗಮನ ಇರುವುದು ರೆಪೋ ದರದ ಬಗ್ಗೆ ತೆಗೆದುಕೊಳ್ಳಲಾಗುವ ನಿರ್ಧಾರ. ಹಣದುಬ್ಬರ ತುಸು ಏರಿಕೆ ಆಗಿರುವುದರ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿರುವ ಸಂಗತಿ.
ಫೆಬ್ರುವರಿ ತಿಂಗಳಲ್ಲಿ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅದರಿಂದ ಹಣದುಬ್ಬರ ನಿಯಂತ್ರಣಕ್ಕೆ ಬರತೊಡಗಿತ್ತು. ಆ ಬಳಿಕ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ರೆಪೋ ದರ ಏರಿದರೆ ಸಾಲದ ಇಎಂಐ ಹೆಚ್ಚುತ್ತದೆ?
ರೆಪೋ ದರ ಎಂದರೆ ಆರ್ಬಿಐನ ಬಡ್ಡಿದರ. ಇದು ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿದರ. ಅದೇ ರೀತಿ ರಿವರ್ಸ್ ರಿಪೋ ಎಂಬ ದರವೂ ಇದೆ. ಇದು ಯಾವುದೇ ಕಮರ್ಷಿಯಲ್ ಬ್ಯಾಂಕು ತನ್ನಲ್ಲಿರುವ ಹೆಚ್ಚುವರಿ ಹಣವನ್ನು ಆರ್ಬಿಐನಲ್ಲಿ ಠೇವಣಿ ಇಟ್ಟರೆ ಸಿಗುವ ಬಡ್ಡಿ.
ಇದನ್ನೂ ಓದಿ: Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಎಷ್ಟು ಉಪಯುಕ್ತ? ಭವಿಷ್ಯದ ದಿನಗಳು ಹೇಗಿವೆ?
ಆರ್ಬಿಐ ತನ್ನ ರೆಪೋ ದರವನ್ನು ಹೆಚ್ಚಿಸಿದರೆ ಬ್ಯಾಂಕುಗಳು ಸಹಜವಾಗಿ ಈ ಹೆಚ್ಚಳವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುತ್ತದೆ. ಅದರ ಪರಿಣಾಮವಾಗಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರಗಳು ಹೆಚ್ಚುತ್ತವೆ. ಈ ಹಿಂದೆ ಪಡೆದುಕೊಂಡ ಸಾಲದ ಮೇಲಿನ ಬಡ್ಡಿಯೂ ಪರಿಷ್ಕೃತಗೊಳ್ಳುತ್ತದೆ. ಇಎಂಐ ಪ್ರಮಾಣ ಹೆಚ್ಚುತ್ತದೆ.
ಎರಡು ವರ್ಷದಲ್ಲಿ ಸಾಲದ ಹೊರೆ ಶೇ. 20ರಷ್ಟು ಹೆಚ್ಚು
ಎರಡು ವರ್ಷದ ಹಿಂದೆ, ಅಂದರೆ 2021ರ ಮಧ್ಯಭಾಗದಲ್ಲಿ ಯಾರಾದರೂ ಗೃಹಸಾಲ ಪಡೆದಿದ್ದರೆ ಈಗ ಅವರ ಸಾಲದ ಹೊರೆ ಶೇ. 20ರಷ್ಟು ಹೆಚ್ಚಾಗಿರುತ್ತದೆ. ಎರಡು ವರ್ಷದ ಹಿಂದೆ ಗೃಹಸಾಲಕ್ಕೆ ಬಡ್ಡಿದರ ಕೇವಲ ಶೇ. 6.7ರಷ್ಟಿತ್ತು. ಆರ್ಬಿಐ ಸತತವಾಗಿ ರೆಪೋ ದರ ಏರಿಸಿದ ಪರಿಣಾಮ ಇವತ್ತು ಗೃಹಸಾಲಕ್ಕೆ ಬಡ್ಡಿದರ ಶೇ. 9ರಿಂದ 10ಕ್ಕೆ ಹೋಗಿದೆ.
ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು
ಈ ಬಾರಿ ರೆಪೋ ದರ ಹೆಚ್ಚುತ್ತಾ?
ಆರ್ಬಿಐ ಕೇವಲ ಹಣದುಬ್ಬರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೆಪೋ ದರ ಪರಿಷ್ಕರಣೆ ಮಾಡುವುದಿಲ್ಲ. ಭಾರತದ ಆರ್ಥಿಕತೆಯ ಗತಿ, ಅಂತಾರಾಷ್ಟ್ರೀಯ ವಾತಾವರಣ ಇತ್ಯಾದಿ ಹಲವು ಅಂಶಗಳನ್ನು ಆರ್ಬಿಐ ಪರಿಗಣಿಸಿ ಆ ಬಳಿಕ ರೆಪೋ ದರ ನಿರ್ಧರಿಸುತ್ತದೆ. ರೆಪೋ ರೇಟ್ ಏರಿಕೆಯಿಂದ ಹಣದುಬ್ಬರಕ್ಕೆ ಕಡಿವಾಣ ಹಾಕಬಹುದಾದರೂ ಸೈಡ್ ಎಫೆಕ್ಟ್ ಆಗಿ ಆರ್ಥಿಕತೆ ತುಸು ಮಂದಗೊಳ್ಳುವುದು ಹೌದು.
ಕೆಲ ತಜ್ಞರ ಅಂದಾಜು ಪ್ರಕಾರ ಆರ್ಬಿಐ ಈ ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ