
ನವದೆಹಲಿ, ಏಪ್ರಿಲ್ 6: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿಯ ದ್ವೈಮಾಸಿಕ ಸಭೆ ಇವತ್ತು ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಬಹಳ ಬಿಗಡಾಯಿಸಿದ ಕ್ಲಿಷ್ಟಕರ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಏಪ್ರಿಲ್ 8ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಿದ್ದಾರೆ.
ಜಾಗತಿಕ ಕಚ್ಛಾ ತೈಲ ಬೆಲೆ ಬಹಳ ಎತ್ತರಕ್ಕೆ ಹೋಗಿದೆ. ಪಶ್ಚಿಮ ಏಷ್ಯಾ ಪ್ರದೇಶ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಜಗತ್ತಿನ ಹೆಚ್ಚಿನ ದೇಶಗಳು ಇದರ ಪರಿಣಾಮ ಎದುರಿಸುತ್ತಿವೆ. ಭಾರತಕ್ಕೂ ಬಹಳ ಬಾಧೆಯಾಗಿದೆ. ಜನಸಾಮಾನ್ಯರಿಗೆ ಹೊರೆಯಾಗಬಾರದೆಂದು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಇಂಥ ಪರಿಸ್ಥಿತಿಯಲ್ಲಿ ಆರ್ಬಿಐ ಮುಂದೆ ಬಹಳ ದೊಡ್ಡ ಸವಾಲುಗಳು ಇವೆ ಎನ್ನುವುದು ನಿಜ. ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ಒಂದೊಂದು ನಿರ್ಧಾರದ ಹಿಂದೆಯೂ ಸಾಕಷ್ಟು ಪರಾಮರ್ಶೆಗಳು ನಡೆಯುತ್ತವೆ ಎನ್ನುವ ಆಶಯ ಇದೆ.
ಇದನ್ನೂ ಓದಿ: ಎಐ ಕಾಲದಲ್ಲಿ ಎಂಜಿನಿಯರ್ ಜಪ ಬಿಡಿ, ನೀವು ಊಹಿಸಲೂ ಕಷ್ಟವಾದ ನಾನಾ ಉದ್ಯಮಗಳು ಸೃಷ್ಟಿಯಾಗುತ್ತವಂತೆ
ಎಸ್ಬಿಐ ರಿಸರ್ಚ್ ಸಂಸ್ಥೆ ಪ್ರಕಾರ ಆರ್ಬಿಐ ಈ ಬಾರಿಯೂ ರಿಪೋ ದರದಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ. ಹಣದುಬ್ಬರ ಏರುಗತಿಯಲ್ಲಿರುವುದರಿಂದ ಬಡ್ಡಿ ದರ ಇಳಿಸುವುದು ಮತ್ತಷ್ಟು ಅಪಾಯ ತಂದುಕೊಂಡಂತಾಗಬಹುದು. ಈ ಕಾರಣಕ್ಕೆ ರಿಪೋ ದರವನ್ನು ಶೇ. 5.25ರಲ್ಲೇ ಮುಂದುವರಿಸಬಹುದು ಎನ್ನುವ ಅಭಿಪ್ರಾಯಗಳಿವೆ.
ಕಳೆದ ಮೂರು ವರ್ಷದಲ್ಲಿ ಆರ್ಬಿಐ ತನ್ನ ರಿಪೋ ದರವನ್ನು 125 ಮೂಲಾಂಕಗಳಷ್ಟು ಇಳಿಸಿದೆ. 2023ರ ಫೆಬ್ರುವರಿಯಲ್ಲಿ ಶೇ. 6.50ರಷ್ಟು ರಿಪೋ ದರ ಇತ್ತು. 2025ರ ಡಿಸೆಂಬರ್ ವೇಳೆಗೆ ನಾಲ್ಕೈದು ಬಾರಿ ರಿಪೋ ದರ ಇಳಿಕೆಯಾಗಿ ಶೇ. 5.25ಕ್ಕೆ ಬಂದು ನಿಂತಿದೆ. 2026ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿದರದ ಯಥಾಸ್ಥಿತಿ ಉಳಿಸಲಾಯಿತು. ಈ ಬಾರಿಯೂ ಅದೇ ಮುಂದುವರಿಯಬಹುದು.
ಇದನ್ನೂ ಓದಿ: ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್ಪ್ರೆಸ್ವೇ ಮ್ಯಾಜಿಕ್
ಬಡ್ಡಿದರ ಯಥಾಸ್ಥಿತಿಯಲ್ಲಿ ಇರುವ ನಿರೀಕ್ಷೆಯಲ್ಲಿ ಬ್ಯಾಂಕುಗಳ ಬಡ್ಡಿದರದಲ್ಲಿ ಸ್ಥಿರತೆ ಸಿಕ್ಕಿದೆ. ಗೃಹ ಸಾಲ ಪಡೆಯುವ ಗ್ರಾಹಕರಿಗೂ ನಿರ್ದಿಷ್ಟತೆ ಸಿಕ್ಕಂತಾಗಿದೆ. ಈ ಹಂತದಲ್ಲಿ ಆರ್ಬಿಐನಿಂದ ರಿಪೋ ದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ