ಎಐ ಕಾಲದಲ್ಲಿ ಎಂಜಿನಿಯರ್ ಜಪ ಬಿಡಿ, ನೀವು ಊಹಿಸಲೂ ಕಷ್ಟವಾದ ನಾನಾ ಉದ್ಯಮಗಳು ಸೃಷ್ಟಿಯಾಗುತ್ತವಂತೆ
With AI around, People want to become creative artist, not engineer, explains Kevin O'leary: ಎಐನಿಂದ ಉದ್ಯೋಗಗಳು ಕಳೆದುಹೋಗುತ್ತವೆ ಎನ್ನುವುದು ಸುಳ್ಳು. ಎಐನಿಂದ ಊಹಿಸಲೂ ಸಾಧ್ಯವಿಲ್ಲದ ಹೊಸ ಉದ್ಯಮಗಳು ಸೃಷ್ಟಿಯಾಗುತ್ತವೆ ಎಂದು ಕೆನಡಿಯನ್ ಉದ್ಯಮಿ ಕೆವಿನ್ ಒಲಿಯಾರಿ ಹೇಳಿದ್ದಾರೆ. ಹಿಂದೆ ಎಲ್ಲರೂ ಎಂಜಿನಿಯರ್ ಆಗಬೇಕು ಎಂದು ತವಕಿಸುತ್ತಿದ್ದರು. ಈಗ ಎಐ ಕಾಲದಲ್ಲಿ ಸೃಜನಶೀಲ ಕಲಾವಿದರಿಗೆ ಬೇಡಿಕೆ ಇದೆ ಎಂದಿದ್ದಾರೆ.

ನವದೆಹಲಿ, ಏಪ್ರಿಲ್ 6: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial Intelligence technology) ಅಡಿ ಇಟ್ಟ ಮೇಲೆ ಖುಷಿಪಡುವ ಮತ್ತು ದುಃಖಪಡುವ ಸಂಗತಿಗಳೆರಡೂ ಸಮಾನವಾಗಿ ಘಟಿಸುತ್ತಿವೆ. ಎಐ ಒಳಿತೋ, ಕೆಡುಕೋ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಜಿಜ್ಞಾಸೆ ಉದ್ಯಮ ವಲಯದವರನ್ನೂ ಬಿಟ್ಟಿಲ್ಲ. ಅಲ್ಲಿಯೂ ಭಿನ್ನಾಭಿಪ್ರಾಯಗಳು, ಅಭಿಪ್ರಾಯಭೇದಗಳು ಹೆಚ್ಚಿವೆ. ಅವರಲ್ಲೂ ಗೊಂದಲಗಳಿವೆ. ಎಐ ತಜ್ಞರೊಳಗೆಯೇ ಅಭಿಪ್ರಾಯಗಳು ಬೇರೆ ಬೇರೆ ಇವೆ.
ಕೆನಡಾದ ಶ್ರೀಮಂತ ಉದ್ಯಮಿ ಕೆವಿನ್ ಓಲಿಯಾರಿ ಅವರು ಎಐ ವಿಚಾರದ ಬಗ್ಗೆ ಬಹಳ ಕುತೂಹಲ ಎನಿಸುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮನುಷ್ಯನ ಸೃಜನಶೀಲತೆಯ ಶಕ್ತಿಯು ಹಿಂದೆಂದಿಗಿಂತಲೂ ಹೆಚ್ಚು ಮೌಲ್ಯಯುತ ಎನಿಸುವಂತೆ ಮಾಡುತ್ತಿದೆ ಎಐ. ಐಡಿಯಾಗಳನ್ನು ಜಾರಿಗೊಳಿಸುವ ಶಕ್ತಿ ಹೊಂದಿದವರಿಗೆ ಒಳ್ಳೆಯ ಅವಕಾಶಗಳಿವೆ. ಹಿಂದೆಲ್ಲಾ ಎಲ್ಲರೂ ಎಂಜಿನಿಯರ್, ಎಂಜಿನಿಯರ್ ಆಗಬೇಕು ಎನ್ನುತ್ತಿದ್ದರು. ಈಗ ಆರ್ಟಿಸ್ಟ್ ಆಗಬೇಕೆಂದು ಬಯಸುವ ಕಾಲ ಮರಳಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್ಪ್ರೆಸ್ವೇ ಮ್ಯಾಜಿಕ್
ಉದ್ಯೋಗಗಳ ನಾಶಕ್ಕಿಂತ ಹೊಸ ಉದ್ಯಮಗಳ ಸ್ಥಾಪನೆ
ಎಐನಿಂದ ಎಲ್ಲರೂ ನಿರುದ್ಯೋಗಿಗಳಾಗುತ್ತಾರೆ ಎನ್ನುವ ವಾದವನ್ನು ಕೆವಿನ್ ಒಲಿಯಾರಿ ತಿರಸ್ಕರಿಸಿದ್ದಾರೆ. ‘ಎಐ ಉದ್ಯೋಗಗಳನ್ನು ಕಿತ್ತುಕೊಳ್ಳುವುದಕ್ಕಿಂತ ಹೆಚ್ಚಾಗಿ ಹೊಸ ಉದ್ಯಮಗಳನ್ನು ಸೃಷ್ಟಿಸುತ್ತಿದೆ. ಯಾರೂ ಊಹಿಸದೇ ಇರುವಂತಹ ಕ್ಷೇತ್ರಗಳಲ್ಲಿ ಅವಕಾಶಗಳು ಹುಟ್ಟಲಿವೆ. ಆರ್ಥಿಕತೆಯ ಎಲ್ಲಾ 11 ಕ್ಷೇತ್ರಗಳಲ್ಲೂ ಉತ್ಪನ್ನಶೀಲತೆ ಹೆಚ್ಚಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಯೇಟಿವಿಟಿಗೆ ಮಹತ್ವ
ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಿದ್ದ ಕೆನಡಿಯನ್ ಉದ್ಯಮಿ ಕೆವಿನ್ ಓಲಿಯಾರಿ ಅವರು ಸೃಜನಶೀಲತೆಗೆ ಈಗ ಹೆಚ್ಚಿನ ಬೆಲೆ ಸಿಗುತ್ತಿರುವುದನ್ನು ಗುರುತಿಸಿದ್ದಾರೆ. ಕ್ರಿಯೇಟಿವ್ ಸ್ಟೋರಿಟೆಲ್ಲಿಂಗ್ ಹಿಂದೆಂದಿಗಿಂತಲೂ ಮಹತ್ವದ್ದಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಇವರ ಪಾತ್ರ ಮುಖ್ಯ ಎಂದು ಒಲಿಯಾರಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




