RBI: ಕಡಿಮೆಯಾಗಲಿದೆ ಅಡುಗೆ ಎಣ್ಣೆ ದರ, ಆರ್ಥಿಕ ಕುಸಿತದ ಆತಂಕ ಬೇಡ; ಜನರಿಗೆ ಧೈರ್ಯ ತುಂಬಿದ ಆರ್​ಬಿಐ

ನೆರೆಯ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಜನರಲ್ಲಿ ಆತಂಕ ಮೂಡಿತ್ತು. ಹಣಕಾಸು ಸಂಸ್ಥೆಗಳು ಸದೃಢವಾಗಿವೆ ಎನ್ನುವ ಮೂಲಕ ಈ ಆತಂಕಗಳನ್ನು ಆರ್​ಬಿಐ ಅಲ್ಲಗಳೆದಿದೆ.

RBI: ಕಡಿಮೆಯಾಗಲಿದೆ ಅಡುಗೆ ಎಣ್ಣೆ ದರ, ಆರ್ಥಿಕ ಕುಸಿತದ ಆತಂಕ ಬೇಡ; ಜನರಿಗೆ ಧೈರ್ಯ ತುಂಬಿದ ಆರ್​ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 05, 2022 | 11:29 AM

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​ನ (Reserve Bank of India – RBI) ಹಣಕಾಸು ನಿರ್ವಹಣಾ ಸಮಿತಿಯು (Monetary Policy Committee – MPC) ದ್ವೈಮಾಸಿಕ ಸಭೆಯ ನಂತರ ಪ್ರಕಟವಾಗಿ ರೆಪೊ ದರಗಳನ್ನು ಇಡೀ ಜಗತ್ತು ಕಾತರದಿಂದ ನಿರೀಕ್ಷಿಸುತ್ತಿರುತ್ತದೆ. ರೆಪೊ ದರಗಳನ್ನು ಪ್ರಕಟಿಸಲೆಂದು ಆರ್​ಬಿಐ ಗವರ್ನರ್ ನಡೆಸುವ ಸುದ್ದಿಗೋಷ್ಠಿಯಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಹಲವು ಮಾಹಿತಿ ಇರುತ್ತದೆ. ಆರ್​ಬಿಐನ ಆರ್ಥಿಕ ಪರಿಣಿತರ ಒಳನೋಟದೊಂದಿಗೆ ಸಿದ್ಧವಾಗುವ ಈ ವರದಿಯು ಭಾರತ ಸರ್ಕಾರದ ಹಣಕಾಸು ಇಲಾಖೆಯ ಮುಂದಿನ ನಡೆಗಳ ಬಗ್ಗೆ ಇಣುಕುನೋಟ ನೀಡುವುದರೊಂದಿಗೆ ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.

ನೆರೆಯ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಜನರಲ್ಲಿ ಆತಂಕ ಮೂಡಿತ್ತು. ಬಹುಶಃ ಇದನ್ನು ಗಮನದಲ್ಲಿ ಇರಿಸಿಕೊಂಡೇ ಇರಬಹುದು, ಆರ್​ಬಿಐ ಗವರ್ನರ್ ದೇಶದ ವಿದೇಶಿ ಮೀಸಲು ನಿಧಿಯ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ‘ಭಾರತದ ಬ್ಯಾಂಕ್​ಗಳು ಸದೃಢವಾಗಿವೆ’ ಎಂದು ಘೋಷಿಸುವ ಮೂಲಕ ಭಾರತಕ್ಕೆ ತಕ್ಷಣದ ಆತಂಕ ಇಲ್ಲ ಎಂದು ಸಾರಿ ಹೇಳಿದ್ದಾರೆ. ಈ ಘೋಷಣೆಗಳು ದೇಶದ ಆರ್ಥಿಕ ವಲಯದಲ್ಲಿ ಆಶಾಭಾವನೆ ಹುಟ್ಟುಹಾಕಿದ್ದು, ಷೇರುಪೇಟೆಯ ಪ್ರಾತಿನಿಧಿಕ ಸೂಚ್ಯಂಕಗಳಾದ ಎನ್​ಎಸ್​ಇ ಮತ್ತು ಬಿಎಸ್​ಇ ಏರಿಕೆ ಕಂಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನಿರ್ವಹಣಾ ಸಮಿತಿಯು ರೆಪೊ ದರಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಈ ವಿಷಯವನ್ನು ರಿಸರ್ವ್​ ಬ್ಯಾಂಕ್ ಗವರ್ನರ್ ಶಕ್ತಿಕಾಂತ್​ ದಾಸ್ ಶುಕ್ರವಾರ (ಆಗಸ್ಟ್ 5) ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ರೆಪೊ ದರವನ್ನು 50 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಲೆಂಡಿಂಗ್ ದರವು ಶೇ 5.4ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಸಮಗ್ರ ರಾಷ್ಟ್ರೀಯ ಉತ್ಪನ್ನದ (Gross Domestic Product – GDP) ಶೇ 7.2ರ ಬೆಳವಣಿಗೆಯ ನಿರೀಕ್ಷೆಯನ್ನು ಆರ್​ಬಿಐ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಜಾಗತಿಕ ಆರ್ಥಿಕ ವಿದ್ಯಮಾನಗಳ ಪ್ರಭಾವ ಭಾರತವನ್ನು ಪ್ರಭಾವಿಸುತ್ತಿದೆ. ಈ ನಡುವೆಯೂ ಆರ್​ಬಿಐ ಉತ್ತಮ ಜಿಡಿಪಿ ಮುನ್ನೋಟದ ಸಾಧ್ಯತೆ ತೋರಿಸಿರುವುದು ಜನರಲ್ಲಿ ಆಶಾಭಾವನೆ ಹುಟ್ಟುಹಾಕಿದೆ.

ಉಕ್ರೇನ್-ರಷ್ಯಾ ಸಂಘರ್ಷ, ಚೈನಾ-ಅಮೆರಿಕ ನಡುವೆ ಸಂಬಂಧ ಹದಗೆಡುತ್ತಿರುವುದು ಹಾಗೂ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಆರ್​ಬಿಐ ತಗ್ಗಿಸಬಹುದು ಎಂದು ವಿಶ್ಲೇಷಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ಬಿಐ ಗವರ್ನರ್, ‘ಭಾರತದಲ್ಲಿ ಆರ್ಥಿಕ ಸುಧಾರಣೆಯ ನಿಚ್ಚಳ ಲಕ್ಷಣಗಳು ಕಾಣಿಸುತ್ತಿವೆ. ಸುಧಾರಣೆಯಾಗುತ್ತಿರುವ ವಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು. ಕಳೆದ ಮೂರು ತಿಂಗಳಿನಿಂದ ಭಾರತದ ಹಣದುಬ್ಬರ ಪ್ರಮಾಣವು ಶೇ 7ಕ್ಕಿಂತಲೂ ಹೆಚ್ಚಾಗಿಯೇ ಇದೆ. ಆದರೆ ಇಳಿಕೆ ದಾಖಲಿಸುತ್ತಿರುವುದು ಆಶಾದಾಯ ಬೆಳವಣಿಗೆಯಾಗಿದೆ. ಕಳೆದ ಏಪ್ರಿಲ್​ನಲ್ಲಿ ಹಣದುಬ್ಬರ ಪ್ರಮಾಣವು ಶೇ 7.79 ಇತ್ತು. ರೆಪೊ ದರ ಹೆಚ್ಚಿಸುವ ನಿರ್ಧಾರ ಪ್ರಕಟವಾದ ನಂತರ ಆರ್​ಬಿಐ ಬಾಂಡ್​ಗಳ ಯೀಲ್ಡ್​ ಹೆಚ್ಚಾಗಿದೆ. ದರ ಹೆಚ್ಚಳಕ್ಕೆ ಮೊದಲು ಶೇ 7.10 ಇದ್ದ ಯೀಲ್ಡ್ ಪ್ರಮಾಣ, ಘೋಷಣೆಯ ನಂತರ ಶೇ 7.23ಕ್ಕೆ ಏರಿಕೆಯಾಗಿದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯ 10 ಮುಖ್ಯಾಂಶಗಳಿವು…

  1. ಬ್ಯಾಂಕ್​ಗಳು ಠೇವಣಿ ಮೇಲಿನ ಬಡ್ಡಿ ಹೆಚ್ಚಿಸಬೇಕು. ಇದರಿಂದ ಹಣಕಾಸು ಸಂಸ್ಥೆಗಳ ವಹಿವಾಟಿಗೆ ನಗದು ಲಭ್ಯತೆ ಹೆಚ್ಚಾಗುತ್ತದೆ.
  2. ಖಾದ್ಯ ತೈಲಗಳ (ಅಡುಗೆ ಎಣ್ಣೆ) ಬೆಲೆ ಮತ್ತಷ್ಟು ಕಡಿಮೆಯಾಗಲಿದೆ
  3. ಭಾರತದಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಬೀಳುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆ ಆಶಾದಾಯಕವಾಗಿದೆ.
  4. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಬ್ಯಾರೆಲ್​ಗೆ 105 ಡಾಲರ್​ಗೆ ಸೀಮಿತವಾಗುವ ನಿರೀಕ್ಷೆಯಿದೆ.
  5. ಬ್ಯಾಂಕ್​ಗಳ ಸಾಲದ ವಹಿವಾಟು ಶೇ 14ಕ್ಕೆ ಹೆಚ್ಚಾಗಿದೆ. ಒಂದು ವರ್ಷದ ಹಿಂದೆ ಈ ಪ್ರಮಾಣ ಶೇ 5.5 ಇತ್ತು.
  6. ದೇಶೀಯ ಆರ್ಥಿಕತೆಯು ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಾಣುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿದೆಜಾಗತಿಕ ಅರ್ಥಿಕ ವಿದ್ಯಮಾನಗಳು, ವಿವಿಧ ದೇಶಗಳ ನಡುವಣ ಸಂಘರ್ಷ ಪರಿಸ್ಥಿತಿ ಭಾರತದ ಆರ್ಥಿಕತೆಯ ಮೇಲೆ ಒತ್ತಡ ತರುತ್ತಿದೆ
  7. ಗ್ರಾಹಕ ಹಣದುಬ್ಬರ ಪ್ರಮಾಣ ಶೇ 6ಕ್ಕಿಂತ ಹೆಚ್ಚಾಗಿಯೇ ಉಳಿಯಲಿದೆ. ಆದರೂ ಜಿಡಿಪಿ ಪ್ರಗತಿಯ ಮುನ್ನಟವನ್ನು ಶೇ 7.2ಕ್ಕೆ ಉಳಿಸಿಕೊಳ್ಳುತ್ತೇವೆ.
  8. ಭಾರತದ ವಿದೇಶಿ ಮೀಸಲು ನಿಧಿ (India’s forex reserves) ಆರೋಗ್ಯಕರ ಮಟ್ಟದಲ್ಲಿದೆ. ಇದು ಜಾಗತಿಕ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯುತ್ತದೆ.
  9. ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಶೀಘ್ರದಲ್ಲಿಯೇ ಹೊರಹೊಮ್ಮಲಿದೆ. ಮೂಲ ಅಂಶಗಳು ಇಂದಿಗೂ ಸದೃಢವಾಗಿಯೇ ಇವೆ.
  10. ಭಾರತದಿಂದ ವಿದೇಶಿ ಹೂಡಿಕೆದಾರರು ಬಂಡಾವಳ ಹಿಂಪಡೆಯುವುದನ್ನು ಮುಂದುವರಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ 13.3 ಶತಕೋಟಿ ಡಾಲರ್ ಮೊತ್ತದಷ್ಟು ಬಂಡವಾಳ ದೇಶದಿಂದ ಹೊರಹೋಗಿದೆ. ಭಾರತದ ಹಣಕಾಸು ಸಂಸ್ಥೆಗಳು ಸದೃಢವಾಗಿದ್ದು, ಇವುಗಳ ಬಂಡವಾಳ ತೃಪ್ತಿದಾಯಕ ಮಟ್ಟದಲ್ಲಿ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada