ಬೆಂಗಳೂರು: ಬೈಕ್, ಪೀಠೋಕರಣ ಇತ್ಯಾದಿಯನ್ನು ಜನರಿಗೆ ಬಾಡಿಗೆಯ ಮೇಲೆ ಕೊಡುವ ಆನ್ಲೈನ್ ರೆಂಟಲ್ ಕಂಪನಿ ರೆಂಟೋಮೋಜೋದಲ್ಲಿ (RentoMojo) ಡಾಟಾ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರೆಂಟೋಮೋಜೋ ಸಂಸ್ಥೆಯೇ ಈ ಸಂಗತಿಯನ್ನು ಹೊರಗೆಡವಿದ್ದು, ತಾನು ಪ್ರಾಧಿಕಾರಗಳ ಗಮನಕ್ಕೆ ತಂದಿದ್ದು, ತನಿಖೆ ಕೂಡ ಆಗುತ್ತಿದೆ ಎಂದು ಹೇಳಿದೆ. 2014ರಲ್ಲಿ ಆರಂಭವಾದ ರೆಂಟೋಮೋಜೋ ಬೆಂಳೂರು, ಮುಂಬೈ, ದೆಹಲಿ ಮತ್ತು ಪುಣೆ ನಗರಗಳಲ್ಲಿ ರೆಂಟಲ್ ಸೇವೆ ಒದಗಿಸುತ್ತಿದೆ. ಇದಕ್ಕೆ ಒಂದೂವರೆ ಲಕ್ಷದಷ್ಟು ಜನರು ಸಬ್ಸ್ಕ್ರೈಬರ್ ಆಗಿದ್ದಾರೆ. ಈಗ ರೆಂಟೋಮೋಜೋದಲ್ಲಿ ಡಾಟಾ ಕಳ್ಳತನ (Data Breach) ಆಗಿರುವುದು ಈ ಒಂದೂವರೆ ಲಕ್ಷ ಮಂದಿಗೆ ಆತಂಕ ತಂದಿದೆ. ಆದರೆ, ಕಂಪನಿಯು ತನ್ನ ಸಬ್ಸ್ಕ್ರೈಬರ್ಗಳೆಲ್ಲರಿಗೂ ಇಮೇಲ್ ಕಳುಹಿಸಿದ್ದು, ತೀರಾ ಸೂಕ್ಷ್ಮ ಮಾಹಿತಿಗಳು ದುಷ್ಕರ್ಮಿಗಳ ಕೈಗೆ ಸಿಗುವುದಿಲ್ಲ ಎಂದು ಭರವಸೆ ನೀಡಿದೆ ಎನ್ನಲಾಗಿದೆ.
‘ನಮ್ಮ ಒಂದು ಡಾಟಾಬೇಸ್ನಲ್ಲಿ ಅನಧಿಕೃತವಾಗಿ ಯಾರೋ ಪ್ರವೇಶಿಸಿರುವುದನ್ನು ನಮ್ಮ ತಂಡ ಇತ್ತೀಚೆಗೆ ಗಮನಿಸಿದೆ. ನಮ್ಮ ಗ್ರಾಹಕರ ಮಾಹಿತಿಯನ್ನು ಅನಧಿಕೃತವಾಗಿ ಪಡೆಯಲು ಇವರಿಗೆ ಸಾಧ್ಯವಾಗಿರುವಂತೆ ತೋರುತ್ತಿದೆ. ಇದರಲ್ಲಿ ಕ್ಲೌಡ್ ಕಾನ್ಫಿಗರೇಶನ್ನಲ್ಲಿರುವ ಲೋಪವನ್ನು ಬಳಸಿ ಖಾಸಗಿಯಾಗಿ ಗುರುತಿಸಬಲ್ಲ ಡಾಟಾ ಕದ್ದಿರುವುದೂ ಒಳಗೊಂಡಿದೆ’ ಎಂದು ರೆಂಟೋಮೋಜೋ ತನ್ನ ಇಮೇಲ್ನಲ್ಲಿ ತಿಳಿಸಿದೆ.
ಗ್ರಾಹಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಇತ್ಯಾದಿ ಹಣಕಾಸು ಸಾಧನಗಳ ಮಾಹಿತಿಯನ್ನು ಹ್ಯಾಕರ್ಗಳು ಕದಿಯಲು ಆಗುವುದಿಲ್ಲ. ತನ್ನ ಆ್ಯಪ್ ಮತ್ತು ಪೋರ್ಟಲ್ನ ಡಾಟಾಬೇಸ್ನಲ್ಲಿ ಈ ಯಾವುದೇ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ, ಡಾಟಾಬೇಸ್ ಹ್ಯಾಕ್ ಮಾಡಿದವರಿಗೆ ಜನರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮಾಹಿತಿ ಗೊತ್ತಾಗುವುದಿಲ್ಲ ಎಂದು ರೆಂಟೋಮೋಜೋ ಸ್ಪಷ್ಟಪಡಿಸಿದೆ.
ರೆಂಟೋಮೋಜೋದ ಕೆಲ ಗ್ರಾಹಕರು ಡಾಟಾ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಾಜಕುಮಾರ್ ಎಂಬ ವ್ಯಕ್ತಿ, ತನಗೆ ಹ್ಯಾಕರ್ಗಳು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ನನ್ನ ಖಾಸಗಿ ಮಾಹಿತಿ ಬಿಡುಗಡೆ ಮಾಡುವಂತೆ ಹ್ಯಾಕರ್ಸ್ ಬೆದರಿಸುತ್ತಿದ್ದಾರೆ ಎಂದು ಇವರು ಟ್ವೀಟ್ ಮಾಡಿದ್ದಾರೆ.
ರೋನಕ್ ಪಾಂಡ್ಯ ಎಂಬುವವರು, ಈ ಹ್ಯಾಕರ್ಸ್ ದಾಳಿಯಿಂದ ತನಗೆ ಯಾವುದೇ ರೀತಿಯ ನಷ್ಟವಾದರೂ ಅದನ್ನು ರೆಂಟೋಮೋಜೋ ಭರಿಸಬೇಕು. ತಮ್ಮ ಟ್ವೀಟ್ ಅನ್ನೇ ದೂರೆಂದು ಪರಿಗಣಿಸಬೇಕು ಎಂದು ಬರೆದಿದ್ದಾರೆ.
ತನ್ನ ಗ್ರಾಹಕರ ದತ್ತಾಂಶಗಳ ಸುರಕ್ಷತೆಗೆ ತಾನು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ರೆಂಟೋಮೋಜೋ ಹೇಳಿದೆ. ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ:
ಗ್ರಾಹಕರ ಮಾಹಿತಿ ಸುರಕ್ಷತೆಗೆ ಮತ್ತು ಕಂಪನಿಯ ಡಾಟಾಬೇಸ್ ಸುರಕ್ಷತೆಗೆ ಇವಿಷ್ಟು ಕ್ರಮಗಳನ್ನು ಕೈಗೋಳ್ಳಲಾಗಿದೆ ಎಂದು ರೆಂಟೋಮೋಜೋ ಹೇಳಿದೆ.