
ನವದೆಹಲಿ, ಅಕ್ಟೋಬರ್ 12: ಭಾರತದ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ದರ ಸೆಪ್ಟೆಂಬರ್ನಲ್ಲಿ ಶೇ. 5.54 ಎಂದು ದಾಖಲಾಗಿದೆ. ಆಗಸ್ಟ್ನಲ್ಲಿ ಹಣದುಬ್ಬರ ಶೇ. 4.83 ಇತ್ತು. ಸೆಪ್ಟೆಂಬರ್ನಲ್ಲಿ ಬೆಲೆ ಏರಿಕೆ ಮಟ್ಟ ತೀಕ್ಷ್ಣವಾಗಿ ಹೆಚ್ಚಲು ಆಹಾರ ಬೆಲೆಗಳ ಗಣನೀಯ ಏರಿಕೆಯೇ ಕಾರಣ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ.
ಆಗಸ್ಟ್ನಲ್ಲಿ ಶೇ. 5.97 ಇದ್ದ ಆಹಾರ ಹಣದುಬ್ಬರ ಸೆಪ್ಟೆಂಬರ್ನಲ್ಲಿ ಶೇ. 7.74ಕ್ಕೆ ಏರಿದೆ. ಈ ಆಹಾರ ಗುಂಪಿನಲ್ಲಿ ಹಲವು ಅಗತ್ಯ ಆಹಾರವಸ್ತುಗಳ ಬೆಲೆ ಹೆಚ್ಚಳವಾಗಿದೆ. ಅದರಲ್ಲೂ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಹಣ್ಣುಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿದೆ.
ಗ್ರಾಮೀಣ ಭಾಗದಲ್ಲಿ ಹಣದುಬ್ಬರ ದರ ಹೆಚ್ಚಿನ ಮಟ್ಟದಲ್ಲಿರುವುದು ಮುಂದುವರಿದಿದೆ. ದತ್ತಾಂಶದ ಪ್ರಕಾರ ಗ್ರಾಮೀನ ಹಣದುಬ್ಬರ ಶೇ. 5.24ರಿಂದ ಶೇ. 6.08ಕ್ಕೆ ಏರಿದೆ. ನಗರ ಹಣದುಬ್ಬರ ಶೇ. 4.31ರಿಂದ ಶೇ. 4.88ಕ್ಕೆ ಏರಿದೆ.
ಇದನ್ನೂ ಓದಿ: 2026-27ರಲ್ಲಿ ಜಿಡಿಪಿ ಶೇ. 7.1; ಹಣದುಬ್ಬರ ಶೇ. 5.2: ಆರ್ಬಿಐ ಅಂದಾಜು
ಆಹಾರ ಹಣದುಬ್ಬರದಲ್ಲಿ ಈರುಳ್ಳಿಯ ಪಾತ್ರ ಹೆಚ್ಚಿದೆ. ಆಗಸ್ಟ್ನಲ್ಲಿ ಶೇ. 48.78ರಷ್ಟು ಏರಿದ್ದ ಈರುಳ್ಳಿ ಬೆಲೆ ಉಬ್ಬರ ಸೆಪ್ಟೆಂಬರ್ನಲ್ಲಿ 108.09 ಪ್ರತಿಶತದಷ್ಟು ಏರಿದೆ. ಶುಂಠಿ ಶೇ. 62.85, ಬೆಳ್ಳುಳ್ಳಿ ಶೇ. 54.62 ಮತ್ತು ನಿಂಬೆ ಹಣ್ಣು ಶೇ. 36.41ರಷ್ಟು ಬೆಲೆ ಏರಿಕೆ ಆಗಿದೆ.
ಆಲೂಗಡ್ಡೆ, ಟೊಮೆಟೋ, ಬೆಂಡೆಕಾಯಿ ಮತ್ತು ತೆಂಗಿನ ಬೆಲೆಗಳು ಕಡಿಮೆಗೊಂಡಿರುವುದರಿಂದ ಹಣದುಬ್ಬರ ತೀರಾ ಅತಿಯಾಗಿ ಏರಿಕೆಯಾಗದಂತೆ ಉಳಿಯಲು ಸಹಾಯವಾಗಿದೆ.
ತಮಿಳುನಾಡಿನಲ್ಲಿ ಸೆಪ್ಟೆಂಬರ್ನಲ್ಲಿ ಶೇ. 6.81 ಹಣದುಬ್ಬರ ದಾಖಲಾಗಿದೆ. ಪ್ರಮುಖ ರಾಜ್ಯಗಳ ಪೈಕಿ ಅತಿಹೆಚ್ಚು ಹಣದುಬ್ಬರ ಇದು. ಒಡಿಶಾ ಶೇ. 6.7, ಮಧ್ಯಪ್ರದೇಶ ಶೇ. 6.68, ತೆಲಂಗಾಣ ಶೇ. 6.64, ಆಂದ್ರಪ್ರದೇಶ ಶೇ. 6.29 ಮತ್ತು ಉತ್ತರಪ್ರದೇಶ ಶೇ. 6.08 ಹಣದುಬ್ಬರ ದರ ಹೊಂದಿವೆ. ಮಹಾರಾಷ್ಟ್ರವೂ ಶೇ. 5ಕ್ಕಿಂತ ಹೆಚ್ಚು ಹಣದುಬ್ಬರ ದರ ದಾಖಲಿಸಿದೆ.
ಇದನ್ನೂ ಓದಿ: ಯುಪಿಐ ಎಂಡಿಆರ್ ಶುಲ್ಕ; ಶೇ. 0.40 ಬದಲು ಶೇ. 0.08 ಶುಲ್ಕ ವಿಧಿಸಬಹುದು: ಐಐಟಿ ಬಾಂಬೆ ವರದಿ ಸಲಹೆ
ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ತನ್ನ ಅಕ್ಟೋಬರ್ ಸಭೆಯಲ್ಲಿ ಮಾಡಿದ ಅಂದಾಜು ಪ್ರಕಾರ, 2026-27ರಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದಿದೆ. ಜುಲೈ-ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಶೇ. 4.9ರಷ್ಟು ಹಣದುಬ್ಬರ ಇರಬಹುದು ಎಂದಿತ್ತು. ಅದು ಅಂದಾಜು ಮಾಡಿದ ಪ್ರಕಾರ ಈ ಎರಡನೇ ಕ್ವಾರ್ಟರ್ನಲ್ಲಿ ಹಣದುಬ್ಬರ ಶೇ. 4.9ರಷ್ಟಿದೆ. ಜುಲೈನಲ್ಲಿ ಶೇ. 4.45, ಆಗಸ್ಟ್ನಲ್ಲಿ ಶೇ. 4.82 ಮತ್ತು ಸೆಪ್ಟೆಂಬರ್ನಲ್ಲಿ ಶೇ. 5.54ರಷ್ಟು ಹಣದುಬ್ಬರ ದಾಖಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ