ನವದೆಹಲಿ, ಮೇ 20: ಸೈಬರ್ ಕ್ರೈಮ್ ಇತ್ಯಾದಿ ಆನ್ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ ಟೆಲಿಕಾಂ ಕಂಪನಿಗಳು ಬರೋಬ್ಬರಿ 18 ಲಕ್ಷ ಮೊಬೈಲ್ ಕನೆಕ್ಷನ್ಗಳನ್ನು ಕಡಿತಗೊಳಿಸುವ (disconnect) ಸಾಧ್ಯತೆ ಇದೆ. ಮೊಬೈಲ್ ಕನೆಕ್ಷನ್ಗಳನ್ನು ದುರ್ಬಳಕೆ ಮಾಡಿಕೊಂಡು ಜನರು ವಂಚಿಸುತ್ತಿರುವ ಬಗ್ಗೆ ಬಹಳಷ್ಟು ಪ್ರಕರಣಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ದುರ್ಬಳಕೆಯಾಗಿರಬಹುದಾದ ಮೊಬೈಲ್ ಕನೆಕ್ಷನ್ಗಳನ್ನು ರದ್ದುಗೊಳಿಸುವಂತೆ ಟೆಲಿಕಾಂ ಆಪರೇಟರ್ಗಳಿಗೆ ಸರ್ಕಾರ ಸೂಚಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.
‘ಸಮಗ್ರ ತನಿಖೆ ವೇಳೆ, ಒಂದೇ ಹ್ಯಾಂಡ್ಸೆಟ್ನಲ್ಲಿ ಸಾವಿರಾರು ಮೊಬೈಲ್ ಕನೆಕ್ಷನ್ಸ್ ಬಳಸಿರುವ ಹಲವು ನಿದರ್ಶನಗಳು ಬೆಳಕಿಗೆ ಬಂದಿದ್ದವು,’ ಎಂದು ಅಧಿಕಾರಿಯೊಬ್ಬರು ತಮಗೆ ಮಾಹಿತಿ ಕೊಟ್ಟಿದ್ದಾರೆ ಈ ವರದಿಯಲ್ಲಿ ಹೇಳಲಾಗಿದೆ.
ಈ ವರದಿ ಪ್ರಕಾರ ಮೇ 9ರಂದು ಕೇಂದ್ರ ದೂರ ಸಂಪರ್ಕ ಇಲಾಖೆ 28,220 ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಡಿಸ್ಕನೆಕ್ಟ್ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಅಲ್ಲದೇ ಈ ಹ್ಯಾಂಡ್ಸೆಟ್ಗಳಿಂದ ಬಳಸಲಾಗುತ್ತಿದ್ದ ಇಪತ್ತು ಲಕ್ಷ ಸಿಮ್ಗಳನ್ನು ರೀವೆರಿಫಿಕೇಶನ್ಗೆ ಒಳಪಡಿಸಲು ಸೂಚಿಸಿತ್ತು.
ಇದನ್ನೂ ಓದಿ: ಬ್ರಿಟನ್ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ
ಇಂತಹ ಪ್ರಕರಣಗಳಲ್ಲಿ ಸಿಮ್ಗಳು ಯಶಸ್ವಿಯಾಗಿ ವೆರಿಫೈ ಆಗುವುದು ಶೇ. 10 ಮಾತ್ರ ಎಂಬುದು ಅಧಿಕಾರಿಗಳ ಅನಿಸಿಕೆ. ಅದರಂತೆ ನೋಡಿದರೆ, ಈಗ ಕಣ್ಗಾವಲಿನಲ್ಲಿರುವ 20 ಲಕ್ಷ ಸಿಮ್ಗಳಲ್ಲಿ ಶೇ. 10ರಷ್ಟು ಮೊಬೈಲ್ ಕನೆಕ್ಷನ್ಸ್ ಮಾತ್ರ ವೆರಿಫೈ ಆಗಬಹುದು. ಇನ್ನುಳಿದವುಗಳ ವೆರಿಫಿಕೇಶನ್ ಆಗದೇ ಹೋಗಬಹುದು. ಅಂದರೆ 18 ಲಕ್ಷದಷ್ಟು ಮೊಬೈಲ್ ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಬಹುದು.
‘ಹದಿನೈದು ದಿನದಲ್ಲಿ ಟೆಲಿಕಾಂ ಕಂಪನಿಗಳು ಈ ನಂಬರ್ಗಳ ರೀವೆರಿಫಿಕೇಶನ್ ಪೂರ್ಣಗೊಳಿಸಲಿದ್ದಾರೆ. ಅದಾದ ಬಳಿಕ ವೆರಿಫೈ ಆಗದ ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಲಾಗುವುದು,’ ಎಂದು ಅಧಿಕಾರಿಗಳು ಹೇಳಿದ್ದಾರೆ ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಷನಲ್ ಸೈಬರ್ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ 2023ರಲ್ಲಿ ಆನ್ಲೈನ್ನಲ್ಲಿ ಆಗಿರುವ ಹಣಕಾಸು ವಂಚನೆಯಲ್ಲಿ ಜನರು 10,319 ಕೋಟಿ ರೂ ಕಳೆದುಕೊಂಡಿದ್ದಾರೆ. ಆ ವರ್ಷ ಸುಮಾರು ಏಳು ಲಕ್ಷ ಸಮೀಪದಷ್ಟು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ
ವಂಚಕರು ಸಿಮ್ ಕಾರ್ಡ್ಗಳನ್ನು ಬಹಳ ಚಾಣಾಕ್ಷ್ಯತನದಿಂದ ನಿರ್ವಹಿಸುತ್ತಾರೆ. ಒಂದು ಟೆಲಿಕಾಂ ಸರ್ಕಲ್ನ ಸಿಮ್ ಕಾರ್ಡ್ ಅನ್ನು ಬೇರೆ ಟೆಲಿಕಾಂ ಸರ್ಕಲ್ನಲ್ಲಿ ಬಳಸಬಹುದು. ಉದಾಹರಣೆಗೆ, ಮಧ್ಯಪ್ರದೇಶ ಸರ್ಕಲ್ನ ಸಿಮ್ ಕಾರ್ಡ್ ಅನ್ನು ಬೆಂಗಳೂರಿನಲ್ಲಿ ಬಳಸಬಹುದು.
ವಂಚಕರು ಒಂದು ಸಿಮ್ ಕಾರ್ಡ್ ಅನ್ನು ಬೇರೆ ಬೇರೆ ಹ್ಯಾಂಡ್ಸೆಟ್ಗಳಿಗೆ ಹಾಕಿ ಬಳಸುತ್ತಾರೆ. ಒಂದೇ ಮೊಬೈಲ್ ಹ್ಯಾಂಡ್ಸೆಟ್ನಿಂದ ವಂಚಕ ಕರೆ ಹೋಗುತ್ತಿದ್ದರೆ ಬೇಗ ಪತ್ತೆಯಾಗಬಹುದು ಎಂಬ ಕಾರಣಕ್ಕೆ ಈ ದೂರ್ತರು ಸಿಮ್ ಕಾರ್ಡ್ ಮತ್ತು ಹ್ಯಾಂಡ್ಸೆಟ್ಗಳನ್ನು ಅದಲುಬದಲು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಒಂದು ಹ್ಯಾಂಡ್ಸೆಟ್ನಿಂದ ಒಂದಷ್ಟು ಮೊಬೈಲ್ ಕರೆಗಳು ಹೋದ ಬಳಿಕ ಸಿಮ್ ತೆಗೆದು ಬೇರೆ ಹ್ಯಾಂಡ್ಸೆಟ್ಗೆ ಹಾಕಿ ಕರೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ