ಸಚಿನ್ ತೆಂಡೂಲ್ಕರ್ ಬೆಂಬಲಿತ ಕಂಪನಿಯಿಂದ ಸೆಮಿಕಂಡಕ್ಟರ್ ಫ್ಯಾಕ್ಟರಿ ಸ್ಥಾಪನೆಗೆ 5,000 ಕೋಟಿ ರೂ ಹೂಡಿಕೆ
Sachin Tendulkar backed RRP Electronics Investing In Semiconductor Facility: ಮಹಾರಾಷ್ಟ್ರ ಮೂಲದ ಆರ್ಆರ್ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ನವಿ ಮುಂಬೈನಲ್ಲಿ 25,000 ಚದರಡಿ ವಿಸ್ತೀರ್ಣ ಪ್ರದೇಶದಲ್ಲಿ ಬೃಹತ್ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿದೆ. ಮುಂದಿನ ಐದು ವರ್ಷದಲ್ಲಿ ಈ ಘಟಕದ ಮೇಲೆ ಸಂಸ್ಥೆ 5,000 ಕೋಟಿ ರೂ ಹೂಡಿಕೆ ಮಾಡಲಿದೆ. ಇದು ಆರಂಭಿಕ ಹಂತದ ಹೂಡಿಕೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹೂಡಿಕೆ ಮಾಡುವ ನಿರೀಕ್ಷೆ ಇದೆ. ಸಚಿನ್ ತೆಂಡೂಲ್ಕರ್ ಈ ಆರ್ಆರ್ಪಿ ಎಲೆಕ್ಟ್ರಾನಿಕ್ಸ್ನ ಪ್ರಮುಖ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.
ಮುಂಬೈ, ಮಾರ್ಚ್ 27: ಆರ್ಆರ್ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ನವಿ ಮುಂಬೈನಲ್ಲಿ ಬೃಹತ್ ಸೆಮಿಕಂಡಕ್ಟರ್ ಘಟಕವನ್ನು (semiconductor manufacturing) ಸ್ಥಾಪಿಸುತ್ತಿದೆ. ಕಳೆದ ವಾರ (ಮಾರ್ಚ್ 23) 25,000 ಚದರಡಿ ವಿಸ್ತೀರ್ಣದಲ್ಲಿ ಸೆಮಿಕಂಡಕ್ಟರ್ ತಯಾರಕಾ ಘಟಕವನ್ನು ಅನಾವರಣಗೊಳಿಸಲಾಗಿತ್ತು. ಆರ್ಆರ್ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ರಾಜೇಂದ್ರ ಚೋದಾನಕರ್, ನ್ಯೂಕ್ಲಿಯಾರ್ ಸೈಂಟಿಸ್ಟ್ ಅನಿಲ್ ಕಾಕೋಡ್ಕರ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಚಿನ್ ತೆಂಡೂಲ್ಕರ್ ಆರ್ಆರ್ಪಿ ಎಲೆಕ್ಟ್ರಾನಿಕ್ಸ್ನ ಪ್ರಮುಖ ಹೂಡಿಕೆದಾರರಾಗಿದ್ದಾರೆ.
ನವಿ ಮುಂಬೈನಲ್ಲಿರುವ ಈ ಘಟಕವು ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಕಾರ್ಯಕ್ಕೆ ಬಳಕೆ ಆಗಲಿದೆ. ಮುಂಬರುವ ದಿನಗಳಲ್ಲಿ ಪರಿಪೂರ್ಣವಾದ ಆರ್ ಅಂಡ್ ಡಿ ಕೇಂದ್ರ, ಫ್ಯಾಬ್ ಫೌಂಡ್ರಿ, ಮಲ್ಟಿಲೈನ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಘಟಕ ಇತ್ಯಾದಿ ಸ್ಥಾಪಿಸುವ ಗುರಿ ಇಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆ ಈ ಯೋಜನೆಗಳಿಗೆ ಆರ್ಆರ್ಪಿ ಎಲೆಕ್ಟ್ರಾನಿಕ್ಸ್ 5,000 ಕೋಟಿ ರೂ ಹೂಡಿಕೆ ಮಾಡಲಿದೆ.
ಇದನ್ನೂ ಓದಿ: ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು
‘ಮೊದಲ ಹಂತದಲ್ಲಿ ಮುಂದಿನ ಐದು ವರ್ಷದಲ್ಲಿ 5,000 ಕೋಟಿ ರೂ ಆರಂಭಿಕ ಹೂಡಿಕೆ ಮಾಡಲು ಸಂಸ್ಥೆ ಬದ್ಧವಾಗಿದೆ. ಎರಡನೇ ಹಂತದಲ್ಲೂ ಹೂಡಿಕೆಗೆ ಬದ್ಧವಾಗಿದೆ’ ಎಂದು ಆರ್ಆರ್ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಆರ್ಆರ್ಪಿ ಎಲೆಕ್ಟ್ರಾನಿಕ್ಸ್ ನವಿ ಮುಂಬೈನಲ್ಲಿ ಸ್ಥಾಪಿಸಲಿರುವುದು ಮಹಾರಾಷ್ಟ್ರದ ಮೊದಲ ಸೆಮಿಕಂಡಕ್ಟರ್ ಘಟಕವಾಗಲಿದೆ. ‘ನಾವು ಬಹಳ ಉತ್ತಮ ಕಾಲಘಟ್ಟದಲ್ಲಿ ಇದದೇವೆ. ಭವಿಷ್ಯದಲ್ಲಿ ಜಾಗತಿಕವಾಗಿ ಸಕಾರಾತ್ಮಕವಾಗಿ ಪ್ರಭಾವ ಬೀರುವಂತಹ ವಲಯಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ,’ ಎಂದು ರಾಜೇಂದ್ರ ಚೋದಾನಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೇಜಾನ್ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ
ಎಸ್ಆರ್ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್
ಆರ್ಆರ್ಪಿ ಎಲೆಕ್ಟ್ರಾನಿಕ್ಸ್ನಲ್ಲಿ ಹೂಡಿಕೆ ಮಾಡಿರುವ ಪ್ರಮುಖರಲ್ಲಿ ಸಚಿನ್ ತೆಂಡೂಲ್ಕರ್ ಒಬ್ಬರು. ಈ ಸಂಸ್ಥೆಯ ಕೈಂಕರ್ಯಗಳ ಭಾಗವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್, ಇದೊಂದಷ್ಟೇ ಅಲ್ಲ ಬೇರೆ ಕೆಲ ವ್ಯವಹಾರಗಳನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾದುದು ಎಸ್ಆರ್ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈ ಲಿ ಸಂಸ್ಥೆ. ಕ್ರೀಡೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳ ಮೂಲಕ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಸಹಾಯವಾಗುತ್ತದೆ ಈ ಸಂಸ್ಥೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ