ಡಾಲರ್ ಎದುರು 95 ರೂ ಆದರೂ ಅಚ್ಚರಿ ಇಲ್ಲ; ಯಾಕಿಷ್ಟು ಕುಸಿಯುತ್ತಿದೆ ರುಪಾಯಿ ಮೌಲ್ಯ
Rupee vs Dollar: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ 86.30 ಮಟ್ಟ ಮುಟ್ಟಿದೆ. ರುಪಾಯಿ ಈ 86ರ ಗಡಿ ದಾಟಿದ್ದು ಇದೇ ಮೊದಲು. ಆರ್ಬಿಐನ ಬದಲಾದ ನೀತಿಯು ಇದಕ್ಕೆ ಪ್ರಮುಖ ಕಾರಣ ಇರಬಹುದು ಎನ್ನಲಾಗಿದೆ. ಉದ್ಯೋಗ ಮಾರುಕಟ್ಟೆ ಉತ್ತಮಗೊಂಡಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಅಮೆರಿಕ ಕರೆನ್ಸಿ ಬಲಗೊಂಡಿದೆ. ಇದು ರುಪಾಯಿ ಮೇಲೆ ಒತ್ತಡ ಬೀರಿರಬಹುದು.
ನವದೆಹಲಿ, ಜನವರಿ 13: ಭಾರತದ ರುಪಾಯಿ ಕರೆನ್ಸಿ ಮೌಲ್ಯ ಕುಸಿಯುವುದು ಮುಂದುವರಿಯುತ್ತಲೇ ಇದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ರುಪಾಯಿ ಮೌಲ್ಯ 86ರ ಗಡಿ ದಾಟಿದೆ. ಶುಕ್ರವಾರ ಸಂಜೆ 85.9650 ಯೊಂದಿಗೆ ಮುಕ್ತಾಯಗೊಂಡಿದ್ದ ರುಪಾಯಿ, ಇಂದು ಸೋಮವಾರ 86.2050 ಮಟ್ಟದೊಂದಿಗೆ ಆರಂಭಗೊಂಡಿದೆ. ಡಾಲರ್ ಎದುರು ರುಪಾಯಿ ಮೊದಲ ಬಾರಿಗೆ 86ರ ಗಡಿ ದಾಟಿದೆ. ನಾನಾ ಕಾರಣಗಳಿಂದ ಡಾಲರ್ ಎದುರು ರುಪಾಯಿ ಉಸಿರುಗಟ್ಟುತ್ತಿದೆ.
ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಕುಸಿಯದ ರೀತಿಯಲ್ಲಿ ಎಚ್ಚರಿಕೆಯ ನೀತಿ ಅನುಸರಿಸುತ್ತಿದ್ದರು. ಈಗಿನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಡಾಲರ್ಗೆ ನಿಗದಿ ಮಾಡಿದ ನಿಶ್ಚಿತ ದರದ ನೀತಿಗೆ ತಿಲಾಂಜಲಿ ಹಾಡಿದ್ದಾರೆ. ಕರೆನ್ಸಿ ಮೌಲ್ಯವನ್ನು ಮಾರುಕಟ್ಟೆ ನಿರ್ಧರಿಸುವ ನೀತಿಯನ್ನು ಸರ್ಕಾರ ಅನುಸರಿಸುತ್ತಿರಬಹುದು. ಈ ಕಾರಣಕ್ಕೆ ರುಪಾಯಿ ಮೌಲ್ಯ ಮಾರುಕಟ್ಟೆಯ ಓಟಕ್ಕೆ ಸಿಲುಕಿ ಕುಸಿಯುತ್ತಲೇ ಇದೆ.
ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0
ತಜ್ಞರ ಪ್ರಕಾರ ಈ ವರ್ಷವೇ ಡಾಲರ್ ಎದುರು ರುಪಾಯಿ ಮೌಲ್ಯ 90 ದಾಟಿದರೂ ಅಚ್ಚರಿ ಇಲ್ಲ. ಅಷ್ಟೇ ಅಲ್ಲ, ರುಪಾಯಿ ಮೌಲ್ಯ 95ಕ್ಕೆ ಕುಸಿದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರಾದ ಉದಿತ್ ಸಿಕಂಡ್ ಮತ್ತು ಟಾಮ್ ಮಿಲ್ಲರ್.
ಡಿಎಸ್ಪಿ ಫೈನಾನ್ಸ್ ಸಂಸ್ಥೆಯ ಸಿಇಒ ಜಯೇಶ್ ಮೆಹ್ತಾ ಅವರು ಕೆಲ ದಿನಗಳ ಹಿಂದೆ ಮಾಡಿದ್ದ ಅಂದಾಜಿನಂತೆ ರುಪಾಯಿ ಮೌಲ್ಯ 86 ಗಡಿ ಮುಟ್ಟಿದೆ. ಆದರೆ, ಅವರ ಪ್ರಕಾರ ರುಪಾಯಿ 87ರ ಮಟ್ಟಕ್ಕೆ ಕುಸಿಯಲು ಆರ್ಬಿಐ ಬಿಡುವ ಸಾಧ್ಯತೆ ಕಡಿಮೆ.
ಇದೇ ವೇಳೆ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಬಂಡವಾಳ ವಾಪಸ್ ಪಡೆಯುತ್ತಿರುವ ಟ್ರೆಂಡ್ ಮುಂದುವರಿದಿದೆ. ಎಫ್ಪಿಐಗಳು ಹೊರಹೋಗುತ್ತಿರುವುದು ರುಪಾಯಿ ಮೇಲೆ ಹೆಚ್ಚಿನ ಒತ್ತಡ ನಿರ್ಮಿಸಿದೆ. ಷೇರು ಮಾರುಕಟ್ಟೆ ಕುಸಿತದ ಜೊತೆಗೆ ರುಪಾಯಿ ಮೌಲ್ಯ ಕುಸಿತಕ್ಕೂ ಇದು ಕಾರಣವಾಗಿದೆ.
ಇದನ್ನೂ ಓದಿ: 2025ರಲ್ಲಿ ಬರಲಿವೆ ಸಖತ್ ಐಪಿಒಗಳು; 3 ಲಕ್ಷ ಕೋಟಿ ರೂಗೂ ಅಧಿಕ ಬಂಡವಾಳ ಸಂಗ್ರಹಣೆ ನಿರೀಕ್ಷೆ
ಅಮೆರಿಕದಲ್ಲಿ ಉದ್ಯೋಗ ಸಂಖ್ಯೆ ನಿರೀಕ್ಷೆಗಿಂತ ಉತ್ತಮಗೊಂಡಿರುವುದರಿಂದ ಅಲ್ಲಿನ ಡಾಲರ್ ಕರೆನ್ಸಿ ಮತ್ತಷ್ಟು ಬಲಗೊಂಡಿದೆ. ಅಲ್ಲಿಯ ಸರ್ಕಾರದ ಟ್ರೆಷರಿ ಯೀಲ್ಡ್ನ ಬೆಂಚ್ಮಾರ್ಕ್ ಹೆಚ್ಚಿದೆ. ಫೆಡರಲ್ ರಿಸರ್ವ್ನಿಂದ ಬಡ್ಡಿದರ ಕಡಿತ ಅಷ್ಟು ಸುಲಭಕ್ಕೆ ನಡೆಯುವುದಿಲ್ಲ ಎನ್ನುವ ಸೂಚನೆಗಳಿವೆ. ಇವೆಲ್ಲವೂ ಕೂಡ ಡಾಲರ್ ಕರೆನ್ಸಿಗೆ ಬೇಡಿಕೆ ಹೆಚ್ಚಿಸಿದೆ. ಇದು ರುಪಾಯಿ ಕರೆನ್ಸಿಗೆ ಹಿನ್ನಡೆ ತರಲು ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ