ಕೊರೊನಾ ಸಂದರ್ಭದಲ್ಲಿ ಹೆಲ್ತ್ಕೇರ್ ವಲಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ದಿಂದ ಆರೋಗ್ಯಮ್ ಹೆಲ್ತ್ಕೇರ್ ಉದ್ಯಮ ಸಾಲ ಆರಂಭಿಸಲಾಗಿದೆ. ಈ ಹೊಸ ಪ್ರಾಡಕ್ಟ್ ಅಡಿಯಲ್ಲಿ ಆಸ್ಪತ್ರೆ, ನರ್ಸಿಂಗ್ ಹೋಮ್ಗಳು, ಡಯಾಗ್ನೋಸ್ಟಿಕ್ ಸೆಂಟರ್ಗಳು, ಪೆಥಾಲಜಿ ಲ್ಯಾಬ್ಗಳು, ಉತ್ಪಾದಕರು, ಸರಬರಾಜುದಾರರು, ಆಮದುದಾರರು, ತೀರಾ ಅಗತ್ಯ ಹೆಲ್ತ್ಕೇರ್ ಪೂರೈಕೆ ಮಾಡುವ ಸಾಗಾಟ ಸಂಸ್ಥೆಗಳಿಗೆ 100 ಕೋಟಿ ರೂಪಾಯಿ ತನಕ (ಭೌಗೋಳಿಕ ಪ್ರದೇಶದ ಆಧಾರದ ಮೇಲೆ) ಸಾಲ ನೀಡಲಾಗುತ್ತದೆ. 10 ವರ್ಷದ ಅವಧಿಯೊಳಗೆ ಅದನ್ನು ಮರುಪಾವತಿಸಬಹುದು ಎಂದು ಎಸ್ಬಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂದಹಾಗೆ ಆರೋಗ್ಯಮ್ ಸಾಲವನ್ನು ವಿಸ್ತರಣೆ, ಆಧುನೀಕರಣದ ಕಾರಣಕ್ಕೆ ಟರ್ಮ್ ಲೋನ್ನಂತೆಯೂ ಅಥವಾ ವರ್ಕಿಂಗ್ ಕ್ಯಾಪಿಟಲ್ಗೆ ನಗದು ಕ್ರೆಡಿಟ್, ಬ್ಯಾಂಕ್ ಗ್ಯಾರಂಟಿ/ಲೆಟರ್ ಆಫ್ ಕ್ರೆಡಿಟ್ ಥರದಲ್ಲಿ ಕೂಡ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಮೆಟ್ರೋ ನಗರಗಳಲ್ಲಿ ಆರೋಗ್ಯ ಯೋಜನೆ ಅಡಿ 100 ಕೋಟಿ ರೂಪಾಯಿ ತನಕ ಸಾಲ ದೊರೆಯುತ್ತದೆ. ಟಯರ್ I ಮತ್ತು ಪಟ್ಟಣಗಳಲ್ಲಿ ರೂ. 20 ಕೋಟಿ ತನಕ ಮತ್ತು ಟಯರ್ IIರಿಂದ ಟಯರ್ VIರ ತನಕ 10 ಕೋಟಿ ರೂಪಾಯಿ ತನಕ ಸಾಲ ಸಿಗುತ್ತದೆ. ಯಾವ ಸಂಸ್ಥೆಗಳು ಅಥವಾ ಘಟಕ 2 ಕೋಟಿ ರೂಪಾಯಿಯೊಳಗೆ ಸಾಲ ಪಡೆದುಕೊಳ್ಳುತ್ತವೋ ಅವು ಕೊಲ್ಯಾಟರಲ್ ಅಥವಾ ಭದ್ರತೆ ನೀಡುವ ಅಗತ್ಯ ಇಲ್ಲ. Credit Guarantee Fund Trust for Micro and Small Enterprises (CGTMSE) ಅಡಿಯಲ್ಲಿ ಕವರ್ ಆಗುತ್ತದೆ ಎಂದು ಹೇಳಲಾಗಿದೆ.
ಎಸ್ಬಿಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, ಈ ವಿಶೇಷ ಸಾಲ ಯೋಜನೆಯು ಈಗಿರುವ ವ್ಯವಸ್ಥೆಯ ವಿಸ್ತರಣೆ, ಆಧುನೀಕರಣ ಮತ್ತು ಹೊಸ ಫೆಸಿಲಿಟಿ ಸ್ಥಾಪನೆಗೆ ನೆರವು ನೀಡುತ್ತದೆ. ಇಡೀ ದೇಶದಲ್ಲಿ ಹೆಲ್ತ್ಕೇರ್ ಮೂಲಸೌಕರ್ಯ ಬಲಗೊಳಿಸುವ ನಿಟ್ಟಿನಲ್ಲಿ ಈ ಆರೋಗ್ಯಮ್ ಹೆಲ್ತ್ಕೇರ್ ಉದ್ಯಮ ಸಾಲವು ಸಹಾಯ ಮಾಡುತ್ತದೆ. ಇದು ನಮ್ಮ ಉದ್ದೇಶವೂ ಆಗಿದೆ ಎಂದಿದ್ದಾರೆ. ಆರೋಗ್ಯ ಹೆಲ್ತ್ಕೇರ್ ಉದ್ಯಮ ಸಾಲವು ಬ್ಯಾಂಕ್ಗಳಿಂದ ಸೃಷ್ಟಿಸಿದ ಕೊವಿಡ್ ಲೋನ್ ಬುಕ್ ಅಡಿಯಲ್ಲಿ ಅರ್ಹತೆ ಪಡೆದಿದೆ. ಇದು ಆರ್ಬಿಐನಿಂದ ಘೋಷಿಸಲಾದ ಕೊವಿಡ್ ಪರಿಹಾರ ಕ್ರಮದ ಭಾಗವಾಗಿದೆ.
ಇದನ್ನು ಓದಿ: SBI Loan: ಕೊವಿಡ್- 19 ಚಿಕಿತ್ಸೆಗೆ ಎಸ್ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ
(State Bank Of India announced Aarogyam healthcare business loan for health care sector for corona situation. Here is the details of the loan)
Published On - 1:58 pm, Fri, 25 June 21