ಗೃಹ ಸಾಲ ನೀಡುವ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆ ಎಚ್ಡಿಎಫ್ಸಿ (HDFC) ಇದೀಗ 5 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಹೊಂದಿರುವ ಕಂಪನಿ. ದೀಪಕ್ ಪರೇಖ್ (Deepak Parekh) ಈ ಸಂಸ್ಥೆಯ ಛೇರ್ಮನ್. ಈ ಸಂಸ್ಥೆಯನ್ನು ಸ್ಥಾಪಿಸಿದ್ದೇ ಇವರ ದೊಡ್ಡಪ್ಪ ಎಚ್.ಟಿ. ಪರೇಖ್. ದೊಡ್ಡಪ್ಪನಿಗೆ ದತ್ತು ಮಗನಾಗಿ, ವಿದೇಶದಲ್ಲಿ ಭರ್ಜರಿ ಸಂಬಳ ತರುವ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಚ್ಡಿಎಫ್ಸಿಯನ್ನು ಉಳಿಸಿ ಇಂದು ಹೆಮ್ಮರವಾಗಿ ಬೆಳೆಸಿದವರು ದೀಪಕ್ ಪರೇಖ್. ಈ ಕಂಪನಿಯಲ್ಲಿ ಛೇರ್ಮನ್ ಆಗಿರುವ ಅವರು ಸಂಸ್ಥೆಯ ಒಟ್ಟು ಷೇರು ಸಂಪತ್ತಿನಲ್ಲಿ ಹೊಂದಿರುವ ಪಾಲು ಕೇವಲ ಶೇ. 0.04 ಮಾತ್ರ. ಅಂದರೆ ಪ್ರತೀ 10,000 ರುಪಾಯಿಗೆ ಇವರ ಪಾಲು 4 ಪೈಸೆ ಮಾತ್ರ. ಆದರೆ ಇಂದು ದೀಪಕ್ ಪರೇಖ್ ಅವರು ಭಾರತದ ಉದ್ಯಮ ಮತ್ತು ಹಣಕಾಸು ವಲಯದಲ್ಲಿ ಬಹಳ ಎತ್ತರದ ಮತ್ತು ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಹಲವು ಪ್ರಮುಖ ಉದ್ಯಮ ಸಂಸ್ಥೆಗಳ ವಿವಿಧ ಮಂಡಳಿಗಳು, ಸರ್ಕಾರಗಳ ಮಂಡಳಿಗಳಿಗೆ ಅವರ ಸೇವೆ ಬಳಸುವುದುಂಟು. ಅಷ್ಟರಮಟ್ಟಿಗೆ ಅವರು ಅನುಭವಸ್ಥರು ಮತ್ತು ಮಾದರಿ ವ್ಯಕ್ತಿತ್ವದವರು.
ದೀಪಕ್ ಪರೇಖ್ ಮುಂಬೈನಲ್ಲಿ ಹುಟ್ಟಿ ಅಲ್ಲಿಯೇ ಶಾಲಾ ಶಿಕ್ಷಣ ಪಡೆದವರು. 1965ರಲ್ಲಿ ಇಂಗ್ಲೆಂಡ್ನಲ್ಲಿ ವೃತ್ತಿಪರ ಶಿಕ್ಷಣ ಪಡೆದು ಅಲ್ಲಿಯೇ ಚಾರ್ಟರ್ಡ್ ಅಕೌಂಟೆಂಟ್ ಆದರು. ಲಂಡನ್ನಲ್ಲಿ ವಿನ್ನೀ, ಸ್ಮಿತ್ ಅಂಡ್ ವಿನ್ನೀ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಅವರು ಪ್ರತಿಷ್ಠಿತ ಸಿಎಐಐಬಿ (ಸರ್ಟಿಫೈಡ್ ಅಸೋಷಿಯೇಶನ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್) ಪರೀಕ್ಷೆ ಪೂರ್ಣಗೊಳಿಸಿದರು. ಇದಾದ ಬಳಿಕ ಅವರು ಗ್ರಿಂಡ್ಲೇಸ್ ಬ್ಯಾಂಕ್, ಚೇಸ್ ಮನ್ಹಟನ್ ಬ್ಯಾಂಕ್ಗಳಲ್ಲಿ ಕೆಲಸ ಮಾಡಿದರು. ವೃತ್ತಿಪರ ಬದುಕಿನಲ್ಲಿ ಬಹಳ ಎತ್ತರಕ್ಕೆ ಹೋಗುವ ಅವಕಾಶ ಹೊಂದಿದವರು.
ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ
ಎಚ್ಡಿಎಫ್ಸಿ (ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ) 1977ರಲ್ಲಿ ದೀಪಕ್ ಪರೇಖ್ ದೊಡ್ಡಪ್ಪ ಸ್ಥಾಪನೆ ಮಾಡಿದ್ದು. ಎಚ್.ಡಿ. ಪರೇಖ್ ಅವರ ವಯಸ್ಸು 65 ವರ್ಷ. ತೀರಾ ನಗಣ್ಯ ಸ್ಥಿತಿಯಲ್ಲಿ ಸಂಸ್ಥೆ ಇತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ಉತ್ತಮ ಬ್ಯಾಂಕರ್ ವೃತ್ತಿ ಹೊಂದಿದ್ದ ದೀಪಕ್ ಪರೇಖ್ ಅವರನ್ನು ಎಚ್ಡಿಎಫ್ಸಿಗೆ ಸೇರುವಂತೆ ದೊಡ್ಡಪ್ಪ ಕೇಳಿದರು. ಮಕ್ಕಳಿಲ್ಲದ ದೊಡ್ಡಪ್ಪನಿಗೆ ದೀಪಕ್ ಪರೇಖ್ ಒಂದು ರೀತಿಯಲ್ಲಿ ದತ್ತುಪುತ್ರರೇ ಆಗಿದ್ದರು. ಇವರ ಮಾತು ನಿರಾಕರಿಸಲಾಗದೇ ದೀಪಕ್ ಪರೇಖ್ ಇಂಗ್ಲೆಂಡ್ನಲ್ಲಿ ತಮಗೆ ಸಿಗುತ್ತಿದ್ದುದಕ್ಕಿಂತ ಅರ್ಧ ಸಂಬಳಕ್ಕೆ ಎಚ್ಡಿಎಫ್ಸಿಗೆ ಬಂದು ಕೆಲಸಕ್ಕೆ ಸೇರಿದರು. ಇದು ಆಗಿದ್ದು 1978ರಲ್ಲಿ. ಅಂದರೆ ಎಚ್ಡಿಎಫ್ಸಿ ಸ್ಥಾಪನೆಯಾಗಿ ಒಂದು ವರ್ಷದ ಬಳಿಕ.
ದೀಪಕ್ ಪರೇಖ್ ಎಚ್ಡಿಎಫ್ಸಿಗೆ ಬಂದಾಗ ಕಡಿಮೆ ವೇತನ ಪಡೆದರಾದರೂ ಅವರ ಗುರಿ ಇದ್ದದ್ದು ಸಂಸ್ಥೆಯ ಉನ್ನತಿ. ಸಂಸ್ಥಾಪಕರಾದ ಅವರ ದೊಡ್ಡಪ್ಪರಿಗೆ ಆಗಲೇ ವಯಸ್ಸಾಗಿತ್ತಾದ್ದರಿಂದ 33 ವರ್ಷದ ದೀಪಕ್ ಪರೇಖ್ ಅವರ ಹೆಗಲಿಗೆ ಕಂಪನಿ ಕಟ್ಟುವ ಗುರುತರ ಹೊಣೆಗಾರಿಕೆ ಇತ್ತು. ಬಹಳ ಶ್ರಮಪಟ್ಟು ಈ ಕಾರ್ಯ ಮಾಡುವಾಗ ದೀಪಕ್ ಪರೇಖ್ ಅವರಿಗೆ ಎಚ್ಡಿಎಫ್ಸಿಯಲ್ಲಿ ಹೆಚ್ಚು ಷೇರುಪಾಲು ಹೊಂದಬೇಕೆಂಬ ಆಲೋಚನೆಯೇ ಸುಳಿಯಲಿಲ್ಲ.
ಈಗಲೂ ಕೂಡ ಅವರಿಗೆ ಹೆಚ್ಚು ಷೇರು ಇಲ್ಲದಿರುವ ಬಗ್ಗೆ ಯಾವ ನಿರಾಸೆಯೂ ಇಲ್ಲ. ತನ್ನ ದೊಡ್ಡಪ್ಪ ಕೂಡ ಸಂಬಳ ಮಾತ್ರ ಪಡೆಯುತ್ತಿದ್ದರು. ನಾನೂ ಸಂಬಳ ಮಾತ್ರವೇ ಪಡೆದು ಕೆಲಸ ಮಾಡಲು ಬಯಸುತ್ತೇನೆ. ಆದರೆ, ಸಂಬಳದ ಉದ್ಯೋಗಿಗಳಂತೆ ಅವರು ನಿರ್ದಿಷ್ಟ ಸಮಯ, ಕೆಲಸಕ್ಕೆ ಸೀಮಿತರಾಗದೇ ಮಾಲೀಕರಂತೆ ಸರ್ವಮುಖಿಯಾಗಿ ಕೆಲಸ ಮಾಡಿದ್ದಂತೂ ಹೌದು.
ದೀಪಕ್ ಪರೇಖ್ ಅವರಿಗೆ ಎಚ್ಡಿಎಫ್ಸಿ ಷೇರುಗಳೇ ಇಲ್ಲವೆಂದಲ್ಲ. ಅವರ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ ಈಗ 155 ಕೋಟಿ ರೂ ಎನ್ನಲಾಗಿದೆ. 5 ಲಕ್ಷ ಕೋಟಿ ಷೇರುಸಂಪತ್ತಿನಲ್ಲಿ 155 ಕೋಟಿ ಯಾವ ಮೂಲೆಗೆ? ಇನ್ಫೋಸಿಸ್ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬಸದಸ್ಯರು ಶೇ. 5ರವರೆಗೆ ಷೇರುಪಾಲು ಹೊಂದಿದ್ದಾರೆ. ದೀಪಕ್ ಬಳಿ ಇರುವ ಷೇರುಪಾಲು ಶೇ. 0.04ಕೂಡ ಇಲ್ಲ.
ಇವತ್ತು ದೀಪಕ್ ಪರೇಖ್ ಅವರ ಶ್ರಮದ ಫಲವಾಗಿ ಎಚ್ಡಿಎಫ್ಸಿಗೆ ಗ್ರಾಹಕರ ಸಂಖ್ಯೆ 6.8 ಕೋಟಿಯಷ್ಟಿದೆ. 3,000 ನಗರ, ಪಟ್ಟಣಗಳಲ್ಲಿ 6,300ಕ್ಕೂ ಹೆಚ್ಚು ಶಾಖೆಗಳನ್ನು ಎಚ್ಡಿಎಫ್ಸಿ ಹೊಂದಿದೆ. ಈ ಎಚ್ಡಿಎಫ್ಸಿಯ ಅಂಗಸಂಸ್ಥೆಯೇ ಎಚ್ಡಿಎಫ್ಸಿ ಬ್ಯಾಂಕ್.