
ನವದೆಹಲಿ, ಸೆಪ್ಟೆಂಬರ್ 28: ದೊಡ್ಡ ವರ್ತಕರಿಗೆ ಮಾಡಲಾಗುವ 2,000 ರೂಗಿಂತ ಅಧಿಕ ಮೊತ್ತದ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಅಡ್ವೋಕೇಟ್ ಅಂಜನ್ ದತ್ತಾ ಅವರು ಸಲ್ಲಿಸಿದ ಸಾರ್ಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಾಡಿದ ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಾಲ್ಯ ಬಾಗ್ಚಿ ಮತ್ತು ವಿ ಮೋಹನಾ ಅವರಿರುವ ಸರ್ವೋಚ್ಚ ನ್ಯಾಯಪೀಠವು, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದಿಂದ ವಿವರಣೆ ಬಯಸಿದೆ.
ಎಂಡಿಆರ್ ದರಗಳನ್ನು ಯಾವ ಆಧಾರದ ಮೇಲೆ ನಿಗದಿ ಮಾಡಲಾಗಿದೆ. ಅದರ ಕಾನೂನು ಚೌಕಟ್ಟು ಏನಿದೆ ಎಂಬುದನ್ನು ವಿವರಿಸುವ ಒಂದು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಎಂಡಿಆರ್ ದರದ ಕಾನೂನು ಅಂಶಗಳನ್ನು ಪ್ರಶ್ನಿಸಿದರು. ಎಂಡಿಆರ್ ಎಂಬುದು ತೆರಿಗೆಯೋ ಅಥವಾ ಶುಲ್ಕವೋ, ಅಥವಾ ಎರಡೂ ಅಲ್ಲದಿದ್ದರೆ ಯಾವ ಆಧಾರದ ಮೇಲೆ ಅದನ್ನು ಹೇರಲಾಗುತ್ತಿದೆ ಎಂದು ನ್ಯಾಯಪೀಠವು ವಿವರಣೆ ಕೇಳಿತು.
ಇದನ್ನೂ ಓದಿ: ಗಾಂಧಿ ಜಯಂತಿಯಂದು ‘ನೋ ಯುಪಿಐ ಡೇ’ ಕರೆ ನೀಡಿರುವ ಸುದ್ದಿ ಸುಳ್ಳು: ವರ್ತಕರ ಒಕ್ಕೂಟ ಸ್ಪಷ್ಟನೆ
ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಅವರು ಈ ಎಂಡಿಆರ್ ಕುರಿತು ವಿವರಣೆ ನೀಡಿದರು. ಎಂಡಿಆರ್ ತೆರಿಗೆ ಅಲ್ಲ, ಸರ್ಕಾರದ ಶುಲ್ಕವೂ ಅಲ್ಲ. ಆ ಹಣದಲ್ಲಿ ಒಂದು ಪೈಸೆಯೂ ಸರ್ಕಾರಕ್ಕೆ ಹೋಗಲ್ಲ. ಪೇಮೆಂಟ್ ಇಕೋಸಿಸ್ಟಂನೊಳಗೆ ಅದು ಒಂದು ಸೆಟಲ್ಮೆಂಟ್ ಫೀ ಆಗಿರುತ್ತದೆ. ಎಲೆಕ್ಟ್ರಾನಿಕ್ಸ್ ಪೇಮೆಂಟ್ಗಳನ್ನು ಪ್ರೋಸಸ್ ಮಾಡಲು ಬ್ಯಾಂಕು ಹಾಗೂ ಇತರ ಸಂಸ್ಥೆಗಳಿಗೆ ತಗಲುವ ವೆಚ್ಚಕ್ಕೆ ಪರಿಹಾರವಾಗಿ ಎಂಡಿಆರ್ ವಿಧಿಸಲಾಗುತ್ತಿದೆ ಎಂದು ಅಡಿಶನಲ್ ಸಾಲಿಸಿಟರ್ ಜನರಲ್ ವಿವರಿಸಿದರು. ಸಾಮಾನ್ಯ ಗ್ರಾಹಕರು ಮತ್ತು ಸಣ್ಣ ವರ್ತಕರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಆದರೆ, ಅರ್ಜಿದಾರರು ಇದರ ಕಾನೂನು ಮಾನ್ಯತೆಯನ್ನೇ ಪ್ರಶ್ನಿಸಿದರು. 2,000 ರೂ ಮಿತಿ ಹೇಗೆ ಹಾಕಲಾಯಿತು, ಹಾಗು ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ಪೇಮೆಂಟ್ಗಳ ಮಧ್ಯೆ ಭಿನ್ನ ನೀತಿ ಯಾಕೆ ತರಲಾಯಿತು ಎಂಬುದನ್ನೂ ಅರ್ಜಿದಾರರು ಪ್ರಶ್ನಿಸಿದರು. ಹಾಗೆಯೇ, ಸರ್ಕಾರದ ಈ ಕ್ರಮವು ವರ್ತಕರಿಗೆ ಹೆಚ್ಚುವರಿ ಹೊರೆ ಬೀಳುತ್ತದೆ. ಆ ಹೊರೆ ಇಳಿಸಲು ಪ್ರಯತ್ನದಲ್ಲಿ ಗ್ರಾಹಕರಿಗೆ ಪರೋಕ್ಷವಾಗಿ ಹೊರೆ ಬೀಳುತ್ತದೆ. ಹಾಗಾಗಿ, ಸರ್ಕಾರದ ಈ ನಿರ್ಧಾರ ಜಾರಿಯಾಗದಂತೆ ಮಧ್ಯಂತರವಾಗಿ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದರು.
ಇದನ್ನೂ ಓದಿ: ಯುಪಿಐ ಮೇಲೆ ಎಂಡಿಆರ್ ಶುಲ್ಕ ವಿಧಿಸುತ್ತಿರುವುದು ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡದಿಂದಲಾ? ಸರ್ಕಾರದ ಸ್ಪಷ್ಟನೆ ಇದು
ನ್ಯಾಯಾಲಯವು ಉಭಯ ಪಕ್ಷಗಳ ವಾದ ಪ್ರತಿವಾದ ಆಲಿಸಿತು. ಅರ್ಜಿದಾರರ ಮನವಿಯಂತೆ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, ಈ ವಿಚಾರದ ಬಗ್ಗೆ ವಿವರಣೆ ಕೋರಿ ಕೇಂದ್ರ ಸರ್ಕಾರ, ಆರ್ಬಿಐ ಮತ್ತು ಎನ್ಪಿಸಿಐ ಹಾಗೂ ಇತರ ಸಂಬಂಧಿತರಿಗೆ ನೋಟೀಸ್ ನೀಡಿದೆ.
ಸರ್ಕಾರವು ದೊಡ್ಡ ವರ್ತಕರಿಗೆ ಮಾಡಲಾಗುವ 2,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ ಪೇಮೆಂಟ್ಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲು ನಿರ್ಧರಿಸಿದೆ. ಯುಪಿಐ ಕ್ಯೂಆರ್ ಕೋಡ್ ಮೂಲಕ ಒಂದು ತಿಂಗಳಲ್ಲಿ ಒಂದು ಲಕ್ಷ ರೂಗಿಂತ ಹೆಚ್ಚಿನ ಪೇಮೆಂಟ್ ಪಡೆಯುವ ವರ್ತಕರನ್ನು ದೊಡ್ಡ ವರ್ತಕರೆಂದು ಪರಿಗಣಿಸಲಾಗುತ್ತಿದೆ. ಈ ಎಂಡಿಆರ್ ಶುಲ್ಕವು ಅಕ್ಟೋಬರ್ 15ರಿಂದ ಜಾರಿಗೆ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ