AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಮೇಲೆ ಎಂಡಿಆರ್ ಶುಲ್ಕ ವಿಧಿಸುತ್ತಿರುವುದು ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡದಿಂದಲಾ? ಸರ್ಕಾರದ ಸ್ಪಷ್ಟನೆ ಇದು

ಯುಪಿಐ ಪಾವತಿಗಳಿಗೆ ಎಂಡಿಆರ್ ವಿಧಿಸುವ ನಿರ್ಧಾರಕ್ಕೆ ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡ ಕಾರಣ ಎನ್ನುವ ವಿಪಕ್ಷಗಳ ಆರೋಪವನ್ನು ಸರ್ಕಾರ ತಳ್ಳಿ ಹಾಕಿದೆ. ಈ ಆರೋಪಗಳಲ್ಲಿ ಲವಶೇಷದಷ್ಟೂ ಹುರುಳಿಲ್ಲ. ದೇಶೀಯ ಯುಪಿಐ ಇಕೋಸಿಸ್ಟಂ ಬಲಪಡಿಸಲು ಎಂಡಿಆರ್ ಶುಲ್ಕ ಕ್ರಮ ತರಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಎಂಡಿಆರ್ ಶುಲ್ಕದ ಮೇಲೆ ಜಿಎಸ್​ಟಿ ವಿಧಿಸುವ ಸುದ್ದಿಯನ್ನೂ ನಿರಾಕರಿಸಿದೆ.

ಯುಪಿಐ ಮೇಲೆ ಎಂಡಿಆರ್ ಶುಲ್ಕ ವಿಧಿಸುತ್ತಿರುವುದು ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡದಿಂದಲಾ? ಸರ್ಕಾರದ ಸ್ಪಷ್ಟನೆ ಇದು
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2026 | 6:42 PM

Share

ನವದೆಹಲಿ, ಸೆಪ್ಟೆಂಬರ್ 17: ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ತೀರ್ಮಾನದ ಹಿಂದೆ ಅಮೆರಿಕದ ಕಾರ್ಡ್ ಕಂಪನಿಗಳ (Visa/Mastercard) ಒತ್ತಡವಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕೇಂದ್ರ ಹಣಕಾಸು ಸಚಿವಾಲಯ ಬಲವಾಗಿ ತಳ್ಳಿಹಾಕಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ಆರ್ಥಿಕ ಸುಸ್ಥಿರತೆ ಮತ್ತು ತಾಂತ್ರಿಕ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಯಾವುದೇ ವಿದೇಶಿ ಒತ್ತಡದಿಂದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಮೆರಿಕದ ವತಿಯಿಂದ ಎಂಡಿಆರ್ ವಿಚಾರದಲ್ಲಿ ಒತ್ತಡ ಇದ್ದದ್ದನ್ನು ಹಣಕಾಸು ಸಚಿವಾಲಯ ಒಪ್ಪಿಕೊಂಡಿದೆ. ಆದರೆ, ಆ ಒತ್ತಡವು ಎಂಡಿಆರ್ ವಿಚಾರದಲ್ಲಿ ತಾನು ತೆಗೆದುಕೊಂಡ ನಿರ್ಧಾರಕ್ಕೆ ಕಾರಣ ಅಲ್ಲ ಎಂದೂ ಹೇಳಿದೆ.

ಅಮೆರಿಕದ ಒತ್ತಡ ಏನಿತ್ತು?

2026ರ ಅಮೆರಿಕನ್ ಟ್ರೇಡ್ ರೆಪ್ರೆಸೆಂಟೇಟಿವ್ ರಿಪೋರ್ಟ್ ಎರಡು ಪ್ರಮುಖ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಮೆರಿಕದ ಎಲೆಕ್ಟ್ರಾನಿಕ್ ಪೇಮೆಂಟ್ ಸರ್ವಿಸ್ ಪೂರೈಕೆದಾರರು ಯುಪಿಐ ಇಕೋಸಿಸ್ಟಂನಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ವಿಚಾರದಲ್ಲಿ ರುಪೇಗೆ ಬೆಂಬಲ ಇದೆ ಎನ್ನುವುದು ವರದಿಯಲ್ಲಿ ಬಂದ ಮೊದಲ ಆಕ್ಷೇಪ.

ಇದನ್ನೂ ಓದಿ: ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಹಾಗೆಯೇ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಥರ್ಡ್ ಪಾರ್ಟಿ ಆ್ಯಪ್​ಗಳಿಗೆ ಮಾರ್ಕೆಟ್ ಪಾಲು ಮಿತಿ ಶೇ. 30 ಎಂದು ನಿಗದಿ ಮಾಡಿದೆ ಎನ್ನುವುದು ಯುಎಸ್​ಟಿಆರ್ ವರದಿಯಲ್ಲಿ ಎತ್ತಲಾದ ಎರಡನೇ ತಗಾದೆ.

ಈ ಎರಡರಲ್ಲೂ ಹುರುಳಿಲ್ಲ ಎಂದು ಹಣಕಾಸು ಸಚಿವಾಲಯ ಪ್ರತಿಪಾದಿಸಿದೆ. ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಸೌಲಭ್ಯದಲ್ಲಿ ರುಪೇ ಕಾರ್ಡ್​ಗೆ ಮಾತ್ರವೇ ಅವಕಾಶ ಇರುವುದು. ರುಪೇ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಈ ಮಾರ್ಗೋಪಾಯ ಮಾಡಿದೆ. ಅಮೆರಿಕನ್ ಕಾರ್ಡ್ ಕಂಪನಿಗಳಿಗೆ ಮಣೆ ಹಾಕಿದ್ದೇವೆ ಎಂಬುದು ಶುದ್ಧ ಸುಳ್ಳು ಎಂದಿದೆ.

ಇನ್ನು, ಥರ್ಡ್ ಪಾರ್ಟಿ ಆ್ಯಪ್​ಗಳಿಗೆ ಸರ್ಕಾರ ಶೇ. 30 ಮಾರ್ಕೆಟ್ ಶೇರ್ ಮಿತಿ ನಿಯಮ ತರಲು ಹೋಗಿತ್ತು. ಆದರೆ, ಇದರಿಂದ ದೊಡ್ಡ ಆ್ಯಪ್​ಗಳಿಗೆ ಹೆಚ್ಚು ಅನುಕೂಲವಾಗುತ್ತದಾದ್ದರಿಂದ ಇದನ್ನು ತಂದಿಲ್ಲ. ಅಧಿಕ ಮೌಲ್ಯದ ಯುಪಿಐ ವಹಿವಾಟುಗಳಿಗೆ ಎಂಡಿಆರ್ ತರಲಾಗಿದೆ. ಇದು ಸಣ್ಣ ಕಂಪನಿಗಳಿಗೆ ಹೆಚ್ಚಿನ ಪಾಲು ಪಡೆದು ಸ್ಪರ್ಧಾತ್ಮಕತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರ ವಿವರಿಸಿದೆ.

ಜಿಎಸ್​ಟಿ ವಿಧಿಸುವ ಸುದ್ದಿಯೂ ಸುಳ್ಳು

ಗಾಯದ ಮೇಲೆ ಬರೆ ಎಳೆದಂತೆ ಎಂಡಿಆರ್ ಶುಲ್ಕದ ಮೇಲೆ ಸರ್ಕಾರ ಜಿಎಸ್​ಟಿ ವಿಧಿಸಲಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಸರ್ಕಾರ ಈ ಆರೋಪವನ್ನೂ ಅಲ್ಲಗಳೆದಿದೆ. ಇದೆಲ್ಲವೂ ದುರುದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ಊಹಾಪೋಹ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಈ ಕಾನೂನಿನಿಂದ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ, ಜಾಗತಿಕ ಇಂಧನ ಮಾರುಕಟ್ಟೆಗೂ ಧಕ್ಕೆ: ಭಾರತ ಪ್ರತಿಕ್ರಿಯೆ

ಎಂಡಿಆರ್ ಹಂಚಿಕೆ ಹೇಗೆ?

ಎರಡು ಸಾವಿರ ರೂ ಮೇಲ್ಪಟ್ಟ ಮೌಲ್ಯದ ಯುಪಿಐ ಪಾವತಿಗಳಿಗೆ ಸರ್ಕಾರ ಎಂಡಿಆರ್ ವಿಧಿಸುತ್ತಿದೆ. ವರ್ತಕರು ಪಡೆಯುವ ಯುಪಿಐ ಪೇಮೆಂಟ್​ಗೆ ಶೇ. 0.4ರಷ್ಟು ಎಂಡಿಆರ್ ಇರುತ್ತದೆ. ಈ ಎಂಡಿಆರ್ ಶುಲ್ಕ ಹಣವು ಗ್ರಾಹಕನ ಬ್ಯಾಂಕ್, ಗ್ರಾಹಕ ಬಳಸಿದ ಥರ್ಡ್ ಪಾರ್ಟಿ ಯುಪಿಐ ಆ್ಯಪ್, ವರ್ತಕರ ಬ್ಯಾಂಕ್ ಮತ್ತು ಯುಪಿಐ ಆ್ಯಪ್​ನ ಪಾರ್ಟ್ನರ್ ಬ್ಯಾಂಕ್​ಗೆ ವಿವಿಧ ಪ್ರಮಾಣದಲ್ಲಿ ಹಂಚಿಕೆ ಆಗುತ್ತದೆ. ಯುಪಿಐ ಇಕೋಸಿಸ್ಟಂನಲ್ಲಿ ಇರುವ ಎಲ್ಲರಿಗೂ ಲಾಭವಾಗುವ ರೀತಿಯಲ್ಲಿ ಮಾಡಲ್ ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More