
ಟಾಟಾ ಮೋಟಾರ್ಸ್‌ಗೆ (TaTa Motors) 2026ರ ಆಗಸ್ಟ್ ತಿಂಗಳು ಉತ್ತಮ ಮಾರಾಟದ ತಿಂಗಳಾಗಿದೆ. ಕಂಪನಿಯ ಪ್ರಯಾಣಿಕ ವಾಹನ ವಿಭಾಗವು ಆಗಸ್ಟ್‌ನಲ್ಲಿ ಒಟ್ಟು 67,753 ಕಾರು ಮತ್ತು ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 43,315 ವಾಹನಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ಮಾರಾಟದಲ್ಲಿ ಶೇ. 56ರಷ್ಟು ಏರಿಕೆಯಾಗಿದೆ. ಕಂಪನಿಯ ಮಾರಾಟ ಹೆಚ್ಚಳಕ್ಕೆ ಭಾರತದ ಮಾರುಕಟ್ಟೆಯೇ ಪ್ರಮುಖ ಕಾರಣವಾಗಿದೆ. ಆಗಸ್ಟ್ 2026ರಲ್ಲಿ ಟಾಟಾ ಮೋಟಾರ್ಸ್ ಭಾರತದಲ್ಲಿ 65,253 ಕಾರು ಮತ್ತು ಎಸ್‌ಯುವಿಗಳನ್ನು ಮಾರಾಟ ಮಾಡಿದೆ. 2025ರ ಆಗಸ್ಟ್‌ನಲ್ಲಿ 41,001 ವಾಹನಗಳು ಮಾರಾಟವಾಗಿದ್ದವು. ಅಂದರೆ, ದೇಶೀಯ ಮಾರಾಟದಲ್ಲಿ ಈ ಬಾರಿ ಶೇ.59ರಷ್ಟು ಬೆಳವಣಿಗೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಟಾಟಾ ಮೋಟಾರ್ಸ್ ಮಾರಾಟ ಹೆಚ್ಚಾಗಿದೆ. ಆಗಸ್ಟ್ 2026ರಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಒಟ್ಟು 2,500 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 2,314 ವಾಹನಗಳು ಮಾರಾಟವಾಗಿದ್ದವು. ಇದರಿಂದ ಅಂತರರಾಷ್ಟ್ರೀಯ ಮಾರಾಟದಲ್ಲಿ ಶೇ.8ರಷ್ಟು ಏರಿಕೆ ಕಂಡುಬಂದಿದೆ.
ಟಾಟಾ ಮೋಟಾರ್ಸ್‌ನ ಮಾರಾಟ ಅಂಕಿ-ಅಂಶಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆ. ಆಗಸ್ಟ್ 2026ರಲ್ಲಿ ಕಂಪನಿಯು ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಟ್ಟು 16,549 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ 8,540 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ EV ಮಾರಾಟದಲ್ಲಿ ಶೇ.94ರಷ್ಟು ಏರಿಕೆಯಾಗಿದೆ. ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳಿಗೆ ಗ್ರಾಹಕರ ಬೇಡಿಕೆ ಮುಂದುವರಿದಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ. ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳ ಶ್ರೇಣಿಯಲ್ಲಿ ವಿವಿಧ ವಿಭಾಗಗಳ ಮಾದರಿಗಳನ್ನು ಹೊಂದಿದೆ. ಇದರಿಂದ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಾನ ಮತ್ತಷ್ಟು ಬಲಗೊಳ್ಳುತ್ತಿದೆ.
ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ!
ಒಂದೆಡೆ ಮಾರಾಟದಲ್ಲಿ ಏರಿಕೆ ಕಂಡಿರುವ ಟಾಟಾ ಮೋಟಾರ್ಸ್, ಮತ್ತೊಂದೆಡೆ ತನ್ನ ಕಾರು ಮತ್ತು ಎಸ್‌ಯುವಿಗಳ ಬೆಲೆಯನ್ನೂ ಹೆಚ್ಚಿಸಿದೆ. ಸೆಪ್ಟೆಂಬರ್ 1, 2026ರಿಂದ ಕಂಪನಿಯ ಹಲವು ಮಾದರಿಗಳ ಬೆಲೆ ಹೆಚ್ಚಾಗಿದೆ. ಗರಿಷ್ಠ ₹25,000ವರೆಗೆ ಬೆಲೆ ಏರಿಕೆ ಮಾಡಲಾಗಿದೆ. ಈ ಬೆಲೆ ಏರಿಕೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಿಗೂ ಅನ್ವಯಿಸುತ್ತದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ಹಣದುಬ್ಬರದ ಒತ್ತಡದಿಂದಾಗಿ ಬೆಲೆ ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
2026ರಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನ ವಿಭಾಗದಲ್ಲಿ ಇದು ಮೂರನೇ ಬೆಲೆ ಏರಿಕೆಯಾಗಿದೆ. ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ಪೆಟ್ರೋಲ್-ಡೀಸೆಲ್ ಮಾದರಿಗಳ ಬೆಲೆಯನ್ನು ಸರಾಸರಿ ಶೇ.0.5ರಷ್ಟು ಹೆಚ್ಚಿಸಲಾಗಿತ್ತು. ನಂತರ ಜುಲೈನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳ ಬೆಲೆಯನ್ನು ಗರಿಷ್ಠ ಶೇ.1.5ರಷ್ಟು ಹೆಚ್ಚಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ