ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ!
ಕಚ್ಚಾ ವಸ್ತುಗಳ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹುಂಡೈ, ಟಾಟಾ ಮೋಟಾರ್ಸ್ ಹಾಗೂ ಎಂಜಿ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಿವೆ. ಸೆಪ್ಟೆಂಬರ್ 1 ರಿಂದ ಕ್ರೆಟಾ, ವೆನ್ಯೂ, ನೆಕ್ಸಾನ್, ಹ್ಯಾರಿಯರ್ ಸೇರಿದಂತೆ ಪ್ರಮುಖ ಮಾಡೆಲ್‌ಗಳ ದರ 15 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಹೆಚ್ಚಾಗಲಿದ್ದು, ಕಾರು ಕೊಳ್ಳುವ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ.

ಮುಖ್ಯಾಂಶಗಳು
- ಸೆಪ್ಟೆಂಬರ್ 1 ರಿಂದ ಹುಂಡೈ, ಟಾಟಾ ಕಾರುಗಳ ಬೆಲೆ ಏರಿಕೆ.
- ಮಾಡೆಲ್‌ಗಳಿಗೆ ಅನುಗುಣವಾಗಿ ಕಾರುಗಳ ದರ 70 ಸಾವಿರದವರೆಗೆ ಹೆಚ್ಚಳ.
- ಕಚ್ಚಾ ವಸ್ತುಗಳ ವೆಚ್ಚ ಹೆಚ್ಚಿದ್ದರಿಂದ ಬೆಲೆ ಏರಿಸಿದ ಆಟೋಮೊಬೈಲ್ ಕಂಪನಿಗಳು.
ಬೆಂಗಳೂರು, ಸೆಪ್ಟೆಂಬರ್ 02: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಕಾರು ಕಂಪನಿಗಳು ಮತ್ತೊಂದು ಶಾಕ್ ನೀಡಿವೆ. ಕಚ್ಚಾ ವಸ್ತುಗಳ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹುಂಡೈ , ಟಾಟಾ, ಎಂಜಿ ಸೇರಿದಂತೆ ಹಲವು ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಿವೆ.
ಗರಿಷ್ಠ 70 ಸಾವಿರ ರೂ.ವರೆಗೂ ಬೆಲೆ ಏರಿಕೆ
ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಈಗಾಗಲೇ ದರ ಹೆಚ್ಚಳ ಮಾಡಿದ್ದು, ಇದೀಗ ಹುಂಡೈ ಮೋಟಾರ್ಸ್ ತನ್ನ ಎಲ್ಲಾ ಮಾಡೆಲ್‌ಗಳ ಕಾರುಗಳ ಬೆಲೆಯಲ್ಲಿ ಶೇಕಡಾ 1 ರವರೆಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಈ ದರ ಏರಿಕೆಯು ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿ ಮಾದರಿಗಳಾದ ಕ್ರೆಟಾ, ವೆನ್ಯೂ, ವರ್ಣಾ, ಅಲ್ಕಾಜರ್, ಎಕ್ಸ್‌ಟರ್, ಐ20 ಮತ್ತು ಗ್ರಾಂಡ್ ಐ10 ನಿಯೋಸ್ ಕಾರುಗಳಿಗೆ ಅನ್ವಯವಾಗಲಿದೆ. ಮಾಡೆಲ್‌ಗೆ ಅನುಗುಣವಾಗಿ ಕನಿಷ್ಠ 15,000 ರೂ. ರಿಂದ 70,000 ರೂ. ವರೆಗೆ ಬೆಲೆ ಏರಿಕೆಯಾಗಲಿದೆ.
ಟಾಟಾ ವಾಹನಗಳ ದರವೂ ಹೆಚ್ಚಳ
ಇತ್ತ ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವಾಹನಗಳ ಬೆಲೆಯನ್ನು ಗರಿಷ್ಠ 25,000 ರೂ. ವರೆಗೆ ಹೆಚ್ಚಿಸುತ್ತಿದ್ದು, ನೆಕ್ಸಾನ್, ಪಂಚ್, ಹ್ಯಾರಿಯರ್, ಕರ್ವ್ ಇವಿ ಮತ್ತು ಟಿಯಾಗೋ ಕಾರುಗಳ ದರ ಏರಲಿದೆ. ಹಾಗೆಯೇ ಎಂಜಿ (MG) ಕಂಪನಿಯ ಕಾರುಗಳ ಮೇಲೆ 40,000 ರೂ.ನಿಂದ 50,000 ರೂ.ವರೆಗೆ ದರ ಹೆಚ್ಚಳವಾಗಲಿದೆ ಎಂದು ಶೋರೂಮ್ ಮೂಲಗಳು ತಿಳಿಸಿವೆ.
“ಜಾಗತಿಕ ಮಟ್ಟದ ಯುದ್ಧದ ಎಫೆಕ್ಟ್ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾರುಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ” ಎಂದು ಸೇಲ್ಸ್ ಎಕ್ಸಿಕ್ಯುಟಿವ್‌ಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ದಿಢೀರ್ ದರ ಏರಿಕೆಯಿಂದಾಗಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದ ಗ್ರಾಹಕರು ತೀವ್ರ ನಿರಾಶೆಗೊಂಡಿದ್ದು, ಸದ್ಯಕ್ಕೆ ಕಾರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




