AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಪರಿಷತ್​​ನಲ್ಲಿ ಕಿಚ್ಚು ಹೊತ್ತಿಸಿದ ಹರಿಪ್ರಸಾದ್​​ ಹೇಳಿಕೆ: ಆಡಳಿತ-ವಿಪಕ್ಷಗಳ ನಡುವೆ ಭಾರಿ ಹೈಡ್ರಾಮಾ

ವಿಧಾನ ಪರಿಷತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಮತ್ತು ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆಚಾರವಿಲ್ಲದ ನಾಲಗೆ ಎಂದು ಕಮಲಪಡೆ ಕಿಡಿ ಕಾರಿದ ಪರಿಣಾಮ ಗದ್ದಲ ಜೋರಾಗಿದ್ದು, ಪೀಠದಲ್ಲಿದ್ದ ಸಭಾಪತಿಗಳು ಎದ್ದುನಿಂತ ಪ್ರಸಂಗವೂ ನಡೆದಿದೆ. ವಿಪಕ್ಷ ನಾಯಕರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್​​ ಸಭಾತ್ಯಾಗ ಮಾಡಿದ ಘಟನೆಯೂ ನಡೆದಿದೆ.

ವಿಧಾನ ಪರಿಷತ್​​ನಲ್ಲಿ ಕಿಚ್ಚು ಹೊತ್ತಿಸಿದ ಹರಿಪ್ರಸಾದ್​​ ಹೇಳಿಕೆ: ಆಡಳಿತ-ವಿಪಕ್ಷಗಳ ನಡುವೆ ಭಾರಿ ಹೈಡ್ರಾಮಾ
ಬಿ.ಕೆ. ಹರಿಪ್ರಸಾದ್​​ Image Credit source: webcast.gov.in
ಹರೀಶ್ ಜಿ.ಆರ್​.
| Edited By: |

Updated on:Sep 22, 2026 | 2:27 PM

Share

ಬೆಂಗಳೂರು, ಸೆಪ್ಟೆಂಬರ್​ 22: ವಿಧಾನ ಪರಿಷತ್​​ನ ಎರಡನೇ ದಿನದ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​​ ಅವರು ನೀಡಿದ ಹೇಳಿಕೆ ಭಾರಿ ಹೈಡ್ರಾಮಾಕ್ಕೆ ಕಾರಣವಾಗಿದ್ದು ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಸಾಲಮನ್ನಾ ವಿಚಾರವಾಗಿ ಚರ್ಚೆ ವೇಳೆ 800 ರೈತರ ಪ್ರಾಣ ತೆಗೆದುಕೊಂಡಿರುವ ನರೇಂದ್ರ ಮೋದಿ ಎಂದು ಹರಿಪ್ರಸಾದ್​​ ಹೇಳಿದ್ದು, ಅವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ಕೆರಳಿದ್ದಾರೆ. ಆಚಾರವಿಲ್ಲದ ನಾಲಗೆ ಎಂದು ಕಮಲಪಡೆ ಕಿಡಿ ಕಾರಿದ ಪರಿಣಾಮ ಗದ್ದಲ ಜೋರಾಗಿದ್ದು, ಪೀಠದಲ್ಲಿದ್ದ ಸಭಾಪತಿಗಳು ಎದ್ದುನಿಂತ ಪ್ರಸಂಗವೂ ನಡೆದಿದೆ.

ಸಭಾಪತಿಗಳ ಮನವಿ ಬಳಿಕ ಮರಳಿ ಚರ್ಚೆ ಆರಂಭ

ಸಾಲಮನ್ನಾ ವಿಚಾರವಾಗಿ ಚರ್ಚೆ ವೇಳೆ ಜನರ ಅಕೌಂಟ್ ಗೆ 15 ಲಕ್ಷ ಹಾಕ್ತೀವಿ ಎಂದದವರು ಎಲ್ಲಿ? ಎಂದು ಕಾಂಗ್ರೆಸ್​​ನ ಸುನೀಲ್​​ ಪ್ರಶ್ನಿಸಿದ್ದಾರೆ. ಈ ವೇಳೆ ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಶುರುವಾಗಿದ್ದು, ಅದೇ ಸಮಯದಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವಂತೆ ಹರಿಪ್ರಸಾದ್​​ ಆಡಿದ ಮಾತು ವಿಪಕ್ಷ ಸದಸ್ಯರನ್ನು ಮತ್ತಷ್ಟು ಕೆರಳಿಸಿದೆ. ಈ ವೇಳೆ ಸದಸ್ಯರ ವರ್ತನೆಗೆ ಸಭಾಪತಿ ಸಲೀಂ ಅಹ್ಮದ್ ಕಿಡಿ ಕಾರಿದ್ದು, ಇದೇನು ಮೀನು ಮಾರುಕಟ್ಟೆಯಾ ಎಂದು ಪ್ರಶ್ನಿಸಿದ್ದಾರೆ. ಸಭಾಪತಿಗಳ ಈ ಹೇಳಿಕೆಗೆ ಬಿಜೆಪಿಯ ಕೇಶವ ಪ್ರಸಾದ್ ತಿರುಗೇಟು ನೀಡಿದ್ದು, ಫಿಶ್ ಮಾರ್ಕೆಟ್ ವ್ಯವಸ್ಥೆ ಮಾಡಿದ್ದು ನೀವು. ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹೀಗೆ ಮಾತನಾಡ್ತಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ನಮ್ಮನ್ನ ನೋಡ್ತಿದ್ದಾರೆ. ಗೌರವದಿಂದ ವಿಚಾರ ಚರ್ಚೆ ಮಾಡಿ. ಒಬ್ಬರಿಗೊಬ್ಬರು ಅಗೌರವ ತರುವಂತೆ ನಡೆದುಕೊಳ್ಳಬೇಡಿ ಎಂದು ಸಭಾಪತಿಗಳು ಮನವಿ ಮಾಡಿದ ಬಳಿಕ ಮರಳಿ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ವಂದೇ ಮಾತರಂ ಗೀತೆ ವಿವಾದ: ಸಿಎಂ ಡಿಕೆಶಿಗೆ ರಾಜ್ಯಪಾಲರ ಪತ್ರ, ಆದೇಶ ಮರುಪರಿಶೀಲಿಸಲು ಸೂಚನೆ

ಬಿಜೆಪಿ-ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ

ಬರ ವಿಚಾರವಾಗಿ ಚರ್ಚೆ ವೇಳೆ ಡಿಬಿಟಿ ಮೂಲಕ ಹಣ ಪಾವತಿ ಸರಿಯಾಗಿ ಆಗ್ತಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಕ್ಕೆ ಸಚಿವ ಸಂತೋಷ್​​ ಲಾಡ್​​ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಕ್ಲಾರಿಫಿಕೇಶನ್ ಕೊಡಬೇಕು ಎಂದು ಎದ್ದು ನಿಂತಿದ್ದಾರೆ. ವಿಪಕ್ಷ ನಾಯಕರ ಮಾತಿಗೆ ಪದೇಪದೆ ಅಡ್ಡಿ ಮಾಡಲಾಗುತ್ತಿದೆ. ಸದನ ಕರೆದು ಚರ್ಚೆಗೆ ಮಾತಾಡಲು ಬಿಡಲ್ಲ ಎಂದರೆ ಹೇಗೆ? ವಿಶೇಷ ಸದನ ಕರೆದಿದ್ದು ಇದಕ್ಕೆನಾ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದು, ಆಡಳಿತ ಪಕ್ಷದ ನಡೆ ಖಂಡಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಹೀಗಾಗಿ ಸಭಾಪತಿಗಳು ಕೆಲ ಕಾಲ ವಿಧಾನಪರಿಷತ್​ ಕಲಾಪ ಮುಂದೂಡಬೇಕಾಯಿತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:27 pm, Tue, 22 September 26

Follow Us