AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಮಾತರಂ ಗೀತೆ ವಿವಾದ: ಸಿಎಂ ಡಿಕೆಶಿಗೆ ರಾಜ್ಯಪಾಲರ ಪತ್ರ, ಆದೇಶ ಮರುಪರಿಶೀಲಿಸಲು ಸೂಚನೆ

ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ರಾಜ್ಯಪಾಲರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಂವಿಧಾನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ.

ವಂದೇ ಮಾತರಂ ಗೀತೆ ವಿವಾದ: ಸಿಎಂ ಡಿಕೆಶಿಗೆ ರಾಜ್ಯಪಾಲರ ಪತ್ರ, ಆದೇಶ ಮರುಪರಿಶೀಲಿಸಲು ಸೂಚನೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್Image Credit source: tv9
Anil Kalkere
| Edited By: |

Updated on: Sep 22, 2026 | 1:45 PM

Share

ಬೆಂಗಳೂರು, ಸೆಪ್ಟೆಂಬರ್ 22: ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿರುವ ವಿಚಾರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯಪಾಲರು ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಂವಿಧಾನಾತ್ಮಕ ಅಂಶಗಳು ಹಾಗೂ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ವಂದೇ ಮಾತರಂ ಕುರಿತ ರಾಜ್ಯ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರಗಳೂ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸಬೇಕು: ರಾಜ್ಯಪಾಲ

ವಂದೇ ಮಾತರಂನ ಅಧಿಕೃತ ಆವೃತ್ತಿಯನ್ನು ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿದೆ. ರಾಷ್ಟ್ರೀಯ ಗೀತೆ ಹಾಗೂ ರಾಷ್ಟ್ರಗಾನದ ಕುರಿತು ನಿರ್ದಿಷ್ಟ ಆದೇಶಗಳನ್ನು ಹೊರಡಿಸಲಾಗಿದ್ದು, ರಾಜ್ಯಗಳೂ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯದ ಕಾರ್ಯಕ್ರಮಗಳಿಗೆ ಪ್ರತ್ಯೇಕ ಆವೃತ್ತಿ ಮಾಡುವಂತಿಲ್ಲ: ಗೆಹ್ಲೋಟ್

ಸಾಮೂಹಿಕ ಗಾಯನ ಸಂದರ್ಭದಲ್ಲೂ ವಂದೇ ಮಾತರಂನ ಅಧಿಕೃತ ಆವೃತ್ತಿಯನ್ನೇ ಹಾಡಬೇಕು ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಸಂಕ್ಷಿಪ್ತ ಅಥವಾ ಬದಲಾದ ಆವೃತ್ತಿಯನ್ನು ನಿಗದಿಪಡಿಸಲು ಅವಕಾಶವಿಲ್ಲ ಎಂದು ರಾಜ್ಯಪಾಲರು ಪತ್ರದಲ್ಲಿ ಹೇಳಿದ್ದಾರೆ.

ಇದು ಕೇವಲ ಆಡಳಿತಾತ್ಮಕ ಅನುಕೂಲದ ವಿಚಾರವಲ್ಲ. ರಾಷ್ಟ್ರೀಯ ಚಿಹ್ನೆಗೆ ಸಂಬಂಧಿಸಿದ ನಿಯಮಗಳ ಪಾಲನೆಯ ವಿಚಾರವಾಗಿದೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

1971ರ ಕಾಯ್ದೆಯ ಸೆಕ್ಷನ್ 3ರ ಅಡಿ ರಾಷ್ಟ್ರೀಯ ಗೀತೆಗೆ ನೀಡಲಾಗಿರುವ ರಕ್ಷಣೆಯನ್ನು ವಂದೇ ಮಾತರಂಗೂ ವಿಸ್ತರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಂದೇ ಮಾತರಂ ಕುರಿತ ರಾಜ್ಯ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ವಿಧಾನ ಮಂಡಲ ವಿಶೇಷ ಅಧಿವೇಶನ: ಮೊದಲ ದಿನವೇ ಪರಿಷತ್​​ನಲ್ಲಿ ‘ವಂದೇ ಮಾತರಂ’ ಕದನ

ಕಸ್ತೂರಿ ರಂಗನ್ ವರದಿ ಹಾಗೂ ಬರಗಾಲದ ಕುರಿತ ಚರ್ಚೆಗೆ ಕರೆಯಲಾಗಿರುವ 3 ದಿನಗಳ ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಪರಿಷತ್ತಿನಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನವನ್ನು ಎರಡು ಚರಣಗಳಿಗೆ ಮೊಟಕುಗೊಳಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯಪಾಲರು ಇದೀಗ ಸಿಎಂಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us