ಹೊಸ ಯೋಜನೆಗಳ ಘೋಷಣೆ: ಸಿಎಂ ಡಿ.ಕೆ.ಶಿವಕುಮಾರ್‌ಗೆ ಹಣಕಾಸು ಇಲಾಖೆಯಿಂದ ಮಹತ್ವದ ಎಚ್ಚರಿಕೆ
ರಾಜ್ಯದಲ್ಲಿ ವಿತ್ತೀಯ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆಗಳ ಘೋಷಣೆಗೆ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ. PWD, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ RDPR ಇಲಾಖೆಗಳಲ್ಲಿ ಒಟ್ಟು 36,136 ಕೋಟಿ ಬಿಲ್ ಬಾಕಿಯಿದೆ. ಹೀಗಾಗಿ ಹೊಸ ಕಾಮಗಾರಿಗಳಿಗಿಂತ ಮೊದಲು ಹಣಕಾಸಿನ ಲಭ್ಯತೆ ಖಚಿತಪಡಿಸಿಕೊಳ್ಳಲು ಹಣಕಾಸು ಇಲಾಖೆ ಸಲಹೆ ನೀಡಿದೆ. ಈ ಬಗ್ಗೆ ಸಿಎಂ ಡಿಕೆಶಿ ಕೂಡ ಪ್ರತಿಕ್ರಿಯಿಸಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ ಹೊಸ ಯೋಜನೆಗಳ ಘೋಷಣೆಗೆ ಹಣಕಾಸು ಇಲಾಖೆ ಎಚ್ಚರಿಕೆಯ ಗಂಟೆ ನೀಡಿದ್ದು, ಸೆಪ್ಟೆಂಬರ್ 17ರ ಹಣಕಾಸು ಇಲಾಖೆಯ ಟಿಪ್ಪಣಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯ ವಿವರ ಬಹಿರಂಗಗೊಂಡಿದೆ. 2026-27ರಲ್ಲಿ ರಾಜ್ಯದ ವಿತ್ತೀಯ ಕೊರತೆ 2.95%ಕ್ಕೆ ತಲುಪುವ ಅಂದಾಜಿದ್ದು, ರಾಜ್ಯದ ಆದಾಯ ಕೊರತೆ 22,957 ಕೋಟಿಗಳಾಗಿವೆ. FRBM ಮಾನದಂಡದ ಪ್ರಕಾರ ಆದಾಯ ಕೊರತೆ ಶೂನ್ಯವಾಗಿರಬೇಕು. ಆದರೆ ರಾಜ್ಯದಲ್ಲಿ ವಿತ್ತೀಯ ಕೊರತೆಯ ಮಿತಿ 3% ಇದೆ ಎಂದು ಹಣಕಾಸು ಇಲಾಖೆ ಉಲ್ಲೇಖಿಸಿದೆ.
ಅನುಮೋದನೆಯಾಗಿರುವ ಕಾಮಗಾರಿಗಳಿಗೇ ಬೇಕಿದೆ ಬೃಹತ್ ಮೊತ್ತ
ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವ ಮುನ್ನ ವಾಸ್ತವಿಕ ಲೆಕ್ಕಾಚಾರ ಅಗತ್ಯ. ರಾಜ್ಯದ ಒಟ್ಟು ಸಾಲದ ಹೊಣೆಗಾರಿಕೆ GSDPಯ 24.94%ಕ್ಕೆ ಏರಿಕೆಯಾಗಿದ್ದು, FRBM ಅಡಿಯಲ್ಲಿ ನಿಗದಿಯಾಗಿರುವ ಮಿತಿ 25% ಆಗಿದೆ. 2026-27ರ ಬಜೆಟ್ ಘೋಷಣೆಗಳಿಗೆ ಲಭ್ಯವಿರುವ ಸಾಲ ಪಡೆಯುವ ಸಾಮರ್ಥ್ಯ ಬಹುತೇಕ ಬಳಕೆಯಾಗಿದೆ. ರಾಜ್ಯದಲ್ಲಿ ಈಗಾಗಲೇ ಅನುಮೋದನೆಯಾದ ಕಾಮಗಾರಿಗಳ ಬಾಕಿ ವೆಚ್ಚ 2 ಲಕ್ಷ ಕೋಟಿಗೂ ಅಧಿಕವಿದ್ದು, ಅವುಗಳಿಗೇ ಬೃಹತ್ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಇದರ ನಡುವೆಯೇ ಹೊಸ ಯೋಜನೆಗಳ ಸೇರ್ಪಡೆ ಬಗ್ಗೆ ಹಣಕಾಸು ಇಲಾಖೆ ಕಳವಳ ವ್ಯಕ್ತಪಡಿಸಿದ್ದು, ಬಾಕಿ ಕಾಮಗಾರಿಗಳ ಹೊರೆಯನ್ನು ಮತ್ತಷ್ಟು ಹೆಚ್ಚಿಸಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ವಂದೇ ಮಾತರಂ ಗೀತೆ ವಿವಾದ: ಸಿಎಂ ಡಿಕೆಶಿಗೆ ರಾಜ್ಯಪಾಲರ ಪತ್ರ, ಆದೇಶ ಮರುಪರಿಶೀಲಿಸಲು ಸೂಚನೆ
ನಾಲ್ಕು ಇಲಾಖೆಗಳಲ್ಲೇ 36,136 ಕೋಟಿ ಬಿಲ್ ಬಾಕಿ!
PWD, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ RDPR ಇಲಾಖೆಗಳಲ್ಲಿ ಒಟ್ಟು 36,136 ಕೋಟಿ ಬಿಲ್ ಬಾಕಿಯಿದೆ. ಈಗಿರುವ ಬಾಕಿ ಪಾವತಿಗಳ ನಡುವೆಯೇ ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಸವಾಲು ಎದುರಾಗಿದೆ. ಹೀಗಾಗಿ ಹೊಸ ಕಾಮಗಾರಿಗಳಿಗಿಂತ ಮೊದಲು ಹಣಕಾಸಿನ ಲಭ್ಯತೆ ಖಚಿತಪಡಿಸಿಕೊಳ್ಳಲು ಹಣಕಾಸು ಇಲಾಖೆ ಸಲಹೆ ನೀಡಿದೆ. 2026-27ರ ಮೊದಲ ಆರು ತಿಂಗಳಲ್ಲೇ 5,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, SE-1 ಅಡಿಯ ಕಾಮಗಾರಿಗಳೂ ಇದರಲ್ಲಿ ಸೇರಿವೆ. ಆದರೆ ಈ ಕಾಮಗಾರಿಗಳಿಗೆ ಹೆಚ್ಚುವರಿ ಹಣಕಾಸಿನ ಮೂಲ ಇನ್ನೂ ಗುರುತಿಸಿಲ್ಲ ಎಂದು ಇಲಾಖೆ ಉಲ್ಲೇಖಿಸಿದೆ. ಈ ನಡುವೆ ಜಲಸಂಪನ್ಮೂಲ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಹಾಗೂ ಸಾರಿಗೆ ಇಲಾಖೆಗಳಿಂದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇದೆ. ಬೃಹತ್ ಪ್ರಮಾಣದ ಹೆಚ್ಚುವರಿ ಅನುದಾನದ ಪ್ರಸ್ತಾವನೆಗಳು ಹಣಕಾಸು ಇಲಾಖೆ ಮುಂದೆ ಬಾಕಿ ಇರುವ ನಡುವೆಯೇ ಹೊಸ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟ ಎಂಬ ಅಭಿಪ್ರಾಯ ಹಣಕಾಸು ಇಲಾಖೆಯದ್ದಾಗಿದೆ.
ಬರದಿಂದ ಬೊಕ್ಕಸಕ್ಕೆ ಮತ್ತಷ್ಟು ಹೊರೆ?
ತೀವ್ರ ಬರ ಪರಿಸ್ಥಿತಿಯಿಂದ ಸರ್ಕಾರದ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬರ ಪರಿಹಾರಕ್ಕೆ ಎಷ್ಟು ಹೆಚ್ಚುವರಿ ಹಣ ಬೇಕಾಗಬಹುದು ಎಂಬುದು ಕೇಂದ್ರದ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದ್ದು, ಬರದ ಪರಿಣಾಮ IP-SET ವಿದ್ಯುತ್ ಸಬ್ಸಿಡಿ ಹೊರೆ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದೆ. ಇದಕ್ಕೆ ಹೆಚ್ಚುವರಿ 4,000–5,000 ಕೋಟಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಆರ್ಥಿಕ ಇಲಾಖೆ ಎಚ್ಚರಿಕೆ ಬಗ್ಗೆ ಸಿಎಂ ಹೇಳಿದ್ದೇನು?
ಇನ್ನು ಆರ್ಥಿಕ ಇಲಾಖೆಯ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆಶಿ, ಅವರು ಸಲಹೆ ನೀಡಿರುವುದರಲ್ಲಿ ತಪ್ಪೇನಿಲ್ಲ. ಸರ್ಕಾರದ ಹಿತದೃಷ್ಟಿಯಿಂದ ಹುಷಾರಾಗಿರಿ ಎಂದಿದ್ದಾರೆ. ಅಧಿಕಾರದಲ್ಲಿರುವ ನಮಗೆ ಹೇಗೆ ನಡೆಸಬೇಕು ಎನ್ನುವ ಅರಿವಿದ್ದು, ನಾವು ಮಾಡುತ್ತೇವೆ. ಈ ಬಗ್ಗೆ ಮಾತಾಡೋರೆಲ್ಲ ಕೇಂದ್ರ ಸರ್ಕಾರ ನಮಗೆ ಕೊಡಬೇಕಿರುವ ಪಾಲು ಮೊದಲು ಕೊಡಿಸಲಿ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:21 pm, Tue, 22 September 26




