Tech Layoffs: ಟೆಕ್ ಕಂಪನಿಗಳಿಂದ ಈ ವರ್ಷ 1 ಲಕ್ಷ ಉದ್ಯೋಗಿಗಳ ವಜಾ; ಯಾವ ಕಂಪನಿಯಿಂದ ಎಷ್ಟು ಮಂದಿ? ಇಲ್ಲಿದೆ ವಿವರ

|

Updated on: Feb 11, 2023 | 1:15 PM

ಲೇಆಫ್ಸ್​​ ಡಾಟ್ ಫೈ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಜಾಗತಿಕವಾಗಿ 332 ಕಂಪನಿಗಳು ಈವರೆಗೆ 1,00,746 ಉದ್ಯೋಗಿಗಳನ್ನು ವಜಾಗೊಳಿಸಿವೆ.

Tech Layoffs: ಟೆಕ್ ಕಂಪನಿಗಳಿಂದ ಈ ವರ್ಷ 1 ಲಕ್ಷ ಉದ್ಯೋಗಿಗಳ ವಜಾ; ಯಾವ ಕಂಪನಿಯಿಂದ ಎಷ್ಟು ಮಂದಿ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಸ್ಥೂಲ ಆರ್ಥಿಕ ಪರಿಸ್ಥಿತಿಯ ಒತ್ತಡಗಳು, ಆರ್ಥಿಕ ಹಿಂಜರಿತದ ಭೀತಿಯಿಂದ ವಿಶ್ವದಾದ್ಯಂತ ತಂತ್ರಜ್ಞಾನ ಕಂಪನಿಗಳು (Tech Companies) 2023ರಲ್ಲಿ ಈವರೆಗೆ ಸುಮಾರು 1 ಲಕ್ಷ ಮಂದಿ ಉದ್ಯೋಗಿಗಳನ್ನು (Layoffs) ವಜಾಗೊಳಿಸಿವೆ. ಲೇಆಫ್ಸ್​​ ಡಾಟ್ ಫೈ (layoffs.fyi) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಜಾಗತಿಕವಾಗಿ 332 ಕಂಪನಿಗಳು ಈವರೆಗೆ 1,00,746 ಉದ್ಯೋಗಿಗಳನ್ನು ವಜಾಗೊಳಿಸಿವೆ. 2023ರಲ್ಲಿ ಆರಂಭದಿಂದಲೇ ಟೆಕ್ ಕಂಪನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಆರಂಭಿಸಿದ್ದವು. ಗೂಗಲ್, ಮೈಕ್ರೋಸಾಫ್ಟ್, ಸೇಲ್ಸ್​ಫೊರ್ಸ್ ಹಾಗೂ ಅಮೆಜಾನ್ ಹಾಗೂ ಇತರ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಿವೆ.

ಗೂಗಲ್ ತನ್ನ ಒಟ್ಟು ಉದ್ಯೋಗಿಗಳ ಶೇ 6ರಷ್ಟು ಮಂದಿಯನ್ನು, ಅಂದರೆ 12,000 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು, ಅಮೆಜಾನ್ 8,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇಷ್ಟೇ ಅಲ್ಲದೆ, ಸೇಲ್ಸ್​​ಫೋರ್ಸ್ 8,000, ಡೆಲ್ 6,650, ಐಬಿಎಂ ಸುಮಾರು 3,900, ಎಸ್​ಎಪಿ ಸುಮಾರು 3,000, ಝೂಮ್ 1,300 ಹಾಗೂ ಕಾಯಿನ್​ಬೇಸ್ 950 ಉದ್ಯೋಗಿಗಳನ್ನು ವಜಾಗೊಳಿಸಿವೆ.

ಇತ್ತೀಚೆಗೆ ಯಾಹೂ ಶೇ 20ರಷ್ಟು, ಅಂದರೆ 1,600 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಚೀನಾದ ಟಿಕ್​ಟಾಕ್ ಕೂಡ ಭಾರತದ ಎಲ್ಲ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಮೈಕ್ರೋಸಾಫ್ಟ್ ಒಡೆತನದ ಗಿಟ್​ಹಬ್ ಶೇ 10ರಷ್ಟು, ಅಂದರೆ 300 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿದೆ.

ಇದನ್ನೂ ಓದಿ: Yahoo Layoff: ಯಾಹೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಜಾಗತಿಕ ಆರ್ಥಿಕ ಪರಿಸ್ಥಿತಿಯ ಒತ್ತಡಗಳು, ವೆಚ್ಚ ಕಡಿತ ಇತ್ಯಾದಿ ಕಾರಣಗಳನ್ನು ಕಂಪನಿಗಳು ನೀಡುತ್ತಿವೆ. ಭಾರತದಲ್ಲೂ ಇನ್ಫೋಸಿಸ್, ವಿಪ್ರೋದಂಥ ಟೆಕ್ ಕಂಪನಿಗಳು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಸ್ವಿಗ್ಗಿ, ಜೊಮ್ಯಾಟೊ, ಓಲಾ ಸೇರಿ ಅನೇಕ ಕಂಪನಿಗಳು ಸಿಬ್ಬಂದಿಯನ್ನು ಮನೆಗೆ ಕಳುಹಿಸಿವೆ.

ದೊಡ್ಡ ಮಟ್ಟದ ಉದ್ಯೋಗ ಕಡಿತ; ವಿವರ ಇಲ್ಲಿದೆ

  • ಮೈಕ್ರೋಸಾಫ್ಟ್ – 10,000 ಉದ್ಯೋಗಿಗಳ ವಜಾ (ಒಟ್ಟು ಉದ್ಯೋಗಿಗಳ ಶೇ 5)
  • ಅಮೆಜಾನ್ – 8,000 (ಒಟ್ಟು ಉದ್ಯೋಗಿಗಳ ಶೇ 3)
  • ಸೇಲ್ಸ್​ಫೋರ್ಸ್​ – 8,000 (ಒಟ್ಟು ಉದ್ಯೋಗಿಗಳ ಶೇ 10)
  • ಡೆಲ್ – 6,650 (ಒಟ್ಟು ಉದ್ಯೋಗಿಗಳ ಶೇ 5)
  • ಐಬಿಎಂ – 3,900 (ಒಟ್ಟು ಉದ್ಯೋಗಿಗಳ ಶೇ 2)
  • ಎಸ್​ಎಪಿ – 3,000 (ಒಟ್ಟು ಉದ್ಯೋಗಿಗಳ ಶೇ 3)
  • ಝೂಮ್ – 1,300 (ಒಟ್ಟು ಉದ್ಯೋಗಿಗಳ ಶೇ 15)
  • ಕಾಯಿನ್​ಬೇಸ್ – 950 (ಒಟ್ಟು ಉದ್ಯೋಗಿಗಳ ಶೇ 20)
  • ಯಾಹೂ – 1,600 (ಒಟ್ಟು ಉದ್ಯೋಗಿಗಳ ಶೇ 20)
  • ಗಿಟ್​​​ಹಬ್ – 300 (ಒಟ್ಟು ಉದ್ಯೋಗಿಗಳ ಶೇ 10)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Sat, 11 February 23