
ನವದೆಹಲಿ, ಮೇ 15: ಪಾಕಿಸ್ತಾನದ ಆಪ್ತಮಿತ್ರನೆನಿಸಿರುವ ಟರ್ಕಿ ದೇಶವು ಭಾರತಕ್ಕೆ ನೇರವಾಗಿ ಚೂರಿ ಇರಿಯುವ ಕೆಲಸ ಮಾಡುತ್ತಲೇ ಬಂದಿದೆ. ಭಾರತವೇನೂ ನೋಡಿ ಕೈಕಟ್ಟಿ ಕೂತಿಲ್ಲ. ಟರ್ಕಿಯ ವಿರೋಧಿ ಗುಂಪಿನ ಜೊತೆ ಭಾರತದ ಉತ್ತಮ ಬಾಂಧವ್ಯ ಬೆಳೆಸುತ್ತಿದೆ. ಟರ್ಕಿಯ ಅತ್ಯಂತ ಕಡುವೈರಿ ರಾಷ್ಟ್ರ ಎನಿಸಿರುವ ಗ್ರೀಸ್ ಜೊತೆ ಭಾರತದ ಮಿಲಿಟರಿ ವ್ಯವಹಾರ ಸಂಬಂಧ ಗಾಢವಾಗುತ್ತಿದೆ. ಗ್ರೀಸ್ ದೇಶದ ವಾಯುಪಡೆ (ಹೆಲ್ಲೆನಿಕ್ ಏರ್ ಫೋರ್ಸ್) ಭಾರತದ ರುದ್ರಂ-1 ಮತ್ತು ರುದ್ರಂ-2 ಕ್ಷಿಪಣಿಗಳನ್ನು (Rudram Missiles) ಖರೀದಿಸಲು ಆಸಕ್ತಿ ತೋರುತ್ತಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ.
ಡಿಆರ್ಡಿಒ ಅಭಿವೃದ್ಧಿಪಡಿಸಿದ ಈ ಸೂಪರ್ಸಾನಿಕ್ ಮತ್ತು ಹೈಪರ್ಸಾನಿಕ್ ರುದ್ರಂ ಕ್ಷಿಪಣಿಗಳನ್ನು ಬಿಇಎಲ್, ಭಾರತ್ ಡೈನಾಮಿಕ್ಸ್ ಮತ್ತು ಅದಾನಿ ಡಿಫೆನ್ಸ್ ಕಂಪನಿಗಳು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಎಆರ್ಎಂ ಗುಂಪಿಗೆ ಸೇರುತ್ತವೆ. ಅಂದರೆ, ರಾಡಾರ್ ಅನ್ನು ವಂಚಿಸಿ, ಅಥವಾ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಇರುವಂತಹ ಕ್ಷಿಪಣಿಗಳಿವು. ಈ ಮೂಲಕ ಶತ್ರುಗಳ ಡಿಫೆನ್ಸ್ ಸಿಸ್ಟಂ ಅನ್ನು ನಿಷ್ಕ್ರಿಯಗೊಳಿಸಲು ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದನ್ನು SEAD (ಶತ್ರುಗಳ ಏರ್ಡಿಫೆನ್ಸ್ ನಿಷ್ಕ್ರಿಯಗೊಳಿಸುವುದು) ಮತ್ತು DEAD (ಶತ್ರುಗಳ ಏರ್ ಡಿಫೆನ್ಸ್ ನಾಶ ಮಾಡುವುದು) ಮಿಷನ್ ಎನ್ನಲಾಗುತ್ತದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?
ಗ್ರೀಸ್ ದೇಶದಲ್ಲಿ ಸದ್ಯ 24 ರಫೇಲ್ ಜೆಟ್ಗಳಿವೆ. ಇದಕ್ಕೆ ಅಳವಡಿಕೆಯಾಗಬಲ್ಲ ಎಆರ್ಎಂ ಕ್ಷಿಪಣಿಗಳ ಕೊರತೆ ಇದೆ. ಟರ್ಕಿಯಿಂದ ಸದಾ ಅಪಾಯದ ಪರಿಸ್ಥಿತಿಯಲ್ಲಿರುವ ಗ್ರೀಸ್ ದೇಶವು ಆ್ಯಂಟಿ ರಾಡಾರ್ ಮಿಷನ್ಗಳಿಗೆ ಅಮೆರಿಕದ ಎಜಿಎಂ-88 ಹಾರ್ಮ್ ಮಿಸೈಲ್ಗಳನ್ನು (AGM-88 HARM missiles) ನೆಚ್ಚಿಕೊಂಡಿದೆ. ಆದರೆ, ಫ್ರಾನ್ಸ್ ದೇಶದ ಎಂಬಿಡಿಎ ಆರ್ಜೆ10 ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆಯಾದರೂ ಇದು ಗ್ರೀಸ್ನಲ್ಲಿರುವ ರಫೇಲ್ ಜೆಟ್ಗಳಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ಅಮೆರಿಕದ ಎಜಿಎಂ-88 ಹಾರ್ಮ್ ಕ್ಷಿಪಣಿಗಳನ್ನು ನೆಚ್ಚಿಕೊಳ್ಳುವಂತಾಗಿದೆ.
ಆದರೆ, ಅಮೆರಿಕದ ಈ ಕ್ಷಿಪಣಿಗಳು ದುಬಾರಿ ಎನಿಸಿವೆ. ಈ ಕ್ಷಿಪಣಿಗಳಿಗೆ ಸೂಕ್ತ ಮತ್ತು ಸಮರ್ಥ ಪರ್ಯಾಯ ಎಂದರೆ ಭಾರತದ ರುದ್ರಂ ಕ್ಷಿಪಣಿಗಳು. ಇವು ಮಲ್ಟಿ ಪ್ಲಾಟ್ಫಾರ್ಮ್ಗಳಿಗೆ ಹೊಂದಿಕೆಯಾಗಬಲ್ಲಂತಹವು. ಗ್ರೀಸ್ನಲ್ಲಿರುವ ರಫೇಲ್ ಜೆಟ್ಗಳಿಗೂ ಇವು ಹೊಂದಿಕೊಳ್ಳುತ್ತವೆ. ಹೀಗಾಗಿ, ಗ್ರೀಸ್ ದೇಶವು ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತವಾಗಿದೆ. ಕೇವಲ ಗ್ರೀಸ್ ಮಾತ್ರವಲ್ಲ, ಯೂರೋಪ್ನಲ್ಲಿರುವ ನ್ಯಾಟೋ ಪಡೆಯಲ್ಲಿರುವ ಜರ್ಮನಿ, ಪೋಲ್ಯಾಂಡ್ ಮತ್ತಿತರ ಸದಸ್ಯ ರಾಷ್ಟ್ರಗಳು ಕೂಡ ರುದ್ರಂ ಕ್ಷಿಪಣಿ ಮೇಲೆ ಆಸಕ್ತಗೊಂಡಿವೆ.
ಇದನ್ನೂ ಓದಿ: ಚೀನಾದ ಫೈಟರ್ ಜೆಟ್ ಕಂಪನಿ: ಮೋದಿ ಭಾಷಣದ ಬಳಿಕ ಮೂರು ದಿನದಲ್ಲಿ ಶೇ. 11ರಷ್ಟು ಕುಸಿದಿದೆ ಷೇರುಬೆಲೆ
ರುದ್ರಂ-1 ಕ್ಷಿಪಣಿ 100-250 ಕಿಮೀ ಶ್ರೇಣಿಯ ಸಾಮರ್ಥ್ಯ ಹೊಂದಿದೆ. ರುದ್ರಂ-2 ಕ್ಷಿಪಣಿಯು 300 ಕಿಮೀ ಶ್ರೇಣಿ ಹೊಂದಿದೆ. ಡಿಆರ್ಡಿಒ ಈಗ 55 ಕಿಮೀ ಶ್ರೇಣಿ ಸಾಮರ್ಥ್ಯದ ರುದ್ರಂ-3 ಕ್ಷಿಪಣಿ ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ನ ವೆಬ್ಸೈಟ್ನಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Thu, 15 May 25