ಚೀನಾದ ಫೈಟರ್ ಜೆಟ್ ಕಂಪನಿ: ಮೋದಿ ಭಾಷಣದ ಬಳಿಕ ಮೂರು ದಿನದಲ್ಲಿ ಶೇ. 11ರಷ್ಟು ಕುಸಿದಿದೆ ಷೇರುಬೆಲೆ
China's AVIC Chengdu Aircraft company share price down: ಭಾರತದ ವಿರುದ್ಧ ಪಾಕಿಸ್ತಾನ ಬಳಸಿದ ಜೆ-10 ಫೈಟರ್ ಜೆಟ್ ತಯಾರಿಸಿದ ಚೀನಾದ ಚೆಂಗ್ಡು ಏರ್ಕ್ರಾಫ್ಟ್ ಕಂಪನಿಯ ಷೇರುಬೆಲೆ 3 ದಿನದಲ್ಲಿ ಶೇ. 11.5ರಷ್ಟು ಕುಸಿದಿದೆ. ನರೇಂದ್ರ ಮೋದಿ ಅವರು ಆಪರೇಷನ್ ಸಿಂದೂರದ ಯಶಸ್ಸಿನ ಬಗ್ಗೆ ತಮ್ಮ ಭಾಷಣದಲ್ಲಿ ಹೇಳಿದ ಬಳಿಕ ಚೀನಾದ ಡಿಫೆನ್ಸ್ ಸ್ಟಾಕ್ಗಳಿಗೆ ಹಿನ್ನಡೆಯಾಗುತ್ತಿದೆ. ಇದೇ ವೇಳೆ, ಭಾರತದ ಡಿಫೆನ್ಸ್ ಸ್ಟಾಕುಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

ನವದೆಹಲಿ, ಮೇ 15: ಚೀನಾದ ಫೈಟರ್ ಜೆಟ್ಗಳನ್ನು ತಯಾರಿಸುವ ಎವಿಐಸಿ ಚೆಂಗಡು ಏರ್ಕ್ರಾಫ್ಟ್ ಕಂಪನಿಯ (AVIC Chengdu Aircraft company) ಷೇರುಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಆಪರೇಷನ್ ಸಿಂದೂರದ (Operation Sindoor) ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣದವರೆಗೂ ಈ ಕಂಪನಿ ಷೇರುಬೆಲೆ ಏರಿಕೆ ಕಾಣುತ್ತಾ ಬಂದಿತ್ತು. ಮೋದಿ ತಮ್ಮ ಭಾಷಣದಲ್ಲಿ ಚೀನೀ ಶಸ್ತ್ರಾಸ್ತ್ರಗಳು ಹೇಗೆ ವಿಫಲವಾದವು ಎಂಬುದನ್ನು ಜಾಹೀರುಗೊಳಿಸಿದರೋ, ಆಗಿನಿಂದ ಈ ಕಂಪನಿಯ ಷೇರುಬೆಲೆ ಇಳಿಕೆಯಾಗುತ್ತಾ ಬಂದಿದೆ. ಮೂರು ದಿನದಲ್ಲಿ ಶೇ. 11.5ರಷ್ಟು ಕುಸಿತ ಕಂಡಿದೆ.
ಆಪರೇಷನ್ ಸಿಂದೂರದಲ್ಲಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಚೀನಾದ ಜೆ-10 ಫೈಟರ್ ಜೆಟ್ಗಳು ಹಾಗೂ ಪಿಎಲ್-15 ಕ್ಷಿಪಣಿ, ಟರ್ಕಿಯ ಡ್ರೋನ್ಗಳು ಇತ್ಯಾದಿಯನ್ನು ಬಳಸಿತ್ತು. ಚೀನಾದ ಡಿಫೆನ್ಸ್ ಸಿಸ್ಟಂ ಅನ್ನೂ ನಿಯೋಜಿಸಿತ್ತು ಪಾಕಿಸ್ತಾನ. ಆದರೆ, ಭಾರತದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಚೀನೀ ಡಿಫೆನ್ಸ್ ಸಿಸ್ಟಂ ನಿಷ್ಕ್ರಿಯಗೊಂಡಿತು. ಪಾಕಿಸ್ತಾನದಿಂದ ದಾಳಿ ಮಾಡಲು ಬಳಸಿದ್ದ ಫೈಟರ್ ಜೆಟ್ಗಳು ಹಾಗೂ ಕ್ಷಿಪಣಿಗಳು ಭಾರತದ ಡಿಫೆನ್ಸ್ ಸಿಸ್ಟಂನಿಂದ ನಾಶಗೊಂಡವು ಎನ್ನಲಾಗಿದೆ.
ಪ್ರಧಾನಿಗಳು ಮೂರು ದಿನಗಳ ಹಿಂದೆ ತಮ್ಮ ಭಾಷಣದಲ್ಲಿ ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಬಗ್ಗೆ ಹೇಳಿದ್ದರು. ಅದಕ್ಕೂ ಮುನ್ನ ಭಾರತದ ವಿವಿಧ ಪಡೆಗಳ ಡಿಜಿಗಳು ಆಪರೇಷನ್ ಸಿಂದೂರದ ಯಶಸ್ವಿ ಕಾರ್ಯಾಚರಣೆಯ ವಿವರ ನೀಡಿದರು. ಪಾಕಿಸ್ತಾನದ ವಿವಿಧ ಮಿಲಿಟರಿ ನೆಲೆಗಳನ್ನು ನಾಶ ಮಾಡಲಾಗಿದ್ದನ್ನು ಉಪಗ್ರಹ ಚಿತ್ರಗಳ ಮೂಲಕ ಸಾಕ್ಷ್ಯಗಳನ್ನು ತೋರಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂದೂರ, ಹೀರೋ ಆದ ಆಕಾಶತೀರ; ಬೆಂಗಳೂರಿನ ಕಂಪನಿ ನಿರ್ಮಿಸಿದ ಅಭೇದ್ಯ ರಕ್ಷಣಾ ಕೋಟೆ ಅಂತಿಂಥದ್ದಲ್ಲ…
ಭಾರತದ ಬಳಸಿದ ರಫೇಲ್ ಜೆಟ್ಗಳನ್ನು ತಯಾರಿಸುವ ಫ್ರಾನ್ಸ್ನ ಡಸೋ ಏವಿಯೇಶನ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ಏರುತ್ತಿರುವುದೂ ಗಮನಾರ್ಹ. ಆಪರೇಷನ್ ಸಿಂದೂರ ಆರಂಭವಾದಾಗಿನಿಂದ ಭಾರತದ ಡಿಫೆನ್ಸ್ ಸ್ಟಾಕ್ಗಳೂ ಕೂಡ ಉತ್ತಮ ಸ್ಪಂದನೆ ಪಡೆಯುತ್ತಿವೆ. ಎಚ್ಎಎಲ್, ಬಿಇಎಲ್ ಷೇರುಗಳು ಗಣನೀಯವಾಗಿ ಏರುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Thu, 15 May 25








