Masked Aadhaar: ಏನಿದು ಮಾಸ್ಕ್ಡ್ ಆಧಾರ್, ಇದರ ಪ್ರಯೋಜನ ಏನು, ಡೌನ್‌ಲೋಡ್ ಹೇಗೆ?
ಮಾಸ್ಕ್ಡ್ ಆಧಾರ್ ಅಂದರೆ ಏನು, ಅದರ ಪ್ರಯೋಜನಗಳೇನು, ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಇಲ್ಲಿದೆ ಹಂತಹಂತವಾದ ವಿವರ.
ಸರ್ಕಾರದ ಸಬ್ಸಿಡಿಗಳು ಮತ್ತು ಸರ್ಕಾರದಿಂದ ನೀಡುವ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದಕ್ಕೆ ಅಗತ್ಯವಿರುವ ಕಡ್ಡಾಯ ಕೆವೈಸಿ ದಾಖಲೆಗಳಲ್ಲಿ ಆಧಾರ್ ಕಾರ್ಡ್ (Aadhaar) ಕೂಡ ಒಂದು. ಬ್ಯಾಂಕ್ ಖಾತೆಯನ್ನು ತೆರೆಯಬೇಕು ಅಂದರಂತೂ ಇದು ಪ್ರಮುಖ ದಾಖಲೆ. ಆದರೆ ಆಧಾರ್ ಕಾರ್ಡ್ ಹೊಂದಿರುವವರು ಆನ್‌ಲೈನ್ ಕೆವೈಸಿ ಹೆಸರಿನಲ್ಲಿ ವಂಚನೆಗೆ ಬಲಿಯಾಗುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಆಧಾರ್ ಕಾರ್ಡ್ ಹೊಂದಿರುವವರಿಗೆ ಯಾವುದೇ ರೀತಿ ವಂಚನೆ ಆಗದಂತೆ ಸುರಕ್ಷತೆ ಒದಗಿಸುವ ಸಲುವಾಗಿ ಯುಐಡಿಎಐನಿಂದ (UIDAI) ಪರಿಚಯಿಸಿರುವುದೇ ‘ಮಾಸ್ಕ್ಡ್ ಆಧಾರ್’ (Masked Aadhaar).
ಮಾಸ್ಕ್ಡ್ ಆಧಾರ್ ಅರ್ಥ ಏನು? ಯುಐಡಿಎಐ ನೀಡುವ ಈ ಮಾಸ್ಕ್ಡ್ ಆಧಾರ್ ಕಾರ್ಡ್ ಐಡಿಯಲ್ಲಿ ಒಬ್ಬರ ಆಧಾರ್ ಕಾರ್ಡ್‌ನ ಕೊನೆಯ 4 ಅಂಕಿಗಳು ಮಾತ್ರ ಗೋಚರಿಸುತ್ತವೆ. ಆಧಾರ್ ಕಾರ್ಡ್‌ನ ಮೊದಲ 8 ಮೂಲ ಸಂಖ್ಯೆಗಳನ್ನು ಮಾಸ್ಕ್ಡ್ ಆಧಾರ್ ಕಾರ್ಡ್ ಐಡಿಯಲ್ಲಿ ‘XXXX-XXXX’ ಎಂದು ನಮೂದಿಸಲಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಸಂಖ್ಯೆಯು ಅಪರಿಚಿತರಿಗೆ ಗೋಚರಿಸುವುದಿಲ್ಲ, ಇದು ಆಧಾರ್ ದುರುಪಯೋಗ ಆಗುವುದನ್ನು ತಡೆಯುತ್ತದೆ.
ಮಾಸ್ಕ್ಡ್ ಆಧಾರ್ ಕಾರ್ಡ್ ಡೌನ್‌ಲೋಡ್: ಹಂತ ಹಂತವಾದ ವಿವರಣೆ ಯಾವುದೇ ರೀತಿಯ ದುರುಪಯೋಗ ಆಗದಂತೆ ಸುರಕ್ಷತೆ ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಹೊಂದಿರುವವರು 6 ಸರಳ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಹಂತ ಹಂತದ ಮಾರ್ಗದರ್ಶನ ಇಲ್ಲಿದೆ:
1. ಅಧಿಕೃತ ಯುಐಡಿಎಐ (UIDAI) ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ಮತ್ತು ‘ಡೌನ್‌ಲೋಡ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ;
2. ಆಧಾರ್ / ವಿಐಡಿ / ನೋಂದಣಿ ಐಡಿ ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ಮಾಸ್ಕ್ಡ್ ಆಧಾರ್ ಆಯ್ಕೆಯಲ್ಲಿ ಟಿಕ್ ಮಾಡಿ;
3. ಅಲ್ಲಿ ಕೋರಿದ ವಿವರಗಳನ್ನು ನಮೂದಿಸಿ ಮತ್ತು ‘ಒಟಿಪಿ ವಿನಂತಿ’ ಆಯ್ಕೆಯನ್ನು ಕ್ಲಿಕ್ ಮಾಡಿ;
4. ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು;
5. ಒಟಿಪಿ ಅನ್ನು ನಮೂದಿಸಿ ಮತ್ತು ‘ಡೌನ್‌ಲೋಡ್ ಆಧಾರ್’ನಲ್ಲಿ ಕ್ಲಿಕ್ ಮಾಡಿ; ಮತ್ತು
6. ಈಗ, ನಿಮ್ಮ ಮಾಸ್ಕ್ಡ್ ಆಧಾರ್ ಕಾರ್ಡ್ ಡೌನ್‌ಲೋಡ್‌ಗೆ ಲಭ್ಯವಾಗುತ್ತದೆ.
ಮಾಸ್ಕ್ಡ್ ಆಧಾರ್ ಪಾಸ್‌ವರ್ಡ್ ಮಾಸ್ಕ್ಡ್ ಆಧಾರ್ ಪಿಡಿಎಫ್ ಸ್ವರೂಪದಲ್ಲಿ ಲಭ್ಯ ಇರುತ್ತದೆ ಮತ್ತು ಅದನ್ನು ಪಾಸ್‌ವರ್ಡ್ ಸಹಿತ ಸಕ್ರಿಯಗೊಳಿಸಲಾಗುತ್ತದೆ. ಡೌನ್‌ಲೋಡ್ ಮಾಡಿದ ನಂತರ ಮಾಸ್ಕ್ ಮಾಡಿದ ಆಧಾರ್ ಕಾರ್ಡ್ ಪಾಸ್‌ವರ್ಡ್ ಅನ್ನು ನಿಮ್ಮ ಇಮೇಲ್‌ಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ: PAN- Aadhaar Linking: ಈಗಲಾದರೂ 500 ರೂಪಾಯಿ ಪಾವತಿಸಿ ಪ್ಯಾನ್-ಆಧಾರ್ ಜೋಡಿಸಿ, ಇಲ್ಲದಿದ್ದರೆ ಈ ಎಲ್ಲ ಪರಿಣಾಮ ಎದುರಿಸಿ