ವಾಷಿಂಗ್ಟನ್, ಏಪ್ರಿಲ್ 3: ಭಾರತ ಅದ್ವಿತೀಯ ರೀತಿಯಲ್ಲಿ ಆರ್ಥಿಕ ವೃದ್ಧಿ ತೋರುತ್ತಿದ್ದರೂ ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ದಕ್ಷಿಣ ಏಷ್ಯಾ ಪ್ರದೇಶದ ಆರ್ಥಿಕತೆ ಸದ್ಯಕ್ಕೆ ತೀರಾ ಆಶಾದಾಯಕವಾಗಿಲ್ಲ. ಈ ಪ್ರದೇಶದ ಆರ್ಥಿಕತೆ ಇನ್ನೂ ಕೂಡ ಕೋವಿಡ್ ಮುಂಚಿನ ಆರ್ಥಿಕ ಮಟ್ಟವನ್ನು (pre-covid growth level) ದಾಟಿಲ್ಲ. ಭಾರತವನ್ನೂ ಒಳಗೊಂಡಂತೆ ಈ ಭಾಗದ ದೇಶಗಳಲ್ಲಿ ಖಾಸಗಿ ಹೂಡಿಕೆಗಳು ಹೆಚ್ಚಾಗಬೇಕು, ಉದ್ಯೋಗಸೃಷ್ಟಿ ಜಾಸ್ತಿಯಾಗಬೇಕು. ಆಗ ಆರ್ಥಿಕ ಅಭಿವೃದ್ಧಿಗೆ ವೇಗ ಸಿಗಬಹುದು ಎಂಬುದು ವಿಶ್ವಬ್ಯಾಂಕ್ನ ಸಲಹೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಭೂತಾನ್ ಮತ್ತು ಅಫ್ಘಾನಿಸ್ತಾನ ದೇಶಗಳು ದಕ್ಷಿಣ ಏಷ್ಯಾ ಪ್ರದೇಶದಲ್ಲಿವೆ. ವಿಶ್ವಬ್ಯಾಂಕ್ ವರದಿಯಲ್ಲಿ ಅಫ್ಗಾನಿಸ್ತಾನದ ಅಂಕಿ ಅಂಶಗಳನ್ನು ಒಳಗೊಳ್ಳಲಾಗಿಲ್ಲ. ಭಾರತದ ಆರ್ಥಿಕತೆ 2023-24ರಲ್ಲಿ ಶೇ. 7.5ರಷ್ಟು ಬೆಳೆದರೆ, 2024-25ರಲ್ಲಿ ಅದರ ಜಿಡಿಪಿ ಬೆಳವಣಿಗೆ ಶೇ. 6.6ಕ್ಕೆ ಸೀಮಿತಗೊಳ್ಳಬಹುದು ಎಂಬುದು ವಿಶ್ವಬ್ಯಾಂಕ್ನ ಅನಿಸಿಕೆ.
ಇದನ್ನೂ ಓದಿ: ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?
ದಕ್ಷಿಣ ಏಷ್ಯ ದೇಶಗಳಲ್ಲಿ ಉತ್ತಮ ಆರ್ಥಿಕ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯ ಹೆಚ್ಚಿದೆ. ಇದಕ್ಕೆ ಕಾರಣ ಜನಸಂಖ್ಯೆ. ಬೇರೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚು. ಅದರಲ್ಲೂ ಕೆಲಸ ಮಾಡುವ ವಯೋಮಾನದ ಜನರ ಸಂಖ್ಯೆ ಹೆಚ್ಚಿದೆ. ಈ ಮಾನವ ಸಂಪನ್ಮೂಲವನ್ನು ದಕ್ಷಿಣ ಏಷ್ಯಾ ದೇಶಗಳು ಸರಿಯಾಗಿ ಬಳಸುತ್ತಿಲ್ಲ. ಉದ್ಯೋಗಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು ಎಂದು ವಿಶ್ವಬ್ಯಾಂಕ್ನ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದ ನಿಮ್ಮ ಪೋಸ್ಟ್ಗಳು ವಿದೇಶೀ ಸರ್ವರ್ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್
ಈ ಪ್ರಕಾರ ದಕ್ಷಿಣ ಎಷ್ಯಾದಲ್ಲಿ ಉದ್ಯೋಗ ಅನುಪಾತ ಶೇ. 59 ಇದ್ದರೆ, ಬೇರೆ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಇದು ಶೇ. 70ರಷ್ಟಿದೆ. ಉದ್ಯೋಗ ಅನುಪಾತ ಇನ್ನಷ್ಟು ಹೆಚ್ಚಿದಲ್ಲಿ ದಕ್ಷಿಣ ಏಷ್ಯಾದ ಒಟ್ಟಾರೆ ಆರ್ಥಿಕ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಾಗುತ್ತದೆ ಎಂದು ವರ್ಲ್ಡ್ ಬ್ಯಾಂಕ್ನ ಸೌತ್ ಏಷ್ಯಾ ಮುಖ್ಯ ಆರ್ಥಿಕ ತಜ್ಞ ಫ್ರಾಂಜಿಸ್ಕಾ ಆನ್ಸೋರ್ಜ್ ಹೇಳಿದ್ದಾರೆ.
ಆದರೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ವಿಶ್ವಬ್ಯಾಂಕ್ನ ಕಡಿಮೆ ಅಂದಾಜು ಅಚ್ಚರಿ ಮೂಡಿಸುತ್ತದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 8ರ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅನೇಕರು ಅಂದಾಜಿಸಿದ್ದಾರೆ. 2024-25ರಲ್ಲೂ ಇದೇ ವೇಗವನ್ನು ಭಾರತ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ