SBI ATM: ಎಟಿಎಂಗಳಲ್ಲಿ ಹಣ ಹಿಂಪಡೆಯುವ ನಿಯಮಗಳ ಬದಲಾವಣೆ, ಇಲ್ಲಿದೆ ನೀವು ತಿಳಿಯಬೇಕಾದ ಮಾಹಿತಿ

ATM Cash Withdrawal: ಒಂದು ನಿರ್ದಿಷ್ಟ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ಹಿಂಪಡೆಯಬೇಕಿದ್ದರೆ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕಾಗುತ್ತದೆ.

SBI ATM: ಎಟಿಎಂಗಳಲ್ಲಿ ಹಣ ಹಿಂಪಡೆಯುವ ನಿಯಮಗಳ ಬದಲಾವಣೆ, ಇಲ್ಲಿದೆ ನೀವು ತಿಳಿಯಬೇಕಾದ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 25, 2022 | 11:53 AM

ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ (State Bank of India – SBI) ಗ್ರಾಹಕರನ್ನು ಮೋಸಗಾರರಿಂದ ರಕ್ಷಿಸಲೆಂದು ಒಟಿಟಿ (One Time Password – OTP) ವ್ಯವಸ್ಥೆ ಜಾರಿ ಮಾಡಿದೆ. ಈ ನಿಯಮಗಳ ಪ್ರಕಾರ ಒಂದು ನಿರ್ದಿಷ್ಟ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ಹಿಂಪಡೆಯಬೇಕಿದ್ದರೆ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕಾಗುತ್ತದೆ. ಭಾರತದ ಇತರ ಕೆಲವು ಬ್ಯಾಂಕ್​ಗಳು ಸಹ ಎಟಿಎಂನಿಂದ ಹಣ ಪಡೆಯುವ ನಿಯಮಗಳಿಗೆ ಇದೇ ರೀತಿಯ ಬದಲಾವಣೆ ತರುವ ಸಾಧ್ಯತೆಯಿದೆ ಎಂಬ ಮಾತು ಬ್ಯಾಂಕಿಂಗ್ ವಲಯದಲ್ಲಿ ಕೇಳಿ ಬರುತ್ತಿದೆ. ಇದು ಅನಧಿಕೃತ ವಹಿವಾಟು ತಡೆಗಟ್ಟುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ.

ಯಾವುದೇ ಗ್ರಾಹಕ ತನ್ನ ಎಟಿಎಂ ಕಾರ್ಡ್​ ಬಳಸಿ ಹಣ ಹಿಂಪಡೆಯಲು ಯತ್ನಿಸಿದಾಗ ನಾಲ್ಕು ಅಂಕೆಗಳ ಒಟಿಪಿ ಬರುತ್ತದೆ. ಎಸ್​ಬಿಐನ ಸರ್ವರ್​ಗಳು ಜನರೇಟ್ ಮಾಡುವ ಈ ಅಂಕಿಗಳು ಎಕ್​ಕ್ರಿಪ್ಟೆಡ್​ ಪಾಸ್​ವರ್ಡ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಬಳಸಿ ಗ್ರಾಹಕರು ಹಣ ಹಿಂಪಡೆಯಬಹುದು. ಈ ಒಟಿಪಿ ಒಂದು ಬಾರಿಯ ಬಳಕೆಗೆ ಮಾತ್ರವೇ ಸೀಮಿತವಾಗಿರುತ್ತದೆ. ಜನವರಿ 1, 2020ರಿಂದಲೂ ಎಸ್​ಬಿಐ ಒಟಿಪಿ ಆಧರಿತ ಎಟಿಎಂ ವಹಿವಾಟಿಗೆ ಚಾಲನೆ ನೀಡಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಇತರ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಎಸ್​ಬಿಐ ಗ್ರಾಹಕರಲ್ಲಿ ಸುರಕ್ಷಿತ ಬ್ಯಾಂಕಿಂಗ್ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ತನ್ನ ಎಲ್ಲ ಗ್ರಾಹಕರಿಗೂ ಈ ಸೇವೆ ಬಳಸಿಕೊಳ್ಳುವಂತೆ ಮನವಿ ಮಾಡಿದೆ.

ಎಸ್​ಬಿಐ ಎಟಿಎಂಗಳಲ್ಲಿ ₹ 10,000 ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ಹಿಂಪಡೆಯುವ ಗ್ರಾಹಕರು ಒಟಿಪಿ ನಮೂದಿಸಬೇಕಾಗುತ್ತದೆ.

ಒಟಿಪಿ ಬಳಸಿ ಹಣ ಹಿಂಪಡೆಯುವುದು ಹೇಗೆ?

1) ಎಸ್​ಬಿಐ ಎಟಿಎಂನಲ್ಲಿ ಹಣ ಹಿಂಪಡೆಯಲು ಹೋಗುವವರು ತಮ್ಮ ಎಟಿಎಂ ಕಾರ್ಡ್​ನೊಂದಿಗೆ ಮೊಬೈಲ್ ಫೋನ್ ಸಹ ಇಟ್ಟುಕೊಂಡಿರಬೇಕು.

2) ಎಟಿಎಂ ಯಂತ್ರದಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಹಾಕಿದ ನಂತರ ನಂತರ ಎಟಿಎಂ ಪಿನ್ ಹಾಗೂ ನೀವು ಹಿಂಪಡೆಯಲು ಉದ್ದೇಶಿಸಿರುವ ಹಣದ ಮೊತ್ತ ನಮೂದಿಸಬೇಕು.

3) ನಿಮ್ಮ ಮೊಬೈಲ್​ಗೆ ಎಸ್​ಎಂಎಸ್ ಮೂಲಕ ಒಟಿಪಿ ಬರುತ್ತದೆ. ಅದನ್ನು ಎಟಿಎಂ ಯಂತ್ರದಲ್ಲಿ ನಮೂದಿಸಿ.

4) ನೀವು ಒಟಿಪಿ ನಮೂದಿಸಿದ ನಂತರ ವ್ಯವಹಾರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಎಟಿಎಂ ಯಂತ್ರದಿಂದ ಹಣ ಬರುತ್ತದೆ.

Published On - 11:52 am, Mon, 25 July 22