Zomato Listing: ಝೊಮ್ಯಾಟೋ ಲಿಸ್ಟಿಂಗ್ ನಂತರ ಮೂರೇ ಟ್ರೇಡಿಂಗ್ ಸೆಷನ್ನಲ್ಲಿ ಶೇ 95ರಷ್ಟು ಏರಿಕೆ
ಆನ್ಲೈನ್ ಫುಡ್ ಡೆಲಿವರಿ ಕಂಪೆನಿಯಾದ ಝೊಮ್ಯಾಟೋ ಷೇರಿನ ಬೆಲೆ ಮೂರು ಟ್ರೇಡಿಂಗ್ ಸೆಷನ್ನಲ್ಲಿ ಶೇ 95ರಷ್ಟು ಹೆಚ್ಚಾಗಿ, ಹೂಡಿಕದಾರರ ಹೂಡಿಕೆ ಮೊತ್ತ ದುಪ್ಪಟ್ಟು ಆಗುವ ಸಮೀಪದಲ್ಲಿದೆ.
ಝೊಮ್ಯಾಟೋ ಕಂಪೆನಿಯ (Zomato) ಷೇರು ಇಂದಿನ (ಜುಲೈ 27, 2021) ಶೇ 5ರ ತನಕ ಏರಿಕೆ ಕಂಡು, ಎನ್ಎಸ್ಇಯಲ್ಲಿ ಹೊಸ ದಾಖಲೆ ಮಟ್ಟವಾದ ರೂ. 147.80 ತಲುಪಿತು. ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಆದ ಝೊಮ್ಯಾಟೋ ಪ್ರತಿ ಷೇರಿಗೆ ರೂ. 76ರಂತೆ ಐಪಿಒನಲ್ಲಿ ವಿತರಿಸಲಾಗಿತ್ತು. ಆ ಹಂತದಿಂದ ಶೇ 95ರಷ್ಟು ಏರಿಕೆ ಆಗಿದೆ. ಸ್ವಿಸ್ ಬ್ರೋಕರೇಜ್ ಹೇಳುವಂತೆ, ಇನ್ನೂ ಶೇ 12ರಷ್ಟು ಏರಿಕೆ ಕಾಣುವ ಸಾಧ್ಯತೆ ಝೊಮ್ಯಾಟೋಗೆ ಇದೆ. 12 ತಿಂಗಳ ಅವಧಿಯನ್ನು ಗುರಿಯಾಗಿಟ್ಟುಕೊಂಡು ಈ ಬ್ರೋಕಿಂಗ್ನಿಂದ ಪ್ರತಿ ಷೇರಿಗೆ 165 ರೂಪಾಯಿ ಗುರಿ ನಿಗದಿ ಮಾಡಲಾಗಿದೆ. “ಬಹಳ ವೇಗವಾಗಿ ಬೆಳೆಯುತ್ತಿರುವ ಭಾರತದ ಫುಡ್ ಡೆಲಿವರಿ ಮಾರ್ಕೆಟ್ನ ಎರಡು ಪ್ರಮುಖ ಕಂಪೆನಿಗಳಲ್ಲಿ ಒಂದಾದ ಝೊಮ್ಯಾಟೋದಿಂದ ನಾವು ಶೇ 40ರಷ್ಟು ಆದಾಯ ಸಿಎಜಿಆರ್ ನಿರೀಕ್ಷೆ ಮಾಡುತ್ತೇವೆ. ಈ ಭಾಗದಲ್ಲಿ ಇದನ್ನು ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ಕಂಪೆನಿಗಳಲ್ಲಿ ಒಂದನ್ನಾಗಿ ಮಾಡುತ್ತದೆ,” ಎಂದು ಯುಬಿಎಸ್ ಸೆಕ್ಯೂರಿಟೀಸ್ ಹೇಳಿದೆ.
ಝೊಮ್ಯಾಟೋ ಕಂಪೆನಿಯ ಷೇರು ಕಳೆದ ಶುಕ್ರವಾರದಂದು ಪ್ರತಿ ಷೇರಿಗೆ 115 ರೂಪಾಯಿಯಂತೆ ಲಿಸ್ಟಿಂಗ್ ಆಗಿತ್ತು. ಆ ನಂತರ ಶೇ 28.52ರಷ್ಟು ಏರಿಕೆ ಕಂಡು, ಬಿಎಸ್ಇಯಲ್ಲಿ 56.90 ಲಕ್ಷ ಷೇರುಗಳು ಕೈ ಬದಲಾಗಿದ್ದವು. ಈ ತನಕ ಎನ್ಎಸ್ಇಯಲ್ಲಿ 8.14 ಕೋಟಿ ಷೇರುಗಳು ವಹಿವಾಟಾಗಿವೆ. ಕಳೆದ ವರ್ಷದಿಂದ ಆನ್ಲೈನ್ ಫುಡ್ ಡೆಲಿವರಿಗೆ ಜಾಗತಿಕವಾಗಿ ಬೇಡಿಕೆ ಬಂದಿದೆ ಅಂತಲ್ಲ. ಸಣ್ಣ ಕುಟುಂಬಗಳು, ಕಡಿಮೆ ಸಮಯ ಮತ್ತು ಅಡುಗೆ ಮಾಡುವ ಸಾಧ್ಯತೆ ಹಾಗೂ ಇತರ ಅಂಶಗಳು ಸೇರಿ ಭಾರತದ ಆನ್ಲೈನ್ ಫುಡ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಸಾಧ್ಯತೆಯನ್ನು ತೆರೆದಿಟ್ಟಿದೆ.
ಘಟಕದ ಆರ್ಥಿಕತೆಯಲ್ಲಿ ಈಗಲೂ ಬದಲಾವಣೆಗಳು ಆಗುತ್ತಾ ಇದೆ ಮತ್ತು ರೆಸ್ಟೋರೆಂಟ್ಗಳೇ ತಮ್ಮದೇ ಪ್ಲಾಟ್ಫಾರ್ಮ್ಗಳನ್ನು ಮಾಡಿಕೊಳ್ಳುತ್ತಿವೆ. ಇನ್ನು ನಾನ್ ಡೆಲಿವರಿ ಪ್ಲಾಟ್ಫಾರ್ಮ್ಗಳಾದ Thriveನಂಥವು ಸಹ ಸ್ಪರ್ಧೆ ನೀಡುತ್ತಿವೆ. ಈ ರೀತಿ ಚದುರಿದ ವಾತಾವರಣದಲ್ಲಿ ಅಂತಿಮವಾಗಿ ಅಗ್ರಿಗೇಟರ್ ಆದ ಪ್ಲಾಟ್ಫಾರ್ಮ್ಗಳಿಗೆ ಸಿಂಹ ಪಾಲು ದೊರೆಯುವುದಕ್ಕೆ ಅನುಕೂಲ ಆಗುತ್ತದೆ. ಭಾರತದಲ್ಲಿ 1 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. 5 ಕೋಟಿಯಿಂದ 7 ಕೋಟಿ ಒಟ್ಟಾರೆ ಆನ್ಲೈನ್ ಆರ್ಡರ್ಗಳಾಗುತ್ತಿವೆ. ಭಾರತದಲ್ಲಿ ಬೆಳವಣಿಗೆಗೆ ದೀರ್ಘಾವಧಿಯ ಅವಕಾಶಗಳಿವೆ ಎಂದು ಯುಬಿಎಸ್ ನಂಬಿಕೆ ಆಗಿದೆ. ಇನ್ನು ನವೆಂಬರ್ 2020ರಲ್ಲಿ ನಡೆದ ಸಮೀಕ್ಷೆಯೊಂದರ ಬಗ್ಗೆ ಯುಬಿಎಸ್ನಿಂದ ಪ್ರಸ್ತಾವ ಮಾಡಲಾಗಿದೆ. ಅದರಂತೆ ಯಾರು ಆನ್ಲೈನ್ನಲ್ಲಿ ಆರ್ಡರ್ ಮಾಡಿಲ್ಲವೋ ಅಂಥವರ ಪೈಕಿ ಶೇ 80ರಷ್ಟು ಮಂದಿ ಭವಿಷ್ಯದಲ್ಲಿ ಆರ್ಡರ್ ಮಾಡುವ ಸಾಧ್ಯತೆ ಇದೆ.
(ಈ ಲೇಖನದಲ್ಲಿನ ಅಭಿಪ್ರಾಯ ಆಯಾ ಬ್ರೋಕಿಂಗ್ ಸಂಸ್ಥೆಯದು. ಹೂಡಿಕೆಗೆ ಮುಂಚಿನ ನಿರ್ಧಾರ ವೈಯಕ್ತಿಕವಾದದ್ದು.)
(Zomato Share Price Increased By 95 Percent In 3 Trading Session From Listing )