6 ಮದುವೆಯಾದ ಖತರ್ನಾಕ್ ಕಿಲಾಡಿ: ಮೊಬೈಲ್ ಸ್ವಿಚ್ ಆಫ್ ಮಾಡಿ ಕೊನೆಗೂ ಸಿಕ್ಕಿಬಿದ್ದ..!
Crime News In Kannada: ಬಹುರಾಷ್ಟ್ರೀಯ ಕಂಪೆನಿಯಲ್ಲಿ ಭಾರಿ ಸಂಬಳದ ಪ್ಯಾಕೇಜ್‌ನೊಂದಿಗೆ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿದ್ದ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದಾಗ್ಯೂ ಕೆಲವರಿಗೆ ವಯಸ್ಸು ಮೀರಿದರೂ ಕಂಕಣ ಭಾಗ್ಯ ಕೂಡಿ ಬರಲ್ಲ. ಇನ್ನು ಕೆಲವರಿಗೆ ಕಂಕಣ ಬಲ ಕೂಡಿಬಂದರೂ ಮದುವೆ ವೇಳೆ ಹಲವು ಅಡೆತಡೆಗಳು ಎದುರಾಗುತ್ತವೆ. ಆದರೆ ಇಲ್ಲೊಬ್ಬ ಕೇವಲ 33 ವರ್ಷದೊಳಗೆ ಬರೋಬ್ಬರಿ 6 ಮದುವೆಯಾಗಿ ಇದೀಗ ಸಿಕ್ಕಿಬಿದ್ದಿದ್ದಾನೆ. ವಿಶೇಷ ಎಂದರೆ ಈ ಆರು ಹೆಂಡಿರ ಮುದ್ದಿನ ಗಂಡ ಒಬ್ಬರಿಗೊಬ್ಬರನ್ನು ಪರಿಚಯನೇ ಮಾಡಿಲ್ಲ. ಅಂದರೆ ಎಲ್ಲರಿಗೂ ಮೋಸ ಮಾಡುತ್ತಾ 7ನೇ ಮದುವೆಯ ಸಿದ್ಧತೆಯಲ್ಲಿದ್ದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಹೌದು, 6 ಮಹಿಳೆಯರಿಗೆ ವಂಚಿಸಿದ ಪತಿರಾಯ ಶಂಕರ ಬಾಬುವನ್ನು ಆಂಧ್ರಪ್ರದೇಶದ ಅಡಪ ಪೊಲೀಸರು ಬಂಧಿಸಿದ್ದಾರೆ. ಹೀಗೆ ಬಂಧನಕ್ಕೆ ಒಳಗಾಗಲು ಕಾರಣ ಮೊಬೈಲ್ ಸ್ವಿಚ್ ಆಗಿದ್ದು ಎಂಬುದು ವಿಶೇಷ. ಅಂದರೆ 6 ವಿವಾಹವಾಗಿದ್ದ ಶಂಕರ ಬಾಬು ಕೆಲ ದಿನಗಳ ಹಿಂದೆ ಎಸ್ಕೇಪ್ ಆಗಿದ್ದ.
2021 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಶಂಕರ್ ಬಾಬು ವಧುವನ್ನು ಹುಡುಕುತ್ತಿರುವುದಾಗಿ ಪ್ರೊಫೈಲ್ ಹಾಕಿದ್ದ. ಹೀಗೆ ಹಾಕಿದ್ದ ಪ್ರೊಫೈಲ್ನಲ್ಲಿ ತಾನು ಸಾಫ್ಟ್‌ವೇರ್ ಇಂಜಿಯರ್, ಉತ್ತಮ ವೇತನವಿದೆ ಎಂದೆಲ್ಲಾ ಬಂಡಲ್ ಬರೆದುಕೊಂಡಿದ್ದ. ಇದನ್ನು ನೋಡಿ ಮಹಿಳೆಯೊಬ್ಬರು ಶಂಕರ್ ಬಾಬುವನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಆತನ ಬಲೆಗೆ ಬಿದ್ದು ವಿವಾಹವಾಗಿದ್ದಾರೆ.
ಮದುವೆಯಾಗಿ ಒಂದು ವರ್ಷ ಜೊತೆಯಾಗಿಯೇ ಇದ್ದರು. ಇದರ ನಡುವೆ ಆಗಾಗ್ಗೆ ಶಂಕರ್ ಬಾಬು ಕಣ್ಮರೆಯಾಗುತ್ತಿದ್ದ. ಆದರೂ ಹೆಂಡತಿ ಕೆಲಸದ ನಿಮ್ಮಿತ್ತ ಹೋಗಿದ್ದಾರೆ ಎಂದು ಸುಮ್ಮನಿರುತ್ತಿದ್ದಳು. ಆದರೆ ಯಾವಾಗ ಶಂಕರ್ ಬಾಬು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರೋ ಆಗ ಹೆಂಡತಿಗೆ ಅನುಮಾನ ಮೂಡಿದೆ.
ಅಷ್ಟೇ ಅಲ್ಲದೆ ಮನೆಯಲ್ಲಿನ ಬೀರುವನ್ನು ಪರಿಶೀಲಿಸಿದಾಗ, 20 ಲಕ್ಷ ರೂಪಾಯಿ ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಇದೇ ಮಾದರಿಯಲ್ಲಿ ಆರ್‌ಸಿ ಪುರಂ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಹೀಗಾಗಿ ವಿಶೇಷ ತಂಡ ರಚಿಸಿ ಶಂಕರ್ ಬಾಬುಗಾಗಿ ಕೊಂಡಾಪುರದ ಗಚ್ಚಿಬೌಲಿ ಪೊಲೀಸರು ಬಲೆ ಬೀಸಿದ್ದಾರೆ.
ಕೊನೆಗೆ ಹೈದರಾಬಾದ್ನಲ್ಲಿ ಶಂಕರ್ಬಾಬುವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಬಳಿಕ ವಿಚಾರಣೆಗೊಳಪಡಿಸಿದಾಗ 6 ಮದುವೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಶಂಕರ್ ಬಾಬು ಆಂಧ್ರಪ್ರದೇಶದ ಮಂಗಳಗಿರಿ ಮೂಲದವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಅವರ ವಿರುದ್ಧ ಇದೇ ರೀತಿಯ ಪ್ರಕರಣಗಳು ತನಿಖೆಯಲ್ಲಿವೆ. ಈತ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ.
ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಭಾರಿ ಸಂಬಳದ ಪ್ಯಾಕೇಜ್‌ನೊಂದಿಗೆ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿದ್ದ. ಇದನ್ನು ನಂಬಿ ಈತನ ಬಲೆಗೆ ಬೀಳುತ್ತಿದ್ದ ಮಹಿಳೆಯರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ನಗದು ಮತ್ತು ಚಿನ್ನದೊಂದಿಗೆ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ವಂಚನೆ, ಕ್ರಿಮಿನಲ್, ನಂಬಿಕೆ ದ್ರೋಹದ ಹೆಸರಿನಲ್ಲಿ ಶಂಕರ್ ಬಾಬು ವಿರುದ್ದ ಪ್ರಕರಣ ದಾಖಲಿಸಿದ್ದು, ಈತನಿಂದ ಮತ್ತಷ್ಟು ಮಹಿಳೆಯರು ವಂಚನೆಗೊಳಗಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಎಂದು ಗಚ್ಚಿಬೌಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ. ಸುರೇಶ್ ತಿಳಿಸಿದ್ದಾರೆ.