ವಕೀಲೆ ಮೇಲೆ ಹಲ್ಲೆ ಪ್ರಕರಣ: ಒಗ್ಗಟ್ಟು ಪ್ರದರ್ಶಿಸಿದ ವಕೀಲರು, ನಾಳೆ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ
ಬಾಗಲಕೋಟೆಯಲ್ಲಿ ನಡೆದ ವಕೀಲೆ ಮೇಲೆ ಹಲ್ಲೆ ಪ್ರಕರಣ ಸಂಬಂಧ ವಕೀಲರು ಒಗ್ಗಟ್ಟು ಪ್ರದರ್ಶಿಸಿದ್ದು, ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಬಾಗಲಕೋಟೆ: ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ವಕೀಲೆ(Lawyer) ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಇದೀಗ ವಕೀಲರು ಒಗ್ಗಟ್ಟು ಪ್ರದರ್ಶಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ(Protest) ನಡೆಸಲಿದ್ದಾರೆ. ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಸಂಗೀತಾರ ಮೇಲೆ ಮಾಂತೇಶ್ ಚೊಳಚಗುಡ್ಡ ಎಂಬ ವ್ಯಕ್ತಿ ಹಲ್ಲೆ (Assault) ನಡೆಸಿದ್ದರು. ಇದಕ್ಕೆ ಆಕ್ರೋಶಗೊಂಡಿರುವ ಬಾಗಲಕೋಟೆ ವಕೀಲರು ನಾಳೆ ಕೋರ್ಟ್ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಅಲ್ಲದೆ, ಹಲ್ಲೆ ಸಂಬಂಧ ತೀರ್ವ ಆಕ್ರೊಶ ಹೊರ ಹಾಕಿದ್ದಾರೆ.
ನನ್ನ ಪತಿ ಹಾಗೂ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆ ಎಂದು ವಕೀಲೆ ದೂರಿದ್ದರು.
ಬಾಗಲಕೋಟೆಯ ವಿನಾಯಕ ನಗರದ 3 ನೇ ಕ್ರಾಸ್ನಲ್ಲಿರುವ ವಕೀಲೆ ಸಂಗೀತಾ ಶಿಕ್ಕೇರಿ ಮನೆಯ ಕಾಂಪೌಂಡ್ ವಿವಾದದಲ್ಲಿತ್ತು. ಸಂಗೀತಾ ಶಿಕ್ಕೇರಿ ತಾಯಿ ಶಾರದಾ ಶಿಕ್ಕೇರಿ, ಶುವಿತಾ ಶಿಕ್ಕೇರಿ ಹಾಗೂ ಹನುಮಂತ ಶಿಕ್ಕೇರಿ ಎಂಬುವರ ಮಧ್ಯೆ ವಿವಾದ ಇತ್ತು. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ದೆಹಲಿ ಸುಪ್ರೀಮ್ ಕೋರ್ಟ್ನಲ್ಲಿ ಮನೆ ವಿವಾದ ವಿಚಾರಣಾ ಹಂತದಲ್ಲಿತ್ತು. ಬಾಗಲಕೋಟೆ ಹಿರಿಯ ನ್ಯಾಯಾಧೀಶರು ಯಥಾ ಸ್ಥಿತಿ ಕಾಪಾಡುವಂತೆ ಸ್ಟೇ ಇದೆ. ಹೀಗಿದ್ದಾಗಲೂ ಕೃತ್ಯ ಎಸಗಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರು.
ಬಾಲಕಿ ಮೇಲೆ ಹರಿದ ಟಿಪ್ಪರ್
ಮಂಡ್ಯ: ಟಿಪ್ಪರ್ ಹರಿದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ದುಂಡನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿ ಭೂಮಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬಸ್ಥರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಟಿಪ್ಪರ್ ಹರಿದು ಹೋಗಿದ್ದು, ಟಿಪ್ಪರ್ ಲಾರಿಗಳ ನಿಯಂತ್ರಣಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆಯೂ ಆಗ್ರಹಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದಾರೆ.
ಅಪಾರ್ಟ್ಮೆಂಟ್ ಮುಂದೆ ಗಾಂಜಾ ವ್ಯಸನಿಯ ಪುಂಡಾಟಿಕೆ
ನೆಲಮಂಗಲ: ರಾತ್ರಿ ವೇಳೆ ಅಪಾರ್ಟ್ಮೆಂಟ್ ಮುಂದೆ ಗಾಂಜಾ ಮತ್ತಿನಲ್ಲಿ ವ್ಯಕ್ತಿಯ ಪುಂಡಾಟಿಕೆ ನಡೆಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಹೆಸರಘಟ್ಟ ರಸ್ತೆ ಬಾಗಲಗುಂಟೆ ಬಳಿಯ ಸಿಲ್ವರ್ ಸ್ಪ್ರಿಂಗ್ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಅತಿಯಾದ ಗಾಂಜಾ ಮತ್ತಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಪುಂಡಾಟಿಕೆ ನಡೆಸಿದ್ದಾನೆ. ಅಲ್ಲದೆ, ಅಪಾರ್ಟ್ಮೆಂಟ್ ಒಳಗೆ ಬರುವ ವ್ಯಕ್ತಿಗೆ ಥಳಿಸಿದ್ದಾನೆ. ಇದರಿಂದಾಗಿ ನಿವಾಸಿಗಳಿಗೆ ಭಯದ ಆತಂಕ ಎದುರಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು 35 ವರ್ಷದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಕೋಲಾರ: ನೀಲಗಿರಿ ಪೋಲ್ಸ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿ ಹೊಡೆದ ಘಟನೆ ಮಾಲೂರು ಪಟ್ಟಣದ ಹೋಂಡಾ ಸ್ಟೇಡಿಯಂ ಮುಂಬಾಗದಲ್ಲಿ ನಡೆದಿದೆ. ಹಾಸನದಿಂದ ಮಾಲೂರು ಕೈಗಾರಿಕಾ ಪ್ರದೇಶಕ್ಕೆ ಬರುತ್ತಿದ್ದ ಲಾರಿ ಹೋಂಡಾ ಸ್ಟೇಡಿಯಂ ಮುಂಬಾಗ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ಗೆ ಗಾಯಗಳಾಗಿದ್ದು, ಹದಗೆಟ್ಟ ರಸ್ತೆಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.