ಬೆಂಗಳೂರು, ಫೆಬ್ರವರಿ 28: ಮಹಿಳೆಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಸಂಚಾರ ಪೊಲೀಸರನ್ನು (Bengaluru Traffic Police) ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ (Bengaluru Police Commissioner) ದಯಾನಂದ್ ಆದೇಶ ಹೊರಡಿಸಿದ್ದಾರೆ. ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ಟೇಬಲ್ಗಳಾದ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್ಸ್ ಟೇಬಲ್ ಬಸಪ್ಪ ಇವರನ್ನು ಅಮಾನತುಗೊಳಿಸಲಾಗಿದೆ.
ಕಳೆದ ಶನಿವಾರ ಇಸ್ರೋ ಜಂಕ್ಷನ್ ಬಳಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯನ್ನು ಬೆದರಿಸಿ 8,000 ರೂಪಾಯಿ ಸುಲಿಗೆ ಮಾಡಿದ ಆರೋಪ ವೆಂಕಟಾಚಲಪತಿ ಹಾಗೂ ಇತರರ ಮೇಲೆ ಕೇಳಿ ಬಂದಿತ್ತು.
ಸಂಚಾರ ಪೊಲೀಸರು ತಮ್ಮ ಮಗಳಿಂದ ಹಣ ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ತಂದೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ದೂರು ನೀಡಿದ್ದರು. ನಂತರ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಪೂರ್ವ ಸಂಚಾರ ಡಿಸಿಪಿ ಕುಲದೀಪ ಕುಮಾರ್ ಜೈನ್ ಇಲಾಖೆ ಮಟ್ಟದ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲಿ ಪೊಲೀಸ್ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದಾರೆ.
ರಸ್ತೆ ದಾಟುತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಇಬ್ಬರು ಪಾದಚಾರಿಗಳು ಗಾಯಗೊಂಡ ಘಟನೆ ಬೆಂಗಳೂರಿನ ಬ್ಯಾಟರಾನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ರಸ್ತೆಯ ಗುಡ್ಡದಹಳ್ಳಿಯ ಗಿರಿಯಾಸ್ ಶೋರೂಮ್ ಬಳಿ ನಡೆದಿದೆ. ಬೈಕ್ ಡಿಕ್ಕಿಯ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು: SSLC ಪ್ರಿಪರೇಟರಿ ಪರೀಕ್ಷೆ ನಂತರ ನಾಪತ್ತೆಯಾಗಿದ್ದ ನಾಲ್ವರು ನದಿ ಬಳಿ ಶವವಾಗಿ ಪತ್ತೆ
ಘಟನೆ ಬಳಿಕ ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 am, Wed, 28 February 24