ರಿಯಲ್ ಎಸ್ಟೇಟ್ ಉದ್ಯಮಿಯನ್ನ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು: ಕೊಲೆ ಹಿಂದಿದ್ಯಾ ಪ್ರೇಮ್ ಕಹಾನಿ?
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಬಿಜಾಡಿಯ ಗ್ರಾಮದ ಬಿಜಿಎಸ್ ಲೇಔಟ್ನಲ್ಲಿ 28 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆಯಾಗಿದೆ. ಕುಟುಂಬಸ್ಥರ ಪ್ರಕಾರ, ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಮತ್ತು ಹಿಂದೆ ಈ ಕುರಿತು ಕುಟುಂಬಗಳ ನಡುವೆ ಜಗಳವೂ ನಡೆದಿತ್ತು ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಂಗಳೂರು, ಮಾರ್ಚ್ 23: ಆತನಿಗೆ ಅಪ್ಪ ಅಮ್ಮ ಇಲ್ಲ. ಪಿತ್ರಾರ್ಜಿತವಾಗಿ ಬಂದ ಆಸ್ತಿ ನೋಡ್ಕೊಳ್ತಾ ರಿಯಲ್ ಎಸ್ಟೇಟ್ ಬ್ಯುಸಿನೆಸ್ (Real estate businessman) ಮಾಡಿಕೊಂಡಿದ್ದ. ಇರೋ ಒಬ್ಬ ತಮ್ಮನಿಗೂ ಮದುವೆ ಮಾಡಿ, ತಾನೂ ಮದುವೆ ಆಗಲು ಸಿದ್ದವಾಗಿದ್ದ. ಆದರೆ ನಿನ್ನೆ ಸಂಜೆ ಆತನ ಕೊಲೆಯಾಗಿದ್ದು (kill), ನೆತ್ತರ ಕಹಾನಿ ಹಿಂದೆ ಹೆಣ್ಣಿನ ನೆರಳು ಇದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಬಿಜಾಡಿಯ ಗ್ರಾಮದ ಬಿಜಿಎಸ್ ಲೇಔಟ್ನಲ್ಲಿ ನಿನ್ನೆ ಸಂಜೆ ರಿಯಲ್ ಎಸ್ಟೇಟ್ ಯುವ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆಯಾಗಿದೆ. ತಾನು ತಂದಿದ್ದ ಕಾರಿನಲ್ಲೇ ಲೋಕನಾಥ್ ಸಿಂಗ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನಿಂದ ಓಡಿ ಬಂದ ಲೋಕನಾಥ್ 1000 ಮೀಟರ್ ದೂರದಲ್ಲಿದ್ದ ಆಟೋ ಹತ್ತಿ ಪ್ರಾಣ ಬಿಟ್ಟಿದ್ದ.
ಮೂಲತಃ ಮಾಗಡಿ ಮೂಲದ ಲೋಕನಾಥ್ ಸಿಂಗ್ಗೆ ವಯಸ್ಸಿನ್ನೂ 28. ಆದರೆ ತಂದೆ-ತಾಯಿಯನ್ನ ಕಳೆದುಕೊಂಡಿದ್ದ ಲೋಕನಾಥ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ಇದ್ದ ಒಬ್ಬ ತಮ್ಮನಿಗೂ ಮದುವೆ ಮಾಡಿ ತಾನೂ ಮದುವೆಗೆ ಸಿದ್ದವಾಗಿದ್ದ. ಆದರೆ ಲೋಕನಾಥ್ ಹುಡುಗಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದಿದ್ದು, ಅದರಿಂದಲೇ ಇಂತ ಘಟನೆ ಆಗಿರಬಹುದು ಅಂತ ಕುಟುಂಬಸ್ಥರ ದೂರು ಸಾರಿ ಸಾರಿ ಹೇಳುತ್ತಿದೆ.
ಕುಟುಂಬಸ್ಥರ ದೂರಿನಲ್ಲಿ ಏನಿದೆ?
ಲೋಕನಾಥ್ ದೂರದ ಸಂಬಂಧಿ ಹುಡುಗಿಯನ್ನ 2 ವರ್ಷದಿಂದ ಪ್ರೀತಿಸುತ್ತಿದ್ದ. 2023ರಲ್ಲಿ ಹೆಣ್ಣು ಕೇಳಲು ಹೋದಾಗ 2 ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ. ದೀಪಕ್ ಸಿಂಗ್ ಎಂಬುವರು ಮಧ್ಯಸ್ಥಿಕೆ ಮಾಡಿದಾಗಲು ಗಲಾಟೆಯಾಗಿದೆ. ಆದರೆ ಹುಡುಗಿಯ ಅಪ್ಪ ಲೋಕನಾಥ್ನಿಂದಾಗಿ ತನ್ನ ಮನೆಯಲ್ಲಿ ದುರ್ಘಟನೆ ಆಗಿದೆ ಅಂತ ಕೋಪಗೊಂಡಿದ್ದ. ದುರ್ಘಟನೆಯಲ್ಲಿ ಲೋಕನಾಥ್ ಕೈವಾಡ ಇದ್ರೆ ಧೀರಜ್ ಆತನನ್ನ ಕೊಲೆ ಮಾಡ್ತಾನೆ ಅಂತ ವಾರ್ನ್ ಮಾಡಿದ್ದ. ನಿನ್ನೆ ಬೆಳಗ್ಗೆ 4 ಬಿಯರ್ ಬಾಟಲ್ ಕಾರಿನಲ್ಲಿ ಹಾಕಿಕೊಂಡ ಲೋಕನಾಥ್ ಬೆಂಗಳೂರಿಗೆ ಹೋಗಿದ್ದಾಗ ಕೊಲೆಯಾಗಿದ್ದಾನೆ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಹೀಗೆ ಲೋಕನಾಥ್ ಸಹೋದರ ಸೋಲದೇವನಹಳ್ಳಿ ಠಾಣೆಯಲ್ಲಿ ಅಣ್ಣನ ಕೊಲೆ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಹುಡುಗಿ ಮನೆಯವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಹಳೆ ಘಟನೆ ಉಲ್ಲಂಘಿಸಿ ದೂರು ನೀಡಿರೋದು ಲೋಕನಾಥ್ ಕೊಲೆ ಹಿಂದೆ ಪ್ರೇಮ್ ಕಹಾನಿ ಇರೋ ಹಿಂಟ್ ಕೊಡ್ತಿದೆ. ಈ ಮಧ್ಯೆ ಕೊಲೆಯಾದ ನಂತರ ಲೋಕನಾಥ್ ಸಿಂಗ್ ಬಾಡಿಗಾರ್ಡ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗ್ತಿತ್ತು. ಆದರೆ ಇಂದು ಬೆಳಗ್ಗೆ ಸೋಲದೇವನಹಳ್ಳಿ ಠಾಣೆಗೆ ಹಾಜರಾಗಿದ್ದ ಬಾಡಿ ಗಾರ್ಡ್ ಘಟನೆ ವೇಳೆ ನಾನು ಜೊತೆಗಿರ್ಲಿಲ್ಲ ಅಂತ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಈತನಿಂದ ಕೆಲ ಮಾಹಿತಿ ಪಡೆದು, ಆರೋಪಿಗಳ ಹುಡುಕಾಟ ಶುರು ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 6 ಲಕ್ಷ ರೂ ಹಣ ಅಡ್ವಾನ್ಸ್ ಕೊಟ್ಟಿದ್ದ ಮಾಲೀಕನನ್ನೇ ಹತ್ಯೆಗೈದ ತಂದೆ-ಮಗ
ಇನ್ನು ಬ್ಯಾಟರಾಯನಪುರ ಠಾಣೆಯಲ್ಲಿ ನಡೆದಿದ್ದ ರಿಕವರಿ ಹಣ ದುರ್ಬಳಕೆ ಕೇಸ್ನಲ್ಲಿ ಲೋಕನಾಥ್ ಸಿಂಗ್ ಎರಡನೇ ಆರೋಪಿಯಾಗಿದ್ದ. ಈ ಕೇಸ್ನ ಮೊದಲ ಆರೋಪಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ಗೆ ಲೋಕನಾಥ್ ಸಿಂಗ್ ಸಾಥ್ ನೀಡಿದ್ದರಿಂದ ಸಿಸಿಬಿ ಪೊಲೀಸರು ಈತನನ್ನ ಬಂಧಿಸಿದ್ದಾರೆ. ಸದ್ಯ ಈತನ ಕೊಲೆ ಕೇಸ್ ತನಿಖೆಗೆ ವಿಶೇಷ ತಂಡ ನೇಮಿಸಿದ್ದು, ಎಲ್ಲಾ ಆ್ಯಂಗಲ್ನಲ್ಲೂ ತನಿಖೆ ನಡೀತಿದೆ.
ವರದಿ: ಪ್ರದೀಪ್ ಚಿಕ್ಕಾಟಿ Tv9 ಬೆಂಗಳೂರು
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.