ಪೊಲೀಸರಿಗೆ ಚಹಾ ತಂದುಕೊಡುತ್ತಿದ್ದ ರೌಡಿಶೀಟರ್ ಇದೀಗ ಪೊಲೀಸರ ಅತಿಥಿ

ಬುದ್ಧಿಮಾತು ಹೇಳಿದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ರೌಡಿಶೀಟರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೊಲೀಸರಿಗೆ ಚಹಾ ತಂದುಕೊಂಡುವುದು, ಠಾಣೆ ಶುಚಿಗೊಳಿಸುವ ಕೆಲಸ ಮಾಡಿಕೊಂಡಿದ್ದನಂತೆ.

ಪೊಲೀಸರಿಗೆ ಚಹಾ ತಂದುಕೊಡುತ್ತಿದ್ದ ರೌಡಿಶೀಟರ್ ಇದೀಗ ಪೊಲೀಸರ ಅತಿಥಿ
ಬುದ್ಧಿಮಾತು ಹೇಳಿದ್ದಕ್ಕೆ ವ್ಯಕ್ತಿಯನ್ನು ಕೊಂದ ರೌಡಿಶೀಟರ್
Follow us
TV9 Web
| Updated By: Rakesh Nayak Manchi

Updated on:Nov 14, 2022 | 2:08 PM

ಹುಬ್ಬಳ್ಳಿ: ತನ್ನ ಪಾಡಿಗೆ ತಾನು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಮುರಗೋಡ್ ಕಳ್ಳತನ ವಿಚಾರವಾಗಿ ರೌಡಿಶೀಟರ್​ಗೆ ಬುದ್ಧಿಮಾತು ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡು ರೌಡಿಶೀಟರ್​ ಬುದ್ಧಿಮಾತು ಹೇಳಿದವನನ್ನೇ ಕೊಂದು ಜೈಲು ಪಾಲಾಗಿದ್ದಾನೆ. ಈ ಕುಕೃತ್ಯಕ್ಕೆ ಪೊಲೀಸರೇ ಕಾರಣ ಎಂದು ಕೊಲೆಯಾದ ಸಂತೋಷ್ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಂತಕ ಪೊಲೀಸರಿಗೆ ಸಹಾಯ ಮಾಡುತ್ತಿದ್ದನಂತೆ. ಇದೇ ಕಾರಣಕ್ಕೆ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದು, ಶವ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಭಾನುವಾರ ರಣರಂಗವಾಗಿತ್ತು. ಸ್ಥಳಕ್ಕೆ ಶಾಸಕ ಅಬ್ಬಯ್ಯ ಪ್ರಸಾದ್ ಕೂಡಾ ಬಂದಿದ್ದರು‌.

ಹುಬ್ಬಳ್ಳಿಯ ಜಂಗ್ಲಿಪೇಟೆ ನಿವಾಸಿ 37 ವರ್ಷದ ಸಂತೋಷ್ ಮುರಗೋಡ್​ನನ್ನು ಲೋಕಲ್ ರೌಡಿ ಶಿವಾನಂದ್.ಎಸ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಳೆದ ವಾರ ಶಿವಾನಂದ್ ಜಂಗ್ಲಿಪೇಟೆಯಲ್ಲಿ ಪೆಟ್ರೋಲ್ ಕಳ್ಳತನ ಮಾಡಿ ತಗಲಾಕೊಂಡಿದ್ದ. ಆತನಿಗೆ ಸಂತೋಷ್ ಹಾಗೂ ಹಿರಿಯರು ಬುದ್ದಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಶನಿವಾರ ರಾತ್ರಿ 9 ಗಂಟೆಗೆ ಸಂತೋಷ್​ಗೆ ಶಿವಾನಂದ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡ ಸಂತೋಷ್​ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಪ್ರಾಣ ಬಿಟ್ಟಿದ್ದಾನೆ.

ಕೇವಲ ಬುದ್ದಿ ಹೇಳಿದ ಎನ್ನುವ ಕಾರಣಕ್ಕೆ ದ್ವೇಷ ಬೆಳೆಸಿಕೊಂಡ ರೌಡಿ ಶೀಟರ್ ಶಿವಾನಂದ ಸಂತೋಷ್​ನನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ರೌಡಿ ಶೀಟರ್ ಶಿವಾನಂದ್​ಗೆ ಎಲ್ಲೋ ಒಂದು‌ಕಡೆ ಪೊಲೀಸರೇ ಬೆನ್ನೆಲುಬು ಆಗಿದ್ದರು ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಯಾಕೆಂದರೆ, ರೌಡಿ ಶೀಟರ್ ಶಿವಾನಂದ್ ಮೇಲೆ ಹುಬ್ಬಳ್ಳಿಯ ವಿವಿಧ ಠಾಣೆಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಿದ್ದಾಗಲೂ ಇದೇ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಶಿವಾನಂದ ಕೆಲಸ‌ ಮಾಡಿಕೊಂಡಿದ್ದನಂತೆ. ಪೊಲೀಸರಿಗೆ ಚಹಾ ತಂದುಕೊಡುವುದು, ಠಾಣೆ ಶುಚಿ ಮಾಡುವ ಕೆಲಸ ಮಾಡಿಕೊಂಡಿದ್ದನಂತೆ. ಅಷ್ಟೇ ಅಲ್ಲದೆ ನನ್ನ ಹಿಂದೆ ಪೊಲೀಸರಿದ್ದಾರೆ ಎಂದು ಊರ ತುಂಬಾ ಹೇಳಕೊಂಡು ಓಡಾಡುತ್ತಿದ್ದನಂತೆ. ಹೀಗಾಗಿ ಪೊಲೀಸರ ನಿರ್ಲಕ್ಷ್ಯದಿಂದಲೇ ಕೊಲೆಯಾಗಿದೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ.

ಮೃತ ಸಂತೋಷ್ ಮುರಗೋಡು ಯಾರ ತಂಟೆಗೂ ಹೋಗುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದ. ಮನೆ‌ ಮುಂದೆ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡು‌ ಜೀವನದ ಬಂಡಿ ಎಳೆಯುತ್ತಿದ್ದ. ಕಳೆದ ವಾರವೇ ಮಗಳ ನಾಮಕರಣ ಮಾಡಿ ಬಂದಿದ್ದ ಸಂತೋಷ್ ಕೊಲೆಯಾಗಿದ್ದಾನೆ. ಅಮಾಯಕನ್ನ ಕಳೆದುಕೊಂಡ ಕುಟುಂಬಸ್ಥರು ರೊಚ್ಚಿಗೆದ್ದಿದ್ದಾರೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ಮುಂದೆ ಸಂತೋಷ್ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದರು. ಅವನಿಗೆ ಗಲ್ಲು ಶಿಕ್ಷೆಯಾಗಬೇಕೆಂದು‌ ಆಕ್ರೊಶ ವ್ಯಕ್ತಪಡಿಸಿದರು.

ಸಂತೋಷ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಶವ ಕಸಬಾಪೇಟ ಪೋಲೀಸ್ ಠಾಣೆ ತಂದು ಠಾಣೆಯ ಎದುರು ಶವ ಇಟ್ಟು‌ ಪ್ರತಿಭಟನೆ ನಡೆಸಿದರು. ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸುವಂತೆ ಒತ್ತಾಯ ಮಾಡಿದರು. ಏಕಾಏಕಿ ಠಾಣೆ ನೂರಾರು ಜನ ನುಗ್ಗಿದ ಹಿನ್ನೆಲೆ ಪೊಲೀಸರು ಕೆಲ ಕಾಲ ಶಾಕ್ ಆದರು. ಬಳಿಕ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಪ್ರತಿಭಟನೆಯ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ನೂಕಾಟ ಸಹ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು. ಸಂತೋಷ ಸಾವಿನ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆ ನೀಡುವ ಭರವಸೆ ನೀಡಿದರು.

ಒಟ್ಟಿನಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದ್ದು, ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಆರೋಪಿ ಶಿವಾನಂದ ಪೊಲೀಸರ ವಶದಲ್ಲಿದ್ದು, ಸೂಕ್ತ ತನಿಖೆಯಾಗಿ ತಕ್ಕ ಶಿಕ್ಷೆಯಾಗಲಿ ಎನ್ನುವುದು ನೊಂದವರ ಮಾತು. ಅಷ್ಟೇ ಅಲ್ಲದೆ ಕೊಲೆ ಮಾಡಿ ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ‌ ಶಿವಾನಂದನನ್ನು ಗಲ್ಲಿಗೇರಿಸಬೇಕು ಅಂತ ಆಗ್ರಹ ಸಹ ಕೇಳಿಬಂದಿದೆ.

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 14 November 22