ಕೋಲಾರ: ಹೆಂಡತಿ ಮೇಲೆ ಅನುಮಾನ, 18 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಪತಿ! ಆಗಿದ್ದೇನು?
ನಮ್ಮ ತಾಯಿಗೆ ಕ್ಯಾನ್ಸರ್ ಕಾಯಿಲೆ ಇದೆ. ಮನೆಯಲ್ಲಿ ಅಡುಗೆ ಮಾಡುವುದಕ್ಕೂ ಯಾರೂ ಇಲ್ಲ ಎಂದು ಹೇಳಿ ದೂರದ ಸಂಬಂಧಿಯಲ್ಲಿ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಂಡಿದ್ದ. ಆದರೆ, ಮದುವೆ ಮಾಡಿಕೊಂಡ ಎರಡೇ ವರ್ಷಗಳಲ್ಲಿ ಗಂಡ-ಹೆಂಡತಿ ನಡುವೆ ವಿರಸ ಮೂಡಿತ್ತು. ಹೆಂಡತಿ ಮೇಲೆ ಅನುಮಾನ ಮೂಡಿದ್ದ ಹಿನ್ನೆಲೆ ಕೊನೆಗೂ ಹೆಂಡತಿಯ ಎದೆಗೆ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಹಾಗಾದರೆ ಆಗಿದ್ದೇನು? ಈ ಸ್ಟೋರಿ ಓದಿ.
ಕೋಲಾರ, ಆ.17: ಇದೇ ಆಗಸ್ಟ್. 14 ರಂದು ಮಠ ಮಧ್ಯಾಹ್ನ ಕೋಲಾರ ಜಿಲ್ಲೆಯ ಮಾಲೂರು(Malur) ತಾಲ್ಲೂಕು ವಿಜುವನಹಳ್ಳಿ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಗಂಡನೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಚ್ಚಿ ಕೊಂದು ಪರಾರಿಯಾಗಿದ್ದ. ಹೌದು, ವಿಜುವನಹಳ್ಳಿ ಗ್ರಾಮದ ದಿವ್ಯಾ ಎಂಬಾಕೆಯನ್ನು ಆತನ ಪತಿ ಭರತ್ ಎಂಬಾತ ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆ ಆಕೆಯ ಎದೆಯ ಭಾಗಕ್ಕೆ ಚಾಕುವಿನಿಂದ ಬರೋಬ್ಬರಿ 18 ಬಾರಿ ಚುಚ್ಚಿ ಕೊಂದು ಅಲ್ಲಿಂದ ಪರಾರಿಯಾಗಿದ್ದ. ಈ ಕುರಿತು ಅಲ್ಲಿನ ಜನರು ಮಾಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಬಂದ ಮಾಲೂರು ಪೊಲೀಸರು ಮಹಿಳೆಯ ಶವ ನೋಡಿ, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬೆನ್ನು ಹತ್ತಿದ್ದರು.
ಘಟನೆಗೆ ಕಾರಣವೇನು?
ಕಳೆದ ನಾಲ್ಕು ವರ್ಷಗಳ ಹಿಂದೆ ಕೊಮ್ಮನಹಳ್ಳಿ ಭರತ್ ಎಂಬುವರ ತಾಯಿಗೆ ಆನಾರೋಗ್ಯ ಇತ್ತಂತೆ. ಈ ವೇಳೆ ಮನೆಯಲ್ಲಿ ಅಡುಗೆ ಮಾಡುವುದಕ್ಕೂ ಯಾರು ಇಲ್ಲ ಎಂದು ಹೇಳಿ ವಿಜುವನಹಳ್ಳಿ ಗ್ರಾಮದ ತಮ್ಮ ದೂರದ ಸಂಬಂಧಿ ದಿವ್ಯಾ ಎಂಬಾಕೆಯನ್ನು ಇದೇ ಕೊಮ್ಮನಹಳ್ಳಿ ಗ್ರಾಮದ ಭರತ್ ಎಂಬುವನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಕೆಲವು ವರ್ಷಗಳ ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಗಂಡ-ಹೆಂಡತಿ ಅನ್ಯೂನ್ಯವಾಗಿಯೇ ಇದ್ದರು. ಆದರೆ, ಡ್ರೈವರ್ ಕೆಲಸ ಮಾಡುತ್ತಿದ್ದ ಭರತ್ಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿತ್ತು. ಆಕೆ ಬೇರೆ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು. ಆಕೆ ಯಾರ ಬಳಿಯಲ್ಲಾದರೂ ಮಾತನಾಡಿದ್ರೆ ಸಾಕು ಆತನೊಂದಿಗೆ ಇವಳಿಗೆ ಸಂಬಂಧ ಇರಬೇಕು ಎಂದು ಭಾವಿಸಿ ರಾತ್ರಿ ಹೊತ್ತು ಕುಡಿದು ಬಂದು ಮನೆಯಲ್ಲಿ ಹೆಂಡತಿಯನ್ನು ಹೊಡೆಯುತ್ತಿದ್ದ.
ಪ್ರತಿನಿತ್ಯ ಭರತ್ ಕೆಲಸ ಮುಗಿಸಿಕೊಂಡು ಕಂಠಪೂರ್ತಿ ಕುಡಿದು ಬರೋದು, ಹೆಂಡತಿಯನ್ನು ಹೊಡೆಯೋದೆ ಕಾಯಕವಾಗಿ ಹೋಗಿತ್ತು. ಈ ಸಂಬಂಧ ಎರಡು ಕುಟುಂಬಸ್ಥರ ನಡುವೆ ಕಳೆದ ಎರಡು ವರ್ಷಗಳಿಂದ ಹಲವು ಬಾರಿ ರಾಜಿ ಪಂಚಾಯ್ತಿಗಳು ಆಗಿತ್ತು. ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿತ್ತು. ಆದರೆ, ಆತನ ಅನುಮಾನ ದೂರವಾಗಿರಲಿಲ್ಲ. ಜಗಳವೂ ಅಂತ್ಯವಾಗಿರಲಿಲ್ಲ. ಹೀಗಿರುವಾಗಲೇ ದಿವ್ಯಾ ತನ್ನ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಬಂದಿದ್ದಳು.
ಮನೆ ಬಿಟ್ಟು ಹೋದವಳನ್ನು ಕರೆದುಕೊಂಡು ಬಂದಿದ್ದ ಪತಿ
ಆಗಸ್ಟ್.13 ರಂದು ಮಾಲೂರು ತಾಲ್ಲೂಕು ವಿಜುವನಹಳ್ಳಿ ಗ್ರಾಮದಲ್ಲಿದ್ದ ದಿವ್ಯಾ ಯಾರಿಗೂ ಹೇಳದೆ ಮನೆಯಿಂದ ನಾಪತ್ತೆಯಾಗಿ ಹೋಗಿದ್ದಳು. ಮನೆಯವರು ಹುಡುಕಿದರೂ ಕೂಡ ಅವಳು ಪತ್ತೆಯಾಗಿರಲಿಲ್ಲ. ಈ ವೇಳೆ ಮಾಸ್ತಿ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದೂರು ನೀಡಬೇಕು ಎಂದು ದಿವ್ಯಾ ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಈ ವಿಷಯವನ್ನು ದಿವ್ಯಾ ಪತಿ ಭರತ್ಗೂ ತಿಳಿಸಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ಭರತ್ ಸ್ನೇಹಿತನೊಬ್ಬ ನಿನ್ನ ಹೆಂಡತಿ ಬೆಂಗಳೂರಿನ ಕಾಡುಗೋಡಿ ಬಳಿ ಇರುವ ವಿಷಯವನ್ನು ಭರತ್ಗೆ ತಿಳಿಸಿದ್ದ. ಭರತ್ ತನ್ನ ಸ್ನೇಹಿತನಿಗೆ ಹೇಳಿ ಆಕೆಯನ್ನು ಅಲ್ಲೇ ಇರಿಸಿಕೊಳ್ಳುವಂತೆ ಹೇಳಿ ನಂತರ ಕಾಡುಗೋಡಿಗೆ ಹೋಗಿ ಆಕೆಯನ್ನು ಆಗಸ್ಟ್.14 ರಂದು ವಾಪಸ್ ಕರೆದುಕೊಂಡು ವಿಜುವನಹಳ್ಳಿ ಗ್ರಾಮಕ್ಕೆ ಬಂದಿದ್ದ.
ದಿವ್ಯಾಳನ್ನು ಚಾಕುವಿನಿಂದ ಇರಿದು ಕೊಂದು ಪರಾರಿ
ನಾಪತ್ತೆಯಾಗಿದ್ದ ಮಗಳು ಸಿಕ್ಕಳು ಎಂದುಕೊಂಡು ಅವರು ಕೂಡ ನಿಟ್ಟುಸಿರು ಬಿಟ್ಟಿದ್ದರು. ದಿವ್ಯಾಳನ್ನು ಕೆರೆದುಕೊಂಡು ಬಂದಿದ್ದಾಳೆ ಎಂದು ಅವರು ಕುಟುಂಬಸ್ಥರಿಗೆ ಹೇಳುವಷ್ಟರಲ್ಲೇ ಭರತ್ ಸೀದಾ ಸೀದ ಮನೆಗೆ ಕರೆದುಕೊಂಡು ಬಂದವನೇ ಮನೆಯ ಬಾಗಿಲು ಹಾಕಿಕೊಂಡು ಏಕಾಏಕಿ ದಿವ್ಯಾಳನ್ನು ಚಾಕುವಿನಿಂದ ಇರಿದು ಕೊಂದಿದ್ದ. ಕುಟುಂಬಸ್ಥರು ಅಲ್ಲಿಗೆ ಬರುವಷ್ಟರಲ್ಲೇ ಭರತ್ ಮನೆಯ ಹೊರಗೆ ಬಂದು ಅವಳನ್ನು ಕೊಂದು ಹಾಕಿರುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದ.
ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಭರತ್
ವಿಷಯ ಕೇಳಿ ಆಘಾತಕ್ಕೊಳಗಾದ ಕುಟುಂಬಸ್ಥರು ಕೂಡಲೇ ಮಾಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಮಾಲೂರು ಪೊಲೀಸರು ಪರಿಶೀಲನೆ ನಡೆಸಿದ್ದರು. ಅಷ್ಟೊತ್ತಿಗಾಗಲೇ ಕೊಲೆ ಮಾಡಿದ್ದ ಆರೋಪಿ ಭರತ್ ನಾಪತ್ತೆಯಾಗಿದ್ದ. ಒಂದೆಡೆ ಪೊಲೀಸರು ಶವವನ್ನು ಮಾಲೂರು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಶವ ಕಳಿಸಿ, ಕೂಡಲೇ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಅಷ್ಟೊತ್ತಿಗಾಗಲೇ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಭರತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಸದ್ಯ ದೂರದ ಸಂಬಂಧಿಕರು ಎಂದು ತಿಳಿದು ಮದುವೆ ಮಾಡಿಕೊಟ್ಟಿದ್ದ ಕುಟುಂಬಸ್ಥರಿಗೆ ಈಗ ಆಘಾತ ಎದುರಾಗಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ