ಪೊಲೀಸರು ಥಳಿಸಿದ್ದಕ್ಕೆ ವ್ಯಕ್ತಿ ಸಾವು ಕೇಸ್ಗೆ ಟ್ವಿಸ್ಟ್: ಸಿಸಿಟಿವಿ ದೃಶ್ಯ ವೈರಲ್, ರಾಜಕೀಯ ಕೈವಾಡ ಶಂಕೆ?
ರಾಯಚೂರಿನಲ್ಲಿ ಪೊಲೀಸ್ ದೌರ್ಜನ್ಯದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆರೋಪದಲ್ಲಿ ಸಿಐಡಿ ತನಿಖೆ ಆರಂಭವಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಆದರೆ, ಸಿಸಿಟಿವಿ ದೃಶ್ಯಗಳು ಪ್ರಕರಣಕ್ಕೆ ತಿರುವು ನೀಡಿವೆ. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪದ ಶಂಕೆ ವ್ಯಕ್ತವಾಗಿದೆ. ಸತ್ಯಾಸತ್ಯತೆ ಸಿಐಡಿ ತನಿಖೆ ನಂತರ ತಿಳಿದು ಬರಲಿದೆ.

ರಾಯಚೂರು, ಏಪ್ರಿಲ್ 06: ರಾಯಚೂರು ಪೊಲೀಸರು (Raichur Police) ಥಳಿಸಿದ್ದಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಆರೋಪ ಪ್ರಕರಣದಲ್ಲಿ ಸಿಐಡಿ ಅಖಾಡಕ್ಕಿಳಿದಿದ್ದು ತನಿಖೆ ನಡೆಸುತ್ತಿದೆ. ವ್ಯಕ್ತಿ ಸಾವಿಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಕಾರಣ ಅಂತ ಅಮಾನತ್ತು ಮಾಡಲಾಗಿದೆ. ಆದರೆ, ಸಿಐಡಿ (CID) ತನಿಖೆ ಬೆನ್ನಲ್ಲೇ ಮೃತ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಥಳಿಸಿಲ್ಲ ಎಂಬ ಅಂಶ ಸಿಸಿಟಿವಿ ದೃಶ್ಯದ ಮೂಲಕ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇನ್ನು, ಪೊಲೀಸ್ ಅಧಿಕಾರಿಗಳ ಅಮಾನತಿನ ಹಿಂದೆ ರಾಜಕೀಯ ನಾಯಕ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಈರೇಶ್ ವಿರುದ್ಧ ಆತನ ಪತ್ನಿ ನರಸಮ್ಮ ಕೌಟುಂಬಿಕ ಕಲಹದ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಮಹಿಳಾ ಪೊಲೀಸರು ಈರೇಶ್ರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿದ್ದರು.
ನಂತರ, ಈರೇಶ್ ಪತ್ನಿ ನರಸಮ್ಮರ ತವರು ಮನೆಗೆ ಹೋಗಿ, ನನ್ನ ವಿರುದ್ಧ ದೂರು ಏಕೆ ನೀಡಿದೆ? ನಾವೇ ಪರಿಹರಿಸಿಕೊಳ್ಳಬಹುದಿತ್ತಲ್ಲ ಅಂತ ಪತ್ನಿಯನ್ನು ಪ್ರಶ್ನಿಸಿದ್ದರು. ಈ ಕುರಿತಾಗಿ (ಮಾರ್ಚ್ 30) ನರಸಮ್ಮ ಕಡೆಯವರು 112ಗೆ ಕರೆ ಮಾಡಿ ರಾಯಚೂರು ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಈರೇಶ್ರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕಳುಹಿಸಿದ್ದರು. ವಿಚಾರಣೆ ಎದುರಿಸಿ ಹೋಗಿದ್ದ ಈರೇಶ್ ಮಂಗಳವಾರ ಏಪ್ರಿಲ್ 1 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು.
ಈರೇಶ್ ಸಾವಿಗೆ ಪೊಲೀಸರೇ ಕಾರಣ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದರು. ಪಶ್ಚಿಮ ಠಾಣೆ ಸಿಪಿಐ ನಾಗರಾಜ್ ಮೇಕಾ ಮತ್ತು ಪಿಎಸ್ಐ ಮಂಜುನಾಥ್, ಈರೇಶ್ಗೆ ಥಳಿಸಿದ್ದಾರೆ. ಆತನ ಸಾವಿಗೆ ಈ ಇಬ್ಬರು ಅಧಿಕಾರಿಗಳು ಕಾರಣ ಅಂತ ರಾಯಚೂರು ಎಸ್ಪಿ ಕಚೇರಿ ಎದುರು ಮೃತನ ಪ್ರತಿಭಟನೆ ನಡೆಸಿದ್ದರು. ಈರೇಶ್ ಕುಟುಂಬಸ್ಥರಿಗೆ ನಗರದ ಬಿಜೆಪಿ ಶಾಸಕ ಶಿವರಾಜ ಪಾಟೀಲ್ ಕೂಡ ಸಾತ್ ಕೊಟ್ಟಿದ್ದು, ಅಹೋರಾತ್ರಿ ಧರಣಿಗೆ ಮುಂದಾಗಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮನವಿಗೆ ಸ್ಪಂದಿಸುತ್ತೇವೆ ಅಂತ ಒಪ್ಪಿಕೊಂಡ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿಯಲಾಗಿತ್ತು.
ಮರುದಿನವೇ ಪಿಎಸ್ಐ, ಸಿಪಿಐರನ್ನು ಅಮಾನತ್ತು ಮಾಡಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ. ಸದ್ಯ ಸಿಐಡಿ ತನಿಖೆಗೆ ನಡೆಸುತ್ತಿದೆ. ಇದೇ ವೇಳೆ ಮೃತ ಈರೇಶ್ ಪಶ್ಚಿಮ ಠಾಣೆಯಲ್ಲಿ ಸಾಮಾನ್ಯರಂತೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸಿಸಿಟಿವಿ ದೃಶ್ಯದಲ್ಲಿ ಏನಿದೆ?
ಮಾರ್ಚ್30 ರಂದು ಪಶ್ಚಿಮ ಠಾಣೆಗೆ ಈರೇಶ್ನನ್ನ ಪೊಲೀಸರು ಕರೆತಂದು ಠಾಣೆಯಲ್ಲಿ ಕೂರಿಸಿದ್ದರು. ಆಗ, ಈರೇಶ್, ಠಾಣೆಗೆ ಬಂದಿದ್ದ ತನ್ನ ಅತ್ತೆಯ ಜೊತೆ ಪದೇ ಪದೇ ಕಿರಿಕ್ ಮಾಡುತ್ತಿದ್ದ. ಆಗ, ಪೊಲೀಸ್ ಪೇದೆಯೊಬ್ಬರು ಈರೇಶ್ಗೆ ಬೈದು, ಎಚ್ಚರಿಕೆ ನೀಡಿ ಹೊಡೆದಿದ್ದರು. ನಂತರ ಮತ್ತೆ ಆತನನ್ನ ಮೂಲೆಯಲ್ಲಿ ಕೂರಿಸಿದ್ದರು. ಆ ಬಳಿಕ ಪಿಎಸ್ಐ ಮಂಜುನಾಥ್ ಠಾಣೆಗೆ ಬಂದು ಕೆಲವೇ ಕ್ಷಣಗಳವರೆಗೆ ಈರೇಶ್ ಜೊತೆ ಮಾಡನಾಡಿರುವ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ, ಹಿರಿಯ ಅಧಿಕಾರಿಯೊಬ್ಬರು ಠಾಣೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈರೇಶ್ನನ್ನು ಹೊರಗಡೆ ಕಳುಹಿಸಲಾಗಿದೆ. ಹೊರಗಡೆ, ಈರೇಶ್ ಸಾಮಾನ್ಯರಂತೆ ಗಂಟೆಗಳ ಕಾಲ ಓಡಾಡುವ ಮತ್ತು ಮಹಿಳಾ ಸಿಬ್ಬಂದಿಯೊಬ್ಬರ ಕೈಗೆ ಆಗಿದ್ದ ಗಾಯಕ್ಕೆ ತಾನೇ ಬ್ಯಾಂಡೇಜ್ ತಂದು ಹಚ್ಚುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಠಾಣೆಯ ಬಹುತೇಕ ಸಿಬ್ಬಂದಿ ಆತನಿಗೆ ಪರಿಚಯಸ್ಥರಿದ್ದಂತೆ ದೃಶ್ಯಾವಳಿಗಳಲ್ಲಿ ಕಂಡಿದೆ. ಅಷ್ಟರ ಮಟ್ಟಿಗೆ ಈರೇಶ್ ಲವಲವಿಕೆಯಿಂದ ಎಲ್ಲಾ ಸಿಬ್ಬಂದಿ ಜೊತೆ ಮಾತನಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಿಎಸ್ಐ ಮಂಜುನಾಥ್ ಈರೇಶ್ರನ್ನ ಠಾಣೆಯಲ್ಲಿ ಆ ದಿನ ವಿಚಾರಣೆ ಮಾಡಿಲ್ಲ ಎಂಬುವುದು ಸಿಸಿಟಿವಿ ದೃಶ್ಯಗಳ ಮೂಲಕ ಗೊತ್ತಾಗಿದೆ. ಜೊತೆಗೆ ಸಿಪಿಐ ನಾಗರಾಜ್ ಮೇಕಾ ಆ ದಿನ ಠಾಣೆಗೆ ಹೋಗಿಲ್ಲವಂತೆ.
ಹೀಗಿದ್ದರೂ, ಈ ಇಬ್ಬರು ಅಧಿಕಾರಿಗಳ ಮೇಲೆ ಕ್ರಮವಾಗಿದೆ ಅಂತ ಹೇಳಲಾಗುತ್ತಿದೆ. ಈ ಇಬ್ಬರು ಅಧಿಕಾರಿಗಳಿಗೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪೋಸ್ಟಿಂಗ್ ಕೊಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಸತ್ಯಾಸತ್ಯತೆಯನ್ನ ಪರಿಶೀಲನೆ ಮಾಡದೇ ರಾಜಕೀಯ ಒತ್ತಡಕ್ಕೆ ಪಿಎಸ್ಐ ಹಾಗೂ ಸಿಪಿಐರನ್ನು ಅಮಾನತ್ತು ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.
ಈ ಬಗ್ಗೆ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜ್ ಪ್ರತಿಕ್ರಿಯೆ ನೀಡಿದ್ದು,ಆ ಬಗ್ಗೆ ಮಾಹಿತಿ ಇರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಅದರ ವರದಿ ಆಧಾರದಲ್ಲಿ ಕ್ರಮವಾಗತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಸ್ಕಿ ಕಾಂಗ್ರೆಸ್ ಶಾಸಕನ ಪುತ್ರ, ಸಹೋದರನಿಂದ ಮೊಲ ಬೇಟೆ, ಮೆರವಣಿಗೆ
ವಿನಾಕಾರಣ ರಾಜಕೀಯ ಒತ್ತಡಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಕ್ಕೆ ಜಿಲ್ಲೆಯ ಕೆಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬೇಸರ ಹೊರಹಾಕಿದ್ದಾರೆ. ತಪ್ಪಿದ್ದರೇ ಕ್ರಮಕೈಗೊಳ್ಳಲಿ, ಸುಖಾಸುಮ್ಮನೆ ಅಮಾನತ್ತು ಮಾಡಿದರೆ ಹೇಗೆ ಕಾರ್ಯನಿರ್ವಹಿಸುವುದು? ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗೃಹ ಇಲಾಖೆ ಪರಿಶೀಲನೆ ನಡೆಸಿ ಈರೇಶ್ ಸಾವಿಗೆ ಅಸಲಿ ಕಾರಣ ಏನು ಎಂಬ ಸತ್ಯಾಸತ್ಯೆಯನ್ನು ಬಯಲಿಗೆಳೆಯಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Sun, 6 April 25