‘ಆಕ್ಸ್‌ಫರ್ಡ್‌’ ಸೀಟು ಪಡೆದ ಏಕೈಕ ಭಾರತೀಯ ವಿದ್ಯಾರ್ಥಿನಿ: ಆರ್ಥಿಕ ಸಂಕಷ್ಟದಿಂದ ಅವಕಾಶ ಕೈತಪ್ಪುವ ಭೀತಿ!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಫಾತಿಮಾ 2025-26ರ ಶೈಕ್ಷಣಿಕ ವರ್ಷಕ್ಕೆ ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ಭಾರತದ ಏಕೈಕ ವಿದ್ಯಾರ್ಥಿನಿ. 1.50 ಕೋಟಿ ರೂ. ವಿದ್ಯಾರ್ಥಿವೇತನವಿದ್ದರೂ, ಪ್ರತಿ ವರ್ಷಕ್ಕೆ 35-40 ಲಕ್ಷ ರೂ. ವೆಚ್ಚ ಹಾಗೂ ವೀಸಾ ಪ್ರಕ್ರಿಯೆಗೆ 35 ಲಕ್ಷ ರೂ. ಠೇವಣಿ ಅವಶ್ಯಕತೆಯಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಅಬ್ದುಲ್ ಕಲಾಂ ಅವರ ಮಾತುಗಳಿಂದ ಪ್ರೇರಿತರಾಗಿ ಸಾಧನೆ ಮಾಡಿದ ಫಾತಿಮಾಗೆ ಸರ್ಕಾರ ಅಥವಾ ಸ್ವಯಂಸೇವಾ ಸಂಸ್ಥೆಗಳು ತ್ವರಿತವಾಗಿ ಆರ್ಥಿಕ ನೆರವು ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಆಕ್ಸ್‌ಫರ್ಡ್‌ ಸೀಟು ಪಡೆದ ಏಕೈಕ ಭಾರತೀಯ ವಿದ್ಯಾರ್ಥಿನಿ: ಆರ್ಥಿಕ ಸಂಕಷ್ಟದಿಂದ ಅವಕಾಶ ಕೈತಪ್ಪುವ ಭೀತಿ!
ಆಕ್ಸ್‌ಫರ್ಡ್‌ಗೆ ಆಯ್ಕೆಯಾದ ಆಂಧ್ರದ ವಿದ್ಯಾರ್ಥಿನಿ

Updated on: Aug 22, 2026 | 4:28 PM

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ವಿದ್ಯಾರ್ಥಿನಿ ಅನೀಶ್ ಫಾತಿಮಾ ಅಪರೂಪದ ಸಾಧನೆ ಮಾಡಿದ್ದಾರೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಆಯ್ಕೆಯಾದ ಭಾರತದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆಯುವುದು ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಕನಸು. ಗುಂತಕಲ್‌ನ ಸನ್ವಾಜ್ ಬೇಗಂ ಮತ್ತು ಜಾಕಿರ್ ಹುಸೇನ್ ದಂಪತಿಯ ಪುತ್ರಿ ಫಾತಿಮಾ ಈ ಸಾಧನೆ ಮಾಡಿದ್ದಾರೆ. 2025-26ರ ಶೈಕ್ಷಣಿಕ ವರ್ಷದ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು 120 ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಫಾತಿಮಾ.

ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಹಿನ್ನೆಲೆ:

10ನೇ ತರಗತಿಯವರೆಗೆ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ ಫಾತಿಮಾ, ನಂತರ ರಿಷಿ ವ್ಯಾಲಿ ಶಾಲೆಯಲ್ಲಿ ಪಿಯುಸಿ ಮುಗಿಸಿದರು. 8ನೇ ತರಗತಿಯಿಂದಲೇ ಉನ್ನತ ಶಿಕ್ಷಣದ ಕನಸು ಕಂಡಿದ್ದ ಇವರು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸುವ ಅಂತರರಾಷ್ಟ್ರೀಯ ಪರೀಕ್ಷೆ ಬರೆದು ‘ಅಡ್ವಾನ್ಸ್ಡ್ ಕಾಂಪಿಟಿಷನ್ ನ್ಯೂರೋಸೈನ್ಸ್ ಮತ್ತು ಇನ್ಫರ್ಮೇಷನ್ ಸಿಸ್ಟಮ್ಸ್’ ಕೋರ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಸಾಧನೆಗೆ ಎದುರಾದ ಬಡತನದ ತಡೆಗೋಡೆ:

ವಿಶ್ವವಿದ್ಯಾನಿಲಯವು ಫಾತಿಮಾಗೆ ರೂ. 1.50 ಕೋಟಿ ವಿದ್ಯಾರ್ಥಿವೇತನವನ್ನು ನೀಡಿದೆ. ಆದಾಗ್ಯೂ, ಪ್ರತಿ ವರ್ಷ ಅಲ್ಲಿ ವ್ಯಾಸಂಗ ಮಾಡಲು ಕನಿಷ್ಠ 35 ರಿಂದ 40 ಲಕ್ಷ ರೂ. ವೆಚ್ಚವಾಗಲಿದ್ದು, ಒಟ್ಟಾರೆಯಾಗಿ ರೂ. 1 ಕೋಟಿಗೂ ಹೆಚ್ಚು ಹಣದ ಅಗತ್ಯವಿದೆ. ಅಲ್ಲದೆ, ವೀಸಾ ಪ್ರಕ್ರಿಯೆಗಾಗಿ ಬ್ಯಾಂಕ್‌ನಲ್ಲಿ ಕನಿಷ್ಠ 35 ಲಕ್ಷ ರೂ. ಠೇವಣಿ ಇಡಬೇಕಾಗಿದೆ. ಮಧ್ಯಮ ವರ್ಗದ ಕುಟುಂಬದ ಪೋಷಕರಿಗೆ ಈ ಮೊತ್ತವನ್ನು ಸಂಗ್ರಹಿಸುವುದು ಸವಾಲಾಗಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಸರ್ಕಾರದ ಬಾಗಿಲು ತಟ್ಟಿದ ವಿದ್ಯಾರ್ಥಿನಿ:

ಸ್ಥಳೀಯ ಕಾರ್ಪೊರೇಟರ್ ಮತ್ತು ಗುಂತಕಲ್ ಶಾಸಕರ ಸಹಾಯದಿಂದ ಫಾತಿಮಾ ಕುಟುಂಬವು ಇತ್ತೀಚೆಗೆ ರಾಜ್ಯ ಶಿಕ್ಷಣ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಸಚಿವ ನಾರಾ ಲೋಕೇಶ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯ ವಿದೇಶಿ ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮಯದ ಅಭಾವ ಹಾಗೂ ನೆರವಿನ ನಿರೀಕ್ಷೆ:

ವೀಸಾ ಪ್ರಕ್ರಿಯೆ ಮತ್ತು ಹಣಕಾಸಿನ ದಾಖಲೆಗಳನ್ನು ಪೂರ್ಣಗೊಳಿಸಲು ಈ ತಿಂಗಳ 25 ರವರೆಗೆ ಮಾತ್ರ ಕಾಲಾವಕಾಶವಿದೆ. ಕೇವಲ ನಾಲ್ಕು ದಿನಗಳು ಬಾಕಿ ಇರುವುದರಿಂದ ಸಮಯಕ್ಕೆ ಸರಿಯಾಗಿ ನೆರವು ಸಿಗದಿದ್ದರೆ ಈ ಅಪರೂಪದ ಅವಕಾಶ ಕೈತಪ್ಪುವ ಭೀತಿ ಎದುರಾಗಿದೆ. ಅಬ್ದುಲ್ ಕಲಾಂ ಅವರ ಮಾತುಗಳಿಂದ ಪ್ರೇರಿತರಾಗಿ ಸಾಧನೆ ಮಾಡಿದ ಫಾತಿಮಾಗೆ ಸರ್ಕಾರ ಅಥವಾ ಸ್ವಯಂಸೇವಾ ಸಂಸ್ಥೆಗಳು ತ್ವರಿತವಾಗಿ ಆರ್ಥಿಕ ನೆರವು ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us