ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಸರ್ಕಾರ: ಅನಧಿಕೃತ ಕೋಚಿಂಗ್ ಸೆಂಟರ್ ದಂಧೆಗೆ ಬ್ರೇಕ್

ಕರ್ನಾಟಕ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ತರಲು ಮುಂದಾಗಿದೆ. ಆ ಮೂಲಕ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ, ಪಠ್ಯಕ್ರಮ ಹಾಗೂ ಪರೀಕ್ಷಾ ಕ್ರಮದಲ್ಲಿ ಬದಲಾವಣೆ ಮತ್ತು ಅನಧಿಕೃತ ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕೆ ಮುಂದಾಗಿದೆ. ಶಿಕ್ಷಣ ಸುಧಾರಣಾ ಉಪ ಸಮಿತಿಯು ಶಿಕ್ಷಣ ತಜ್ಞರು, ಪೋಷಕರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಸರ್ಕಾರ: ಅನಧಿಕೃತ ಕೋಚಿಂಗ್ ಸೆಂಟರ್ ದಂಧೆಗೆ ಬ್ರೇಕ್
ಪ್ರಾತಿನಿಧಿಕ ಚಿತ್ರ
Image Credit source: google
Edited By:

Updated on: Sep 13, 2026 | 11:05 PM

ಬೆಂಗಳೂರು, ಸೆಪ್ಟೆಂಬರ್​​ 13: ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದಿಂದ ಹಿಡಿದು ಪಠ್ಯಕ್ರಮ ಬದಲಾವಣೆ, ಪರೀಕ್ಷಾ ಕ್ರಮ ಬದಲಾವಣೆವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ರಚನೆಯಾಗಿರುವ ಶಿಕ್ಷಣ ಸುಧಾರಣಾ ಉಪಸಮಿತಿ ಇದೀಗ ಶಿಕ್ಷಣ ತಜ್ಞರು, ಪೋಷಕರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಅದರಲ್ಲೂ ನೋಂದಣಿ ಇಲ್ಲದೆ ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕಲು, ಶಾಲಾ ಸಮಯದಲ್ಲೇ ಕೋಚಿಂಗ್ ನಡೆಸುವುದಕ್ಕೆ ಬ್ರೇಕ್ ಹಾಕುವುದು ಸೇರಿದಂತೆ ಹಲವು ನಿಯಮಗಳ ಬಗ್ಗೆ ಜನರ ಅಭಿಪ್ರಾಯ ಕೇಳಲಾಗುತ್ತಿದೆ.

ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗೆ ಬ್ರೇಕ್ ಹಾಕಲು ಸಮಿತಿ ಸಜ್ಜು

ಟ್ಯುಟೋರಿಯಲ್ಸ್​, ಅಕಾಡೆಮಿ, ಸ್ಟಡಿ ಸೆಂಟರ್ ಎನ್ನುವ ಹೆಸರಿನಲ್ಲಿ ರಾಜ್ಯಾದ್ಯಂತ ನಾಯಿಕೊಡೆಗಳಂತೆ ಕೋಚಿಂಗ್ ಸೆಂಟರ್‌ಗಳು ತಲೆ ಎತ್ತಿವೆ. ಒಂದರಿಂದ 12ನೇ ತರಗತಿ ಮಕ್ಕಳಿಂದ ಹಿಡಿದು CET, NEET, JEE ಆಕಾಂಕ್ಷಿಗಳವರೆಗೆ ತರಬೇತಿ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಬಹುತೇಕ ಕೋಚಿಂಗ್ ಸೆಂಟರ್‌ಗಳಿಗೆ ನೋಂದಣಿ ಇದೆಯಾ, ಸರ್ಕಾರದ ಅನುಮತಿ ಪಡೆದಿದ್ದಾರಾ, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ವ್ಯವಸ್ಥೆ ಇಲ್ಲ.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ!

ಈ ಬಗ್ಗೆ ಕಾನೂನ ಕ್ರಮಕ್ಕೆ ತಜ್ಞರು, ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸರ್ಕಾರ ಮುಂದಾಗಿದೆ. ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ, ಪಠ್ಯಕ್ರಮ ಹಾಗೂ ಪರೀಕ್ಷಾ ವ್ಯವಸ್ಥೆ ಬದಲಾವಣೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ವಿಚಾರಗಳ ಬಗ್ಗೆ ಸಮಿತಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕೂ ಸಾರ್ವಜನಿಕರು ಹಾಗೂ ಶಿಕ್ಷಣ ತಜ್ಞರಿಂದ ಸಲಹೆ ಪಡೆಯಲು ಮುಂದಾಗಿದೆ.

ಸುರಕ್ಷತೆ, ಅರ್ಹತೆ ಮತ್ತು ಶುಲ್ಕ ನಿಯಮಗಳ ಕುರಿತು ಜನಾಭಿಪ್ರಾಯ

ಕೋಚಿಂಗ್ ಸೆಂಟರ್‌ಗಳಿಗೆ ಕಡ್ಡಾಯ ನೋಂದಣಿ ಜಾರಿಗೊಳಿಸಬೇಕೆ? ಕಟ್ಟಡ ಹಾಗೂ ಅಗ್ನಿ ಸುರಕ್ಷತಾ (ಫೈರ್ ಸೇಫ್ಟಿ) ನಿಯಮಗಳನ್ನು ಕಡ್ಡಾಯಗೊಳಿಸಬೇಕೆ? ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ವಿಧಿಸಬೇಕೆ? ಮತ್ತು ಶಾಲಾ ಅವಧಿಯಲ್ಲೇ ಸಮಾನಾಂತರವಾಗಿ ಕೋಚಿಂಗ್ ನಡೆಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಬೇಕೆ ಎಂಬ ಪ್ರಮುಖ ವಿಚಾರಗಳ ಕುರಿತು ಸಮಿತಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದರ ಜೊತೆಗೆ ಕೋಚಿಂಗ್ ಶಿಕ್ಷಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ನಿಗದಿ, ಶುಲ್ಕಕ್ಕೆ ಕಡ್ಡಾಯ ರಸೀದಿ ನೀಡುವುದು, ಶುಲ್ಕ ಮರುಪಾವತಿ (ರೀಫಂಡ್) ನಿಯಮ ಹಾಗೂ ದಾರಿ ತಪ್ಪಿಸುವ ಸುಳ್ಳು ಜಾಹೀರಾತುಗಳಿಗೆ ಕಡಿವಾಣ ಹಾಕುವ ಬಗ್ಗೆಯೂ ಜನರ ಸಲಹೆಗಳನ್ನು ಪಡೆಯಲಾಗುತ್ತಿದೆ.

ಪಠ್ಯಕ್ರಮ ಬದಲಾವಣೆ, ಖಾಸಗಿ ಶಾಲೆಗಳ ಶುಲ್ಕಕ್ಕೂ ನಿಯಂತ್ರಣ

ಕೇವಲ ಕೋಚಿಂಗ್ ಸೆಂಟರ್‌ಗಳು ಮಾತ್ರವಲ್ಲದೆ, ಖಾಸಗಿ ಶಾಲೆಗಳ ಅತಿಯಾದ ಶುಲ್ಕ ನಿಯಂತ್ರಣ, ಶಾಲೆಗಳಲ್ಲಿ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಯ ಮಿತಿ, ಪ್ರಸ್ತುತ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆ ಹಾಗೂ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲೂ ಸಮಿತಿ ಅಭಿಪ್ರಾಯಗಳನ್ನು ಕಲೆಹಾಕುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ವರ್ಷಗಳಿಂದ ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ.

ಸರ್ಕಾರಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಕೆ

ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಇಲಾಖೆಯು ಸುಧಾರಣೆಗೆ ಮುಂದಾಗಿದ್ದು, ಪೋಷಕರು, ಸಾರ್ವಜನಿಕರು ಹಾಗೂ ವಿಷಯ ತಜ್ಞರಿಂದ ಬರುವ ಎಲ್ಲಾ ಸಲಹೆ-ಸೂಚನೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಶಿಕ್ಷಣ ಸುಧಾರಣಾ ಉಪ ಸಮಿತಿಯು ಸರ್ಕಾರಕ್ಕೆ ಸಮಗ್ರ ಶಿಫಾರಸು ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ನೂತನ ಕಾನೂನು ಹಾಗೂ ನಿಯಮಾವಳಿಗಳು ಜಾರಿಗೆ ಬರಲಿವೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us